Chitradurga News: ಭದ್ರಾ ಕಾಲುವೆ ಅಡ್ಡಗಾಲಿಗೆ ನಾರಾಯಣಸ್ವಾಮಿ ಆಕ್ರೋಶ

By Kannadaprabha NewsFirst Published Dec 29, 2022, 12:21 AM IST
Highlights

 ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡರುಗಾಲು ಆಗಿರುವ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಬಳಿಯ 1.9 ಕಿಮೀ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಸಮಧಾನ ಹೊರ ಹಾಕಿದರು.

ಚಿತ್ರದುರ್ಗ (ಡಿ.29) : ಪೊಲೀಸ್‌ ಇಟ್ಕಂಡು ನಾನೇ ಜಾಗ ಖಾಲಿ ಮಾಡಿಸುತ್ತಿದ್ದೆ. ಆದರೆ ಸೆಂಟ್ರಲ್‌ ಮಿನಿಸ್ಟರ್‌ ಆಗಿ ಆ ಕೆಲಸ ಮಾಡಬಾರದು ಅಂತ ಸುಮ್ಮನಿದ್ದೇನೆ. ಚಿಕ್ಕಮಗಳೂರು ಡಿಸಿ, ಎಸ್ಪಿ ಏನೂ ಸಪೋರ್ಚ್‌ ಮಾಡ್ತಿಲ್ಲ. ಭದ್ರಾ ಮೇಲ್ದಂಡೆ ಕಾಮಗಾರಿಗೆ ತೊಡರುಗಾಲು ಆಗಿರುವ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಬಳಿಯ 1.9 ಕಿಮೀ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಸಮಧಾನ ಹೊರ ಹಾಕಿದ ಬಗೆಯಿದು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ(ದಿಶಾ) ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಕಾಲುವೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ರೈತರಿಗೆ ತೊಂದರೆ ಆಗದಂತೆ ನಾನೇ ವ್ಯವಸ್ಥೆ ಮಾಡಿದ್ದೆ. ಒಪ್ಪಿಕೊಂಡು ನಂತರ ಕೋರ್ಚ್‌ಗೆ ಹೋಗಿದ್ದಾರೆ. ಮೂರ್ನಾಲ್ಕು ಮಂದಿ ರೈತರು ಇಡೀ ಯೋಜನೆಗೆ ತೊಂದರೆ ಮಾಡಿದರೆ ಹೇಗೆಂದು ಪ್ರಶ್ನಿಸಿದರು.

ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಭದ್ರಾ ಮೇಲ್ದಂಡೆ ಘೋಷಣೆಗೆ ಕೇಂದ್ರ ಸಂಪುಟ ಅ‌ನುಮೋದನೆ ಬಾಕಿ -ಸಿಎಂ

ಭೂ ಸ್ವಾಧೀನ ಮುಗಿದಿದೆ. ಅಲ್ಲದೇ ರೈತರು ಹಣವನ್ನು ಕೂಡಾ ಪಡೆದಿದ್ದಾರೆ. ಬೇರೆ ಯಾವ ಯೋಜನೆಯಲ್ಲೂ ಇಂತಹ ಸಮಸ್ಯೆಗಳಿಲ್ಲ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಸಮಸ್ಯೆ ಬಗೆ ಹರಿದಿಲ್ಲ. ಎಸ್ಪಿ, ಡಿಸಿ ಸೇರಿ ಇಷ್ಟೊತ್ತಿಗೆ ಭೂ ಸ್ವಾಧೀನ ಸಮಸ್ಯೆ ಬಗೆಹರಿಸಬಹುದಿತ್ತು. ಈ ಬಗ್ಗೆ ಕಂದಾಯ ಇಲಾಖೆ ಕಾರ್ಯದರ್ಶಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ವೈಂಜಕ್ಷನ್‌ ಸಮಸ್ಯೆ ಇತ್ಯರ್ಥವಾಗದಿದ್ದರೆ, ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾದರೂ ಬರದ ನಾಡಿಗೆ ಯಾವುದೇ ಉಪಯೋಗವಿಲ್ಲದಂತಾಗುತ್ತದೆ. ಭದ್ರಾ ಮೇಲ್ದಂಡೆ ಅಧಿಕಾರಿಗಳ ಜೊತೆ ಕಂದಾಯ ಇಲಾಖೆ ಅಧಿಕಾರಿಗಳು ಕೈ ಜೋಡಿಸಬೇಕೆಂದ ಹೇಳಿದರು.

ಮೆಡಿಕಲ್‌ ಕಾಲೇಜು ವಿಳಂಬಕ್ಕೆ ಅಸಮಾಧಾನ:

ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ವಿಚಾರದಲ್ಲಿ ವಿಳಂಬವಾಗುತ್ತಿರುವ ಸಂಗತಿಗೆ ಸಚಿವ ನಾರಾಯಣಸ್ವಾಮಿ ತೀವ್ರ ಅಸಮಧಾನ ಹೊರ ಹಾಕಿದರು. ಜಿಲ್ಲಾಧಿಕಾರಿ, ಜಿಲ್ಲಾ ಸರ್ಜನ್‌, ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಸೂಕ್ತ ಮಾಹಿತಿ ಇಲ್ಲದೇ ಇರವುದು ಸಚಿವರ ಆಕ್ರೋಶಕ್ಕೆ ಕಾರಣವಾಗಿತ್ತು. ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷಾಧಿಕಾರಿಯನ್ನು ನೇಮಿಸಲಾಗಿದೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಸರ್ಜನ್‌ ಡಾ.ಬಸವರಾಜ್‌ ಉತ್ತರಿಸಿದ್ದು ಸಚಿವರಿಗೆ ಸಮಾಧಾನ ತರಲಿಲ್ಲ.

ಇಂಗಳದಾಳ್‌ ಬಳಿ ಡಿಮ್‌್ಡ ಫಾರೆಸ್ಟ್‌ನಲ್ಲಿ ಡಿನೋಟಿಪೈ ಆಗಿರುವ 92 ಎಕರೆ ಜಮೀನು ಇದ್ದು, ಈ ಜಾಗವನ್ನು ಮೆಡಿಕಲ್‌ ಕಾಲೇಜಿಗೆ ಹಸ್ತಾಂತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ತಾತ್ಕಾಲಿಕವಾಗಿ ಮೆಡಿಕಲ್‌ ಕಾಲೇಜು ಪ್ರಾರಂಭಿಸಲು ಸೂಕ್ತ ಸ್ಥಳ ನಿಗಧಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ತಾಕೀತು ಮಾಡಿದರು.

ಇಚ್ಛಾಶಕ್ತಿಯಿಂದ ಕೆಲಸ ಮಾಡಿ:

ಜಿಲ್ಲಾ ಮಟ್ಟದ ಪ್ರಮುಖ ಹುದ್ದೆಗಳ ಅಲಂಕರಿಸಿರುವ ಅಧಿಕಾರಿಗಳು ಮುಂದೆ ನಿಮ್ಮ ಮೊಮ್ಮಕ್ಕಳ ಮುಂದೆ ಏನು ಹೇಳಿಕೊಳ್ಳುತ್ತೀರಾ. ನಾನು ವೈದ್ಯಾಧಿಕಾರಿಯಾಗಿದ್ದಾಗ ಮೆಡಿಕಲ್‌ ಕಾಲೇಜು ಆರಂಭಕ್ಕೆ ಶ್ರಮಿಸಿದ್ದೆ ಎಂಬ ಹೆಮ್ಮೆಗೆ ನೀವೇಕೆ ಪಾತ್ರರಾಗುತ್ತಿಲ್ಲ. ಹುಟ್ಟಿದ ನೆಲಕ್ಕೆ ಏನಾದರೂ ಮಾಡಬೇಕೆಂಬ ಇಚ್ಚಾ ಶಕ್ತಿ ಅಧಿಕಾರಿಗಳಲ್ಲಿ ಇರಬೇಕು ಎಂದರು.

ದಾವಣಗೆರೆಯಿಂದ ಭರಮಸಾಗರದವರೆಗೆ ನೇರ ರೈಲು ಮಾರ್ಗಕ್ಕೆ ಅಗತ್ಯವಿರುವ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 131 ಕೋಟಿ ರು. ಅವಶ್ಯಕತೆ ಇದೆ. ಈ ಪೈಕಿ ಈಗಾಗಲೆ ರು.71 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಫಲಕ ಅಳವಡಿಸಿ:

ಬೆಂಗಳೂರು ಕಡೆಯಿಂದ ಮತ್ತು ದಾವಣಗೆರೆಯಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶ ಮಾಡಬೇಕಾದ ಕಡೆ ಹೆದ್ದಾರಿಯಲ್ಲಿ ಸೂಕ್ತ ಮಾರ್ಗಸೂಚಿ ಫಲಕವನ್ನು ಅಳವಡಿಸದೇ ಇರುವುದರಿಂದ, ವಾಹನ ಸವಾರರು ಮುಂದೆ ಬಹುದೂರ ಸಾಗಿ, ಪುನಃ ಹಿಂದಕ್ಕೆ ಬಂದು ನಗರ ಪ್ರವೇಶಿಸುವ ಪರಿಸ್ಥಿತಿ ಇದೆ. ಇವೆಲ್ಲವನ್ನೂ ಪರಿಹರಿಸಲು ತಿಳಿಸಿದರೂ ಕ್ರಮ ಕೈಗೊಳ್ಳದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಎ. ನಾರಾಯಣಸ್ವಾಮಿ ಕಿಡಿಯಾದರು.

Chitradurga: ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸೋದಕ್ಕೆ ಕಾಡ ಸಮಿತಿ ಆಕ್ಷೇಪ!

ಅಪಘಾತಗಳನ್ನು ತಡೆಗಟ್ಟಲು ಕಪ್ಪುಚುಕ್ಕೆ ವಲಯದಲ್ಲಿ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಬೇಕು, ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರ ಕಾರ್ಯಗಳಿಗೆ ಚಾಲನೆ ನೀಡಬೇಕೆಂದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್‌.ದಿವಾಕರ, ಜಿಲ್ಲಾ ಪೊಲೀಸ್‌ ವರಿಷ್ಠಾ್ಠಧಿಕಾರಿ ಕೆ. ಪರಶುರಾಮ್‌, ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್‌.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದÜ ಅಧಿಕಾರಿಗಳು ಇದ್ದರು.

click me!