
ಬಸವರಾಜ ಎಂ.ಕಟ್ಟಿಮನಿ
ಹುಣಸಗಿ (ಯಾದಗಿರಿ ಜಿಲ್ಲೆ): ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದಂತೆ ತಡೆದು, ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೂ ತಲಾ 2 ಸಾವಿರ ಠೇವಣಿ ಮಾಡಿಸಲು ಮುಂದಾಗಿದ್ದಾರೆ. ತಾಲೂಕಿನ ಚೆನ್ನೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಮೇಶ ಅಂಗಡಿ ಅವರು 2002 ರಲ್ಲಿ ಶಿಕ್ಷಕರಾಗಿ ನೇಮಕವಾಗಿ 7 ವರ್ಷ ಗೆದ್ದಲಮರಿ ಹಾಗೂ15 ವರ್ಷ ಹೆಬ್ಬಾಳ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಚನ್ನೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಸ್ವಂತ ಹಣದಿಂದ ತಮ್ಮ ಸಹೋದರರಾದ ಶಿವಶರಣಪ್ಪ ಅಂಗಡಿ ಅವರ ಸ್ಮರಣಾರ್ಥವಾಗಿ ₹2 ಸಾವಿರ 5 ವರ್ಷದವರೆಗೆ ಬ್ಯಾಂಕಿನಲ್ಲಿ ವಿದ್ಯಾರ್ಥಿ ಹಾಗೂ ಪಾಲಕರ ಜಂಟಿ ಶಾಖೆಯೊಂದಿಗೆ ಠೇವಣಿ ಮಾಡಲು ಮುಂದಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಮಕ್ಕಳ ಶಿಕ್ಷಣದ ಭದ್ರತೆ ಒದಗಿಸುವುದು, ಮಕ್ಕಳಲ್ಲಿ ಉಳಿತಾಯ ಮನೋಭಾವನೆ ಮೂಡಿಸುವುದು, ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕುವುದು ಇದರ ಮುಖ್ಯ ಉದ್ದೇಶ ಎಂದು ರಮೇಶ ಅಂಗಡಿ "ಕನ್ನಡಪ್ರಭ"ಕ್ಕೆ ತಿಳಿಸಿದರು. ಈ ಒಂದು ಲಾಭವನ್ನು ಚನ್ನೂರ ಗ್ರಾಮದ ಪಾಲಕರು ಪಡೆಯಬೇಕು. 1ನೇ ತರಗತಿಗೆ ಪ್ರವೇಶ ಪಡೆವ ವಿದ್ಯಾರ್ಥಿಗಳು ನಿಗದಿತ ಸಂಖ್ಯೆ ಇರುವದಿಲ್ಲ. ಪ್ರವೇಶ ಪಡೆವ ಎಲ್ಲಾ ಮಕ್ಕಳಿಗೂ ಠೇವಣಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಚನ್ನೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡವ 53 ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಎಲ್ಲ ವಿದ್ಯಾರ್ಥಿಗಳಿಗೆ, ಅತಿಥಿ ಶಿಕ್ಷಕರಿಗೆ ಹಾಗೂ ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿದ್ದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಾಗೂ ಅಭಿವೃದ್ಧಿಗೆ ಒತ್ತು ನೀಡುವ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸರಕಾರಿ ಶಾಲಾ ಶಿಕ್ಷಕ ರಮೇಶ ಅಂಗಡಿ ಅವರು ಸ್ವಂತ ಹಣದಿಂದ 1 ನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ನಮ್ಮ ಇಲಾಖೆ ವತಿಯಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಇಂತಹ ಸಮಾಜಿಕ ಕಳಕಳಿಯ ಕಾರ್ಯ ನಿಜಕ್ಕೂ ಹೆಮ್ಮೆ ಅನಿಸುತ್ತದೆ.
- ನಿಂಗರಾಜ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುರಪುರ.