ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ದಂಪತಿ ಲೋಕೇಶ್, ಕೌಸಲ್ಯ ಸಾವಿಗೆ ಶರಣು| ಕೌಸಲ್ಯ ಜತೆಗಿದ್ದ ಫೋಟೋಗಳನ್ನ ಪತಿಗೆ ಕಳುಹಿಸಿದ್ದ ಆರೋಪಿ| ರೊಚ್ಚಿಗೆದ್ದ ಗ್ರಾಮಸ್ಥರಿಂದ ತ್ಯಾಗರಾಜ್ ಮನೆಗೆ ಬೆಂಕಿ| ಆರೋಪಿ ತ್ಯಾಗರಾಜ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು| ಈ ಬೆನ್ನಲ್ಲೇ ಆರೋಪಿ ಮೈಸೂರಿನಲ್ಲೇ ತ್ಯಾಗರಾಜ ಆತ್ಮಹತ್ಯೆಗೆ ಯತ್ನ
ರಾಮನಗರ[ಜೂ.13]: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಮರ್ಯಾದೆಗೆ ಅಂಜಿ ಲೋಕೇಶ್, ಕೌಸಲ್ಯ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. ಆದರೀಗ ಆತ್ಮಹತ್ಯೆಗೆ ಕಾರಣಕರ್ತನಾದ ತ್ಯಾಗರಾಜ್ ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹೌದು, ಚನ್ನಪಟ್ಟಣದ ಸಾದರಹಳ್ಳಿ ಗ್ರಾಮದಲ್ಲಿ ದಂಪತಿ ಲೋಕೇಶ್, ಕೌಸಲ್ಯ ಸಾವಿಗೆ ಶರಣಾಗಿದ್ದರು. ಅದೇ ಗ್ರಾಮದ ತ್ಯಾಗರಾಜ್ ಎಂಬಾತ ಸಮ್ಮೋಹನ ವಿದ್ಯೆ ಬಳಸಿ ಗೃಹಿಣಿಯಾಗಿದ್ದ ಕೌಸಲ್ಯರನ್ನು ತನ್ನೊಂದಿಗೆ ಕರೆದೊಯ್ದಿದ್ದ. ತ್ಯಾಗರಾಜ್ ಜೊತೆ ಹೋಗಿದ್ದ ಕೌಸಲ್ಯ ಒಂದೇ ದಿನದಲ್ಲಿ ಮರಳಿ ಮನೆಗೆ ಬಂದಿದ್ದರು. ಪತ್ನಿಯನ್ನು ಕ್ಷಮಿಸಿದ್ದ ಗಂಡ ಲೋಕೇಶ್ ಹೊಸದಾಗಿ ಜೀವನ ಆರಂಭಿಸಲು ನಿರ್ಧರಿಸಿದ್ದರು.
ಇಷ್ಟಾದರೂ ಸುಮ್ಮನಾಗದ ತ್ಯಾಗರಾಜ್ ಕೌಸಲ್ಯ ಜೊತೆ ತಾನು ತೆಗೆಸಿಕೊಂಡಿದ್ದ ಫೋಟೋಗಳನ್ನು ಪತಿ ಲೋಕೇಶ್ ಗೆ ಕಳುಹಿಸಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಇದರಿಂದ ಮರ್ಯಾದೆಗೆ ಅಂಜಿದ ದಂಪತಿ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದರು. ಆದರೆ ಈ ಸಾವಿನಿಂದ ಕುಪಿತಗೊಂಡ ಗ್ರಾಮಸ್ಥರು ತ್ಯಾಗರಾಜ್ ಮನೆ, ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಬಳಿಕ ಸ್ಥಳಕ್ಕಾಗಮಿಸಿದ್ದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದರು.
ಘಟನೆಯ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದು ಆರೋಪಿ ತ್ಯಾಗರಾಜ್ ಗಾಗಿ ಹುಡುಕಾಟ ಆರಂಭಿಸಿದ್ದರು. ಇದರಿಂದ ಭಯಬಿದ್ದ ತ್ಯಾಗರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಮೈಸೂರಿನ ಕೊಲಂಬಿಯಾ ಏಶಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.