
ಬೆಂಗಳೂರು (ಜೂನ್ 10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ ಮಾಡಿದ್ದರೂ ವಾಮ ಮಾರ್ಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಮುಂದಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳ ಮೇಲೆಲ್ಲಾ ಜಾಹೀರಾತು ಪ್ರದರ್ಶನ ಮಾಡಿ ಆದಾಯ ಗಳಿಸುತ್ತಿದೆ. ಇದೇ ಮಾರ್ಗವನ್ನು ಅನುಸರಿಸಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ನಿಗಮ ನಿ. (ಬಿಎಂಆರ್‌ಸಿಎಲ್) ಕೂಡ ನಮ್ಮ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಂಟಿಸಿ ಸಂಚಾರ ಮಾಡಲು ಮುಂದಾಗಿದೆ. ಇಂದಿನಿಂದ ನಮ್ಮ ಮೆಟ್ರೋ ಹಲವು ರೈಲುಗಳ ಬಣ್ಣವೇ ಬದಲಾಗಿದ್ದು, ಸಂಪೂರ್ಣ ಜಾಹೀರಾತುಮಯ ಆಗಿವೆ.
ಬೆಂಗಳೂರು ಮೆಟ್ರೋ ರೈಲುಗಳತ್ತ ಪ್ರಯಾಣಿಕರಷ್ಟೇ ಅಲ್ಲ, ಈಗ ಜಾಹಿರಾತುದಾರರ ದೃಷ್ಟಿಯೂ ಹರಿದಿದೆ! ಬೃಹತ್ ಮಟ್ಟದ ಜಾಹಿರಾತು ಯೋಜನೆಯೊಂದಿಗೆ ನಮ್ಮ ಮೆಟ್ರೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ದಾರಿ ಹಿಡಿದಿದೆ. ಇಂದು (ಜೂನ್ 10) ರಿಂದ ‘ನಮ್ಮ ಮೆಟ್ರೋ’ಗೆ ಹೊಸ ಮುಖವೊದಗಿದೆ. ಪರ್ಪಲ್ ಲೈನ್‌ನ 33 ರೈಲುಗಳು ಮತ್ತು ಗ್ರೀನ್ ಲೈನ್‌ನ 24 ರೈಲುಗಳಿಗೆ ಬಣ್ಣ ಬಣ್ಣದ ಜಾಹಿರಾತುಗಳನ್ನು ಅಳವಡಿಸಲಾಗಿದ್ದು, ಇದರಿಂದ ಮೆಟ್ರೋ ರೈಲುಗಳ ಇಮೇಜ್‌ನಲ್ಲಿ ಹೊಸ ಮಾದರಿ ಕಂಡುಬರುತ್ತಿದೆ.
ಈ ಜಾಹಿರಾತು ಜೋಡಣೆಗೆ ಸಂಬಂಧಿಸಿದಂತೆ ಬಿಎಂಆಆರ್‌ಸಿಎಲ್ ಮುದ್ರ ಅವೆಂಚರ್ ಮತ್ತು ಲೋಕೇಶ್ ಔಟ್‌ಡೋರ್ ಸಂಸ್ಥೆಗಳ ಜೊತೆ ಒಟ್ಟು 7 ವರ್ಷಗಳ ಅವಧಿಯ ಮ್ಯೂಚುವಲ್ ಒಪ್ಪಂದ (MOE) ಮಾಡಿಕೊಂಡಿದೆ. ಪರ್ಪಲ್ ಲೈನ್‌ಗೆ ₹14 ಕೋಟಿ ಹಾಗೂ ಗ್ರೀನ್ ಲೈನ್‌ಗೆ ₹11 ಕೋಟಿಯ ಟೆಂಡರ್ ನೀಡಲಾಗಿದೆ. ಎರಡೂ ಲೈನ್‌ಗಳ ಒಟ್ಟು ಜಾಹಿರಾತು ಮೌಲ್ಯ ₹25 ಕೋಟಿಗೆ ತಲುಪಿದ್ದು, ಇದು ಬಿಎಂಆರ್‌ಸಿಎಲ್‌ಗೆ ದೊಡ್ಡ ಮಟ್ಟದ ಆದಾಯವನ್ನೇ ತಂದೆಕೊಡುವ ನಿರೀಕ್ಷೆ ಇದೆ.
ವರ್ಷಕ್ಕೊಮ್ಮೆ ಲಾಭದ ಶೇಕಡಾವಾರು ಏರಿಕೆ:
ಇದು ಮಾತ್ರವಲ್ಲದೆ, ಪ್ರತಿವರ್ಷ ಈ ಒಪ್ಪಂದದಡಿಯಲ್ಲಿ ಜಾಹಿರಾತು ಪಾವತಿಯಲ್ಲಿ 5% ಶೇಕಡಾವಾರು ಹೆಚ್ಚಳಗೊಳ್ಳಲಿದೆ. ಇದರಿಂದ ಬಿಎಂಆರ್‌ಸಿಎಲ್‌ಗಳಿಗೆ ಮುಂದಿನ ವರ್ಷಗಳಲ್ಲಿ ಬಂಡವಾಳ ಚಲಾವಣೆ ದೃಷ್ಟಿಯಿಂದ ನಿರಂತರವಾಗಿ ಹಣಕಾಸು ಹರಿವು ಸಿಗಲಿದೆ. ಮೆಟ್ರೋ ಸೇವೆಯ ವ್ಯಾಪ್ತಿ ಹೆಚ್ಚುತ್ತಿರುವ ಈ ಹಿನ್ನಲೆಯಲ್ಲಿ ಜಾಹಿರಾತುಗಳಿಂದ ಆದಾಯ ಸಂಪಾದನೆ ಎಂಬ ಮಾರ್ಗ ಬಿಎಂಆರ್‌ಸಿಎಲ್‌ಗೆ ದಿಟ್ಟ ಹೆಜ್ಜೆಯಾಗಿದ್ದು, ಇದು ಬೆಂಗಳೂರು ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಯುಗವನ್ನೇ ಹುಟ್ಟುಹಾಕುವ ಸಾಧ್ಯತೆ ಇದೆ.