ಮೈಸೂರು ರಸ್ತೆಯ ಮೆಟ್ರೋ ಸೇವೆ ನಾಳೆಯಿಂದಲೇ ಶುರು

By Kannadaprabha NewsFirst Published Mar 25, 2021, 8:25 AM IST
Highlights

ಮಾಗಡಿ-ಕೆಂಗೇರಿ ಮೆಟ್ರೋ ಸಿಗ್ನಲಿಂಗ್‌ ಕಾಮಗಾರಿ ಪೂರ್ಣ| ಮಾ. 21ರಿಂದ 28ರ ವರೆಗೆ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದ ಮೆಟ್ರೋ ರೈಲು ನಿಗಮ| ನಿರೀಕ್ಷಿತ ವೇಳೆಗಿಂತಲೂ ಮೊದಲೇ ಮುಗಿದ ಸಿಗ್ನಲಿಂಗ್‌ ಕೆಲಸ| 

ಬೆಂಗಳೂರು(ಮಾ.25): ಮೆಜೆಸ್ಟಿಕ್‌ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮತ್ತು ಮೈಸೂರು ರಸ್ತೆ (ನೇರಳೆ ಮಾರ್ಗ) ನಡುವೆ ಮೆಟ್ರೋ ರೈಲು ಸೇವೆ ಮಾರ್ಚ್‌ 26ರಿಂದ ಪುನರಾರಂಭಗೊಳ್ಳಲಿದೆ ಎಂದು ಮೆಟ್ರೋ ರೈಲು ನಿಗಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್‌ ವ್ಯವಸ್ಥೆ ಮಾರ್ಪಾಡು ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸೇವೆ ಮಾರ್ಚ್‌ 21ರಿಂದ 28ರ ವರೆಗೆ ಸ್ಥಗಿತಗೊಳ್ಳಲಿದೆ ಎಂದು ಮೆಟ್ರೋ ರೈಲು ನಿಗಮ ಈ ಮೊದಲು ಹೇಳಿತ್ತು.

ಒಂದೇ ಕಾರ್ಡಲ್ಲಿ ಮೆಟ್ರೋ, ಬಿಎಂಟಿಸಿ ಬಸಲ್ಲಿ ಸಂಚರಿಸಿ

ಆದರೆ ಸಿಗ್ನಲಿಂಗ್‌ ವ್ಯವಸ್ಥೆ ಮಾರ್ಪಾಡು ಕಾಮಗಾರಿಯು ತ್ವರಿತ ಗತಿಯಲ್ಲಿ ಮುಗಿದಿರುವ ಹಿನ್ನೆಲೆಯಲ್ಲಿ ಮಾರ್ಚ್‌ 26ರ ಮುಂಜಾನೆ 7 ರಿಂದಲೇ ಈ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಓಡಾಡಲಿದೆ ಎಂದು ಮೆಟ್ರೋ ನಿಗಮ ತಿಳಿಸಿದೆ. ನಮ್ಮ ಮೆಟ್ರೋದ ರೀಚ್‌-2ರಡಿ ಬರುವ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ ಜೂನ್‌ ತಿಂಗಳಿನಲ್ಲಿ ಮೆಟ್ರೋ ಸಂಚಾರ ಸೇವೆ ಆರಂಭಿಸಲು ಮೆಟ್ರೋ ರೈಲು ನಿಗಮವು ಸಕಲ ಸಿದ್ಧತೆ ಆರಂಭಿಸಿದೆ.
 

click me!