
ಬೆಂಗಳೂರು(ಆ.18): ಕೋವಿಡ್ ವೇಳೆ ಜಾರಿ ಮಾಡಿದ್ದ ಲಾಕ್‌ಡೌನ್ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ನಷ್ಟದಲ್ಲಿದ್ದ ಬೆಂಗಳೂರು ಮೆಟ್ರೋ ನಿಗಮ 2022-23ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ 12 ಲಕ್ಷ ಲಾಭ ಗಳಿಸಿದೆ. ಬಹುತೇಕ ಕೊರೋನಾ ಆತಂಕ ಕಡಿಮೆಯಾಗಿರುವುದು, ಶಾಲಾ ಕಾಲೇಜುಗಳು, ಆರ್ಥಿಕ ಚಟುವಟಿಕೆಗಳು ಕೋವಿಡ್ ಪೂರ್ವ ಸ್ಥಿತಿಗೆ ಬಂದಿರುವುದು, ಮನೆಯಿಂದ ಕೆಲಸದ ಬದಲು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ. ಇದರ ಒಟ್ಟಾರೆ ಪರಿಣಾಮ ನಿಗಮದ ಆದಾಯ ಹೆಚ್ಚಾಗುತ್ತಿದ್ದು, ಲಾಭದತ್ತ ಸಾಗುತ್ತಿದೆ.
ಕಳೆದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ ಮೆಟ್ರೋ ತನ್ನ ಕಾರ್ಯಾಚರಣೆಯಿಂದ .98.85 ಕೋಟಿ ಆದಾಯ ಗಳಿಸಿದೆ. ಇದರಲ್ಲಿ ಕಾರ್ಯಾಚರಣೆ ವೆಚ್ಚ, ನಿರ್ವಹಣಾ ವೆಚ್ಚ ಮುಂತಾದವನ್ನು ಕಳೆದು .12 ಲಕ್ಷ ಆದಾಯವನ್ನು ಮೆಟ್ರೋ ನಿಗಮ ಗಳಿಸಿದೆ. ಏಪ್ರಿಲ್‌ನಲ್ಲಿ .1.09 ಕೋಟಿ, ಮೇ ತಿಂಗಳಲ್ಲಿ .1.26 ಕೋಟಿ ಮತ್ತು ಜೂನ್‌ನಲ್ಲಿ .1.38 ಕೋಟಿ ಪ್ರಯಾಣಿಕರು ಮೆಟ್ರೋ ಸೇವೆ ಬಳಸಿದ್ದಾರೆ. ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು, ಮೆಟ್ರೋ ನಿಗಮಕ್ಕೆ ತುಸು ಚೇತರಿಕೆ ನೀಡಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಂದೇ ದಿನ ಕೋಟಿ ಕೋಟಿ ಆದಾಯ : ದಾಖಲೆ ಬರೆದ ನಮ್ಮ ಮೆಟ್ರೋ
ಈ ಹಿಂದಿನ ತ್ರೈಮಾಸಿಕವಾದ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಒಟ್ಟು .70 ಕೋಟಿ ಕಾರ್ಯಾಚರಣಾ ಆದಾಯವನ್ನು ಮೆಟ್ರೋ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಮೆಟ್ರೋದ ಆದಾಯದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಮೆಟ್ರೋ ಕೇವಲ .193 ಕೋಟಿ ಆದಾಯ ಗಳಿಸಿತ್ತು. ಆದರೆ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ವೆಚ್ಚ .221.64 ಕೋಟಿ ತಲುಪಿತ್ತು. ಇದರಿಂದಾಗಿ .28 ಕೋಟಿ ನಷ್ಟ ಅನುಭವಿಸಿತ್ತು.