'ಮೈಸೂರು ರೇಷ್ಮೆ ಸೀರೆಯಲ್ಲಿ ಲೋಪವಿಲ್ಲದ ಚಿನ್ನ ಬಳಕೆ'

By Kannadaprabha NewsFirst Published Mar 26, 2021, 11:22 AM IST
Highlights

ರಾಜಮನೆತನದ ಉಡುಗೆ ಮಾಡಿಸಲು ಪ್ರಾರಂಭಿಸಿದ ಕೆಎಸ್‌ಐಸಿ ಸಂಸ್ಥೆ ಸಾರ್ವಜನಿಕರಿಗೂ ಸಹ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ರೇಷ್ಮೆ ಸೀರೆಯಲ್ಲಿ ಲೋಪವಿಲ್ಲದ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ ಎಂದು  ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಗೌಡ ಹೇಳಿದರು.
 

ತುಮಕೂರು (ಮಾ.26) :  ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ರಾಜಮನೆತನದ ಉಡುಗೆ ಮಾಡಿಸಲು ಪ್ರಾರಂಭಿಸಿದ ಕೆಎಸ್‌ಐಸಿ ಸಂಸ್ಥೆ ಸಾರ್ವಜನಿಕರಿಗೂ ಸಹ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ರೇಷ್ಮೆ ಸೀರೆಯಲ್ಲಿ ಲೋಪವಿಲ್ಲದ ಚಿನ್ನವನ್ನು ಬಳಕೆ ಮಾಡುತ್ತಿರುವುದರಿಂದ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಗೌಡ ತಿಳಿಸಿದರು.

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಕೆಎಸ್‌ಐಸಿ ಮೈಸೂರ್‌ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟಿಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಇಂದಿಗೂ ಮೈಸೂರ್‌ ಸಿಲ್ಕ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ, ಈ ಭಾಗದ ಶ್ರೀಮಂತ ವರ್ಗ ಕೆಎಸ್‌ಐಸಿ ಸೀರೆಗಳನ್ನು ಕೊಂಡುಕೊಳ್ಳುತ್ತಿದ್ದು, ಗುಣಮಟ್ಟದ ನೇಯ್ಗೆಯಿಂದಾಗಿ ಐವತ್ತು ವರ್ಷಗಳಾದರೂ ಸೀರೆ ಹಾಳಾಗುವುದಿಲ್ಲ ಎನ್ನುವ ನಂಬಿಕೆ ಗ್ರಾಹಕರಲ್ಲಿ ಇದೆ ಎಂದರು.

ಮಹಾರಾಜರು ಹೇಗೆ ನೇಯ್ಗೆಯನ್ನು ಮಾಡಿಸುತ್ತಿದ್ದರೋ ಹಾಗೆಯೇ ಇಂದಿಗೂ ಕೆಎಸ್‌ಐಸಿ ಸಂಸ್ಥೆ ರೇಷ್ಮೆಯನ್ನು ನೇಯಲಾಗುತ್ತಿದೆ, ಇದರಿಂದ ಯಾವುದೇ ಖಾಸಗಿ ಸಂಸ್ಥೆಯೂ ಸಹ ನಮ್ಮ ಸಂಸ್ಥೆಯಂತೆ ಉಡುಪು ಸಿದ್ಧಪಡಿಸಲು ಸಾಧ್ಯವಿಲ್ಲ, ಕೆಎಸ್‌ಐಸಿ ಸಂಸ್ಥೆಯ ಸೀರೆ ದರ ದುಬಾರಿಯಾದರೂ ಸಹ ಮಧ್ಯಮ ವರ್ಗದ ಜನರು ಕೆಎಸ್‌ಐಸಿ ಸೀರೆ ಕೊಂಡುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ ಎಂದ ಅವರು, ವಿನೂತನ ಶೈಲಿಯಲ್ಲಿ ಎಲ್ಲ ವರ್ಗದವರಿಗೂ ಸೀರೆಯನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಾಜೂಕು ರೇಷ್ಮೆ ಸೀರೆಗಳನ್ನು ಹೇಗೆ ರಕ್ಷಿಸ್ತೀರಿ..? ಇಲ್ಲಿವೆ ಕೆಲವು ಸರಳ ಸಲಹೆಗಳು ..

ಕೆಎಸ್‌ಐಸಿ ಬರೀ ಹೆಣ್ಣು ಮಕ್ಕಳಿಗೆ ಅಷ್ಟೇ ಅಲ್ಲದೇ ಪುರುಷರಿಗೆ ಸಿಲ್ಕ್ ಶರ್ಟ್‌, ಪಂಚೆಯನ್ನು ನೇಯ್ಗೆ ಮಾಡಿಸುವ ಯೋಜನೆ ಇದ್ದು, ಎಲ್ಲ ಖಾಸಗಿ ಸಂಸ್ಥೆಯ ಪೈಪೋಟಿಯನ್ನು ಎದುರಿಸಲು ಕೆಎಸ್‌ಐಸಿ ಶಕ್ತವಾಗಿದ್ದು, ಆಧುನಿಕತೆಗೆ ತಕ್ಕಂತೆ ಗುಣಮಟ್ಟದ ವಸ್ತ್ರವನ್ನು ತಯಾರಿಸಲು ಒತ್ತು ನೀಡಲಾಗಿದ್ದು, 5 ಸಾವಿರದಿಂದಲೂ ಸೀರೆ ದೊರೆಯುವಂತೆ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿಯೂ ಕೆಎಸ್‌ಐಸಿ ಮಳಿಗೆಯನ್ನು ತೆರೆಯಲಾಗುವುದು ಎಂದು ಹೇಳಿದರು.

ಕೆಎಸ್‌ಐಸಿ ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್‌ ಮಾತನಾಡಿ ಇಂದಿನಿಂದ ಐದು ದಿನಗಳ ಕಾಲ ಮೈಸೂರ್‌ ಸಿಲ್‌್ಕ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗುತ್ತಿದ್ದು, 1500 ಕ್ಕೂ ಹೆಚ್ಚು ವೈಶಿಷ್ಟವಾದ ಸೀರೆಗಳನ್ನು ಪ್ರದರ್ಶನದಲ್ಲಿ ಇಡಲಾಗಿದ್ದು, ಕೆಎಸ್‌ಐಸಿ ರೇಷ್ಮೆ ಸೀರೆಯಲ್ಲಿ ಪರಿಶುದ್ಧ ರೇಷ್ಮೆ ಹಾಗೂ ಬೆಳ್ಳಿ, ಚಿನ್ನದ ಅಂಶವನ್ನು ನೇಯ್ಗೆಯಲ್ಲಿ ಬಳಸುವುದರಿಂದ ಎಷ್ಟೇ ವರ್ಷಗಳಾದರೂ ಹಾಳಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮುಲ್‌ ಅಧ್ಯಕ್ಷ ಮಹಾಲಿಂಗಯ್ಯ, ಕೆಎಸ್‌ಡಿಸಿ ಅಧ್ಯಕ್ಷ ಸುಧಣ್ಣ, ಇಂದಿರಾ ಮಹಿಳಾ ಕೋ ಆಪರೇಟಿವ್‌ ಅಧ್ಯಕ್ಷ ಇಂದಿರಾಕುಮಾರ್‌ ರಾಜೇಂದ್ರ, ವಿವೇಕಾನಂದಶೆಟ್ಟಿ, ರಾಮಕೃಷ್ಣ, ನರೇಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!