ಅಕ್ರಮ ಗಣಿಗಾರಿಕೆಯಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಲಿವೆಯಂತೆ. ಹೀಗೊಂದು ಆಶೀರ್ವಚನ ರೆಡ್ಡಿಗೆ ಸಿಕ್ಕಿದೆ.
ಬಳ್ಳಾರಿ, (ಜೂನ್.13): ಶೀಘ್ರದಲ್ಲಿಯೇ ಗಾಲಿ ಜನಾರ್ದನ ರೆಡ್ಡಿ ಅವರ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಲಿವೆ ಎಂದು ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಅವರು ರೆಡ್ಡಿಗೆ ಆಶೀರ್ವಚನದ ಮೂಲಕ ಅಭಯ ನೀಡಿದ್ದಾರೆ.
ಇಲ್ಲಿನ ಜನಾರ್ದನ ರೆಡ್ಡಿ ನಿವಾಸಕ್ಕೆ ಬುಧವಾರ ಆಗಮಿಸಿದ್ದ ನಾಗಸಾಧು, ರೆಡ್ಡಿಯ ಜತೆ ಚರ್ಚಿಸಿದರಲ್ಲದೆ, ‘ಈಗಾಗಲೇ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗುವ ಸಮಯ ಸನ್ನಿಹಿತವಾಗಿವೆ. ಇನ್ನು ಮುಂದೆ ನಿಮಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ರೆಡ್ಡಿಗೆ ತಿಳಿಸಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್
ಸಂಡೂರು ತಾಲೂಕಿನ ದೇವರಕೊಳ್ಳದ ನಾಗಸಾಧು, ವರ್ಷದಲ್ಲಿ ಆರು ತಿಂಗಳು ಮಾತ್ರ ಮಾತನಾಡಲಿದ್ದು, ಇನ್ನುಳಿದ ಆರು ತಿಂಗಳು ಮೌನವ್ರತ ಆಚರಣೆ ಮಾಡವರು.
ಜೂ.16 ರಂದು ನಾಗಸಾಧು ನಡೆಸುವ ಹೊಸಪೇಟೆ ತಾಲೂಕಿನ ಸಂಕ್ಲಾಪುರದಲ್ಲಿರುವ ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿಯನ್ನು ಆಹ್ವಾನಿಸಲು ಆಗಮಿಸಿದ್ದರು. ಇದೇ ವೇಳೆ ನಾಗಸಾಧು ಅವರ ಜೊತೆ ಕೆಲ ಹೊತ್ತು ಚರ್ಚಿಸಿದರು.
ಆಸ್ಪತ್ರೆ ಪ್ರಾರಂಭಿಸಿ ಎಂದು ಕೈಮುಗಿದ ರೆಡ್ಡಿ
ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ 2 ವಾರಗಳ ಕಾಲ ಬಳ್ಳಾರಿಯಲ್ಲಿರುವ ರೆಡ್ಡಿ, ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಿದ್ದೆವು. ಸಿವಿಲ್ ವರ್ಕ್ ಮುಗಿದಿದೆ. ಆದರೂ ಆಸ್ಪತ್ರೆ ಉದ್ಘಾಟನೆ ಮಾಡುತ್ತಿಲ್ಲ. ಸಚಿವ ಡಿಕೆಶಿ ಮತ್ತು ಶಾಸಕ ತುಕಾರಾಂ ಅವರಿಗೆ ಕೈ ಮುಗಿಯುತ್ತೇನೆ. ಕೂಡಲೇ ಆಸ್ಪತ್ರೆ ಪ್ರಾರಂಭಿಸಿ. ಈ ರೀತಿಯಾದಾಗ ಬಹಳ ದುಃಖ ಆಗುತ್ತದೆ. ಆಸ್ಪತ್ರೆ ಉದ್ಘಾಟನೆ ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.