'ನನ್ನದೇ ಹಣಕ್ಕಾಗಿ ನಾನೇಕೆ ಬೇಡಿಕೊಳ್ಳಬೇಕು?' ಬೆಂಗಳೂರಿನ ಬಾಡಿಗೆದಾರನ ಗೋಳು ವೈರಲ್

Published : Oct 18, 2026, 04:55 PM IST
Bengaluru rental deposit issue

ಸಾರಾಂಶ

Bengaluru ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವುದು ಒಂದು ಸವಾಲಾದರೆ, ಮನೆ ಖಾಲಿ ಮಾಡಿದ ಬಳಿಕ ಭದ್ರತಾ ಠೇವಣಿ (Security Deposit) ವಾಪಸ್ ಪಡೆಯುವುದು ಮತ್ತೊಂದು ದೊಡ್ಡ ತಲೆನೋವಾಗಿದೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವುದು ಒಂದು ಸವಾಲಾದರೆ, ಮನೆ ಖಾಲಿ ಮಾಡಿದ ಬಳಿಕ ಭದ್ರತಾ ಠೇವಣಿ (Security Deposit) ವಾಪಸ್ ಪಡೆಯುವುದು ಮತ್ತೊಂದು ದೊಡ್ಡ ತಲೆನೋವಾಗಿದೆ. ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿದರೂ, ಮನೆ ಖಾಲಿ ಮಾಡಿದಾಗ ತಮ್ಮದೇ ಹಣವನ್ನು ಮರಳಿ ಪಡೆಯಲು ಮನೆ ಮಾಲೀಕರ ಬಳಿ ಪದೇಪದೆ ಬೇಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೆಂಗಳೂರಿನ ಬಾಡಿಗೆದಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಈ ಅನುಭವವನ್ನು ಅವರು 'ಅವಮಾನಕರ ಆಚರಣೆ' ಎಂದು ಕರೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಮೂರು ವರ್ಷವೂ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿ!

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮನೆ ಬಾಡಿಗೆಗೆ ಪಡೆದಿದ್ದ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ತಾವು ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದ ಉತ್ತಮ ಬಾಡಿಗೆದಾರರಾಗಿದ್ದರೂ, ಮನೆ ಖಾಲಿ ಮಾಡಿದ ಬಳಿಕ ಭದ್ರತಾ ಠೇವಣಿ ಮರಳಿ ಪಡೆಯಲು ಪರದಾಡಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ. ತಮ್ಮ ಠೇವಣಿ ಹಣವನ್ನು ಹಿಂದಿರುಗಿಸುವಂತೆ ಮನೆ ಮಾಲೀಕರನ್ನು ಪದೇಪದೆ ಸಂಪರ್ಕಿಸಿದರೂ, ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲವಂತೆ.

ಕೆಲವೊಮ್ಮೆ ತಮ್ಮ ಸಂದೇಶಗಳನ್ನು ನಿರ್ಲಕ್ಷಿಸಿದರೆ, ಇನ್ನೂ ಕೆಲವೊಮ್ಮೆ ಹಣ ನೀಡಲು ವಿವಿಧ ಕಾರಣಗಳನ್ನು ಹೇಳುತ್ತಿದ್ದರು ಎಂದು ಬಾಡಿಗೆದಾರರು ದೂರಿದ್ದಾರೆ. "ಕಳೆದ ಮೂರು ವರ್ಷಗಳಿಂದ ನಾನು ಯಾವಾಗಲೂ ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದ್ದೇನೆ. ಆದರೂ ನನ್ನ ಠೇವಣಿ ಹಣವನ್ನು ವಾಪಸ್ ಪಡೆಯಲು ಮನೆ ಮಾಲೀಕರ ಹಿಂದೆ ಪದೇಪದೆ ಹೋಗಬೇಕಾಗಿದೆ" ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನನ್ನದೇ ಹಣಕ್ಕಾಗಿ ನಾನೇಕೆ ಬೇಡಿಕೊಳ್ಳಬೇಕು?'

ಮನೆ ಮಾಲೀಕರ ವರ್ತನೆಯಿಂದ ಬೇಸರಗೊಂಡ ಬಾಡಿಗೆದಾರರು, ತಮ್ಮದೇ ಹಣವನ್ನು ಮರಳಿ ಪಡೆಯಲು ಇಷ್ಟೊಂದು ಕಷ್ಟಪಡಬೇಕಾದ ಪರಿಸ್ಥಿತಿ ಅವಮಾನಕರವಾಗಿದೆ ಎಂದು ಹೇಳಿದ್ದಾರೆ. ಮನೆ ಮಾಲೀಕರು ಆರ್ಥಿಕವಾಗಿ ಅನುಕೂಲಸ್ಥರಾಗಿದ್ದರೂ, ಬಾಡಿಗೆದಾರರಿಗೆ ಸೇರಬೇಕಾದ ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ. ಈ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ನೆರವು ಪಡೆಯಲು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಠೇವಣಿ ಹಣ ಹಿಂದಿರುಗಿಸದಿದ್ದರೆ ವಕೀಲರನ್ನು ಸಂಪರ್ಕಿಸುವುದಾಗಿ ಎಚ್ಚರಿಕೆ ನೀಡಿದ್ದರು.

'ಇದು ಬೆಂಗಳೂರಿನ ಬಾಡಿಗೆದಾರರೊಬ್ಬರ ಸಮಸ್ಯೆಯಷ್ಟೇ ಅಲ್ಲ!'

ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದ್ದಂತೆ, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಭದ್ರತಾ ಠೇವಣಿ ವಾಪಸ್ ಪಡೆಯುವಾಗ ಮನೆ ಮಾಲೀಕರಿಂದ ವಿಳಂಬ ಎದುರಿಸಿರುವುದಾಗಿ ಕೆಲವರು ಹೇಳಿದ್ದಾರೆ. ಬಾಡಿಗೆದಾರರಿಗೆ ಠೇವಣಿ ಹಣ ಮರಳಿ ಪಡೆಯಲು ನೆರವಾಗುವ ಸ್ಟಾರ್ಟ್‌ಅಪ್ ಆರಂಭಿಸುವ ಆಲೋಚನೆಯನ್ನೂ ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಯಶಸ್ವಿಯಾಗಿ ಹಣ ವಾಪಸ್ ಕೊಡಿಸಿದ ಬಳಿಕ ಮಾತ್ರ ಸೇವಾ ಶುಲ್ಕ ಪಡೆಯುವ ವ್ಯವಸ್ಥೆ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬರು, ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ಸೇವೆಗಳು ನೆರವಾಗಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಮನೆ ಮಾಲೀಕರು ಹಣ ಹಿಂದಿರುಗಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದರೆ ಕಾನೂನು ಸಲಹೆ ಪಡೆಯುವುದು ಉತ್ತಮ ಎಂದು ಸೂಚಿಸಿದ್ದಾರೆ. ಕೆಲವು ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು, ಮನೆ ಮಾಲೀಕರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಠೇವಣಿ ಹಣ ವಾಪಸ್ ಸಿಕ್ಕಿತ್ತು ಎಂದು ತಿಳಿಸಿದ್ದಾರೆ.

ಕೊನೆಗೆ ಬಾಡಿಗೆದಾರನಿಗೆ ಠೇವಣಿ ಹಣ ವಾಪಸ್ ಸಿಕ್ಕಿತೇ?

ಈ ಘಟನೆಯಲ್ಲಿ ಒಂದು ಸಮಾಧಾನಕರ ಬೆಳವಣಿಗೆಯೂ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದ ಬಾಡಿಗೆದಾರರು, ಇಂಟರ್ನೆಟ್ ಬಳಕೆದಾರರ ಸಲಹೆ ಮತ್ತು ನೆರವಿನ ಬಳಿಕ ತಮ್ಮ ಠೇವಣಿ ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಅಪ್‌ಡೇಟ್ ನೀಡಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವವರು ಎದುರಿಸಬಹುದಾದ ಸಮಸ್ಯೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಬಾಡಿಗೆ ಒಪ್ಪಂದ, ಠೇವಣಿ ಮೊತ್ತ, ಮನೆ ಖಾಲಿ ಮಾಡುವ ನಿಯಮಗಳು ಮತ್ತು ಹಣ ಹಿಂದಿರುಗಿಸುವ ಗಡುವಿನ ಬಗ್ಗೆ ಸ್ಪಷ್ಟವಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಇಂತಹ ವಿವಾದಗಳನ್ನು ಎದುರಿಸಲು ಸಹಾಯಕವಾಗಬಹುದು.

PREV
Read more Articles on
click me!

Recommended Stories

Bengaluru: ನೈಸ್ ರೋಡ್‌ನಲ್ಲಿ ಹೊತ್ತಿ ಉರಿದ ಟ್ಯಾಂಕರ್, 5KM ಟ್ರಾಫಿಕ್ ಜಾಮ್
Fat dogs: ಬೆಂಗಳೂರಿನಲ್ಲಿ ನಾಯಿಗಳ ಚುನಾವಣೆ! 64 ಸ್ಪರ್ಧಿಗಳಲ್ಲಿ ಈಗ ಇಬ್ಬರಿಗಷ್ಟೇ ಉಳಿದಿದೆ ಚಾನ್ಸ್