ಬಂಗಾರ-ಬೆಳ್ಳಿ ಅಲ್ಲ, ಹಾಲು-ಮೊಸರೇ ಹೊಸ ಜೋಡಿಗೆ ಗಿಫ್ಟ್‌, ಮದುವೆ ಮಂಟಪದಲ್ಲಿ ಹಾಲಿನ ಬೆಲೆ ಏರಿಕೆ ವಿರುದ್ಧ ಆಕ್ರೋಶ

Published : Nov 03, 2026, 03:51 PM IST
Nandini Milk and Curd Gifted to Couple as Price Hike Protest

ಸಾರಾಂಶ

ಮೈಸೂರಿನ ಕಡಕೋಳದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ನವಜೋಡಿಗೆ ನಂದಿನಿ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ರಾಜ್ಯ ಸರ್ಕಾರದ ಹಾಲು ಮತ್ತು ಮೊಸರಿನ ದರ ಏರಿಕೆಯನ್ನು ವಿರೋಧಿಸಿ ಪ್ರಜ್ಞಾವಂತ ನಾಗರಿಕ ವೇದಿಕೆ ಈ ವಿನೂತನ ಜಾಗೃತಿ ಮೂಡಿಸಿದೆ.

ಮೈಸೂರು (ನ.3): ರಾಜ್ಯದಲ್ಲಿ ಇತ್ತೀಚೆಗಷ್ಟೇ ನಂದಿನಿ ಹಾಲು ಹಾಗೂ ಮೊಸರಿನ ದರ ಗಣನೀಯವಾಗಿ ಏರಿಕೆಯಾಗಿರುವುದರ ವಿರುದ್ಧ ಮೈಸೂರು ತಾಲೂಕಿನ ಕಡಕೋಳದಲ್ಲಿ ವಿನೂತನ ಮಾದರಿಯ ಜಾಗೃತಿ ನಡೆದಿದೆ. ಮದುವೆಯಾಗುತ್ತಿದ್ದ ನವಜೋಡಿಗೆ ಚಿನ್ನ-ಬೆಳ್ಳಿ ಅಥವಾ ಗೃಹಬಳಕೆಯ ವಸ್ತುಗಳ ಬದಲಿಗೆ ನಂದಿನಿ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಿಶಿಷ್ಠವಾಗಿ ಆಕ್ರೋಶ ಹೊರಹಾಕಿದೆ.

ಮೈಸೂರು ನಗರದ ಹೊರವಲಯದ ಕಡಕೋಳ ಗ್ರಾಮದ ಶ್ರೀ ಕಾಳಿಭೈರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ (ನವೆಂಬರ್ 2) ಸ್ಥಳೀಯ ನಿವಾಸಿಗಳಾದ ಮಂಜು ಹಾಗೂ ಅನನ್ಯಾ ಅವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಈ ಶುಭ ಸಮಾರಂಭದಲ್ಲಿ ಮದುವೆ ಮಂಟಪಕ್ಕಾಗಮಿಸಿದ ವಧು-ವರರ ಆಪ್ತ ಗೆಳೆಯರು, ನೂತನ ದಂಪತಿಗೆ ನಂದಿನಿ ಹಾಲು ಹಾಗೂ ಮೊಸರಿನ ಪ್ಯಾಕೆಟ್‌ಗಳನ್ನೇ ಉಡುಗೊರೆಯಾಗಿ (Gift) ನೀಡಿ ಶುಭಕೋರುವ ಮೂಲಕ ಕಲ್ಯಾಣ ಮಂಟಪದಲ್ಲಿದ್ದ ಪ್ರತಿಯೊಬ್ಬರ ಗಮನ ಸೆಳೆದರು. ಆ ಮೂಲಕ ರಾಜ್ಯದಲ್ಲಿ ಈಗ ಹಾಲು ಹಾಗೂ ಮೊಸರೇ ದುಬಾರಿ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು. ದಿನನಿತ್ಯದ ಅತ್ಯಗತ್ಯ ವಸ್ತುಗಳ ದರ ನಿರಂತರವಾಗಿ ಏರಿಕೆಯಾಗುತ್ತಿರುವುದರ ವಿರುದ್ಧ ರಾಜ್ಯ ಸರ್ಕಾರದ ಗಮನ ಸೆಳೆಯಲು ಈ ವಿಶಿಷ್ಟ ಜಾಗೃತಿ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ವಿಶಿಷ್ಟ ಜಾಗೃತಿ

'ಪ್ರಜ್ಞಾವಂತ ನಾಗರಿಕ ವೇದಿಕೆ'ಯ ಅಧ್ಯಕ್ಷರೂ ಆಗಿರುವ ಕಡಕೋಳ ಜಗದೀಶ್ (Kadakola Jagadish) ಅವರ ನೇತೃತ್ವದಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೂತನ ದಂಪತಿಗಳಾದ ಮಂಜು ಮತ್ತು ಅನನ್ಯಾ ಅವರಿಗೆ ವೇದಿಕೆ ಮೇಲೆಯೇ ನಂದಿನಿ ಹಾಲು ಮತ್ತು ಮೊಸರಿನ ಸ್ಯಾಚೆಟ್‌ಗಳನ್ನು ನೀಡಿ ಅಭಿನಂದಿಸಿದ ಜಗದೀಶ್, ಪ್ರಸ್ತುತ ಸನ್ನಿವೇಶದಲ್ಲಿ ಹಾಲಿನ ಉತ್ಪನ್ನಗಳ ದರ ಏರಿಕೆಯು ಸಾಮಾನ್ಯ ಜನರ ಜೇಬಿಗೆ ಹೇಗೆ ಕತ್ತರಿ ಹಾಕುತ್ತಿದೆ ಎಂಬುದನ್ನು ಉಲ್ಲೇಖಿಸಿದರು.

ಈ ವೇಳೆ ಮಾತನಾಡಿದ ಕಡಕೋಳ ಜಗದೀಶ್, ಇತ್ತೀಚೆಗೆ ರಾಜ್ಯ ಸರ್ಕಾರವು ಹಾಲು ಮತ್ತು ಮೊಸರಿನ ದರವನ್ನು ಗಣನೀಯವಾಗಿ ಹೆಚ್ಚಿಸಿದೆ. ದಿನನಿತ್ಯದ ಬದುಕಿನಲ್ಲಿ ಅತ್ಯಗತ್ಯವಾಗಿರುವ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆ ಬಿದ್ದಿದೆ. ಈ ಮೂಲಕ ಸಾರ್ವಜನಿಕರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲು ಮತ್ತು ಬಡವರ ಮೇಲಾಗುತ್ತಿರುವ ಆರ್ಥಿಕ ಹೊರೆಯನ್ನು ಎತ್ತಿಹಿಡಿಯಲು ಈ ಶುಭ ಸಮಾರಂಭದಲ್ಲೇ ಹಾಲು-ಮೊಸರನ್ನು ಉಡುಗೊರೆಯಾಗಿ ನೀಡಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು. ಮದುವೆ ಮಂಟಪದಲ್ಲಿ ನಡೆದ ಈ ವಿನೂತನ ಮಾದರಿಯ ಚಳವಳಿ ಮತ್ತು ಉಡುಗೊರೆ ಸಲ್ಲಿಕೆಯ ವಿಡಿಯೋ ಹಾಗೂ ಫೋಟೋಗಳು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸೋಶಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗುತ್ತಿವೆ.

PREV
Read more Articles on
click me!

Recommended Stories

20 ವರ್ಷ ಮಕ್ಕಳಂತೆ ಸಾಕಿದ್ದ 500 ಅಡಿಕೆ ಮರಗಳ ಹನನ; ಬಡರೈತ ಕಾಂಗ್ರೆಸ್ ಕಾರ್ಯಕರ್ತನೆಂದೂ ನೋಡದ ಸರ್ಕಾರ!
Network: ಮೊಬೈಲ್ ಟವರ್ ಇಲ್ಲದಿದ್ದರೂ ಸಿಗಲಿದೆ 4G, ಶಿರಸಿಯ ಮೂವರು ಯುವಕರ ಹೊಸ ಆವಿಷ್ಕಾರ