
ಬೆಂಗಳೂರು(ನ.13): ನಗರದ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಭಾರೀ ಸಂಖ್ಯೆಯಲ್ಲಿ ಜನರು ಗುಂಪುಗೂಡಿದರೆ ಕೊರೋನಾ ಸೋಂಕು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಈ ರಸ್ತೆಗಳಲ್ಲಿ ಸಂಭ್ರಮಾಚರಣೆಗೆ ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಭ್ರಮಾಚರಣೆಗಿಂತ ಜೀವನ ಮುಖ್ಯವಾಗುತ್ತದೆ. ಈ ಹಿಂದೆಯೂ ಅನೇಕ ಹಬ್ಬಗಳ ಆಚರಣೆ ವೇಳೆ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ತಡೆ ಹಾಕುವುದು ಒಳ್ಳೆಯದು. ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡಿದರೆ ಸೋಂಕು ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದರು.
ನಗರದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಅಂತೆಯೆ ಚಳಿಗಾಲವೂ ಆರಂಭವಾಗಿರುವುದರಿಂದ ಸೋಂಕು ಹರಡುವ ಭೀತಿಯಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ಬಾರಿ ಮನೆಗಳಲ್ಲೇ ಸರಳವಾಗಿ ಹೊಸವರ್ಷದ ಸಂಭ್ರಮಾಚರಣೆ ಮಾಡಿ ಎಂಬುದು ನಮ್ಮ ಸಲಹೆಯಾಗಿದೆ ಎಂದು ಹೇಳಿದರು.
ನ್ಯೂ ಇಯರ್ ಪಾರ್ಟಿಗಳ ಬಗ್ಗೆ ಶೀಘ್ರ ತೀರ್ಮಾನ
ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಅನುಮತಿ ನೀಡಬೇಕೇ ಅಥವಾ ನಿಷೇಧ ಹೇರಬೇಕೇ ಎಂಬ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು. ವಿಧಾನಸೌಧ ಮುಂಭಾಗ ಗುರುವಾರ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ‘ಸುರಕ್ಷಿತ ಹಸಿರು ದೀಪಾವಳಿ’ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.
ಕೊರೋನಾ ಹಿನ್ನೆಲೆಯಲ್ಲಿ ವರ್ಷಾಚರಣೆ ಅಗತ್ಯವೇ ಎಂಬ ಪ್ರಶ್ನೆಯಾಗಿದೆ. ಸಂಭ್ರಮಾಚರಣೆಗೆ ನಿರ್ಬಂಧ ಹೇರುವ ಯಾವುದೇ ತೀರ್ಮಾನಕ್ಕೆ ಸರ್ಕಾರ ಇದುವರೆಗೆ ಬಂದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಲಾಗುತ್ತದೆ ಎಂದು ತಿಳಿಸಿದರು.
ಎಂಜಿ, ಬ್ರಿಗೇಡ್ ರಸ್ತೆಯಲ್ಲಿನ್ನು ಹೊಸ ವರ್ಷಾಚರಣೆಗೆ ನಿಷೇಧ?
ಡಿಕೆಶಿ ಮನೆಯಲ್ಲಿ ಸಂಪತ್‌ರಾಜ್:
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್‌ರಾಜ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಯಲ್ಲಿದ್ದರೆ ಪೊಲೀಸರಿಗೆ ಒಪ್ಪಿಸಲಿ. ತಲೆಮರೆಸಿಕೊಂಡಿರುವ ಸಂಪತ್ ರಾಜ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾಜಿ ಮೇಯರ್ ವಿರುದ್ಧ ಲುಕ್‌ಔಟ್ ನೋಟಿಸ್ ಸಹ ಜಾರಿಗೊಳಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.
ಕೊರೋನಾ ಹಿನ್ನೆಲೆಯಲ್ಲಿ ಹಸಿರು ದೀಪಾವಳಿ ಆಚರಣೆಗೆ ಸರ್ಕಾರ ಸೂಚಿಸಿದೆ. ಪರಿಸರ ಸ್ವಚ್ಛತೆ ಹಾಗೂ ಜನರ ಆರೋಗ್ಯ ದೃಷ್ಟಿಯಿಂದ ಜನರು ಜಾಗೃತರಾಗಬೇಕು. ಹಸಿರು ಪಟಾಕಿಗಳು ಮಾತ್ರ ಬಳಸಬೇಕು. ಈ ಬಗ್ಗೆ ಅರಿವು ಮೂಡಿಸಲು ಅಗ್ನಿಶಾಮಕ ದಳ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಡಿಜಿಪಿ ಅಮರ್ ಕುಮಾರ್ ಪಾಂಡೆ ಹಾಗೂ ಡಿಐಜಿ ಬಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.