ಕೋರ್ಟ್‌ನಲ್ಲಿರೋ ಕೇಸ್‌ ಇತ್ಯರ್ಥಕ್ಕೆ ಜುಲೈ 8ರಂದು ಅದಾಲತ್‌ ಏರ್ಪಡಿಸಿದ ನ್ಯಾಯಾಲಯ

By Sathish Kumar KH  |  First Published Jun 15, 2023, 10:43 PM IST

ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 8 ರಂದು ಲೋಕ್ ಅದಾಲತ್‌ ಆಯೋಜಿಸಲಾಗಿದೆ.


ದಾವಣಗೆರೆ (ಜೂ.15): ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 8 ರಂದು ರಾಷ್ಟ್ರೀಯ ಲೋಕ್ ಅದಾಲತ್‌ ಆಯೋಜಿಸಲಾಗಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂನ್ 13ರವರೆಗೆ ಜಿಲ್ಲೆಯಲ್ಲಿ ಒಟ್ಟು 35,787 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ಅತಿ ಹೆಚ್ಚು ರಾಜೀಯಾಗಬಲ್ಲ ಸುಮಾರು 30 ಸಾವಿರಗಳಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ. ಅದರಂತೆ ವ್ಯಾಜ್ಯಪೂರ್ವ ಪ್ರಕರಣಗಳನ್ನು ಕೂಡ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. 

Latest Videos

undefined

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಗ್ಗಿಸಿದ ಚಿತ್ರದುರ್ಗ ಪೊಲೀಸರು: ಸಿಸಿಟಿವಿ ಪ್ರಯೋಗ ಯಶಸ್ವಿ

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸಹಕಾರ ಕೋರಿ ಈಗಾಗಲೇ ಎಲ್ಲಾ ವಕೀಲರ ಸಂಘಗಳು, ಪೋಲಿಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬ್ಯಾಂಕ್ ಮತ್ತು ಇನ್ನಿತರ ಹಣಕಾಸಿನ ಸಂಸ್ಥೆಗಳು, ವಿಮಾ ಕಂಪನಿಗಳು, ಭೂ ಸ್ವಾಧೀನಾಧಿಕಾರಿಗಳು ಹಾಗೂ ಇತರೆಎಲ್ಲರಿಗೂ ಕೂಡ ಪೂರ್ವ ತಯಾರಿ ಸಭೆಗಳನ್ನು ನಡೆಸಿದ್ದು, ಈ ಬಗ್ಗೆ ಎಲ್ಲಾ ಮೂಲಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ರಾಜಿಯಾಗಬಲ್ಲ ಎಲ್ಲಾ ಸಿವಿಲ್‌ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇಧನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ, ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಕರೆಂಟ್‌ ಬಿಲ್‌ ಕೊಡಿ ಅಂದ್ರೆ, ಮನೆಯನ್ನೇ ಕಟ್ಟೋವಷ್ಟು ಬಿಲ್‌ ಕೊಟ್ಟ ಮೆಸ್ಕಾಂ! ಗಾಬರಿಗೊಂಡ ಮಾಲೀಕ

ಸಾರ್ವಜನಿಕರು ರಾಷ್ಟ್ರೀಯ ಲೋಕ್‌ ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ: ಹಳೆಯ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಇವರ ದೂರವಾಣಿ ಸಂಖ್ಯೆ: 08192-296364, ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ ದೂರವಾಣಿ ಸಂಖ್ಯೆ: 08192-296885, ಪೊನ್ನಾಳಿ ದೂರವಾಣಿ ಸಂಖ್ಯೆ: 08188- 251732, ಚನ್ನಗಿರಿ ದೂರವಾಣಿ ಸಂಖ್ಯೆ 08189-229195 ಮತ್ತು ಜಗಳೂರು ದೂರವಾಣಿ ಸಂಖ್ಯೆ: 08196-227600 ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ನ್ಯಾಯಾಧೀಶರಾದ ಮಹಾವೀರ ಎಂ.ಕರೆಣ್ಣವರ್, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಎ.ಎಸ್.ಮಂಜುನಾಥ್, ಎಸ್.ಬಸವರಾಜ್, ಸಿಇಓ ಬಿ.ಶ್ರೀನಿವಾಸ್ ಇತರರು ಇದ್ದರು.

click me!