
ಮೈಸೂರು : ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್ ಅವರ ಬದಲು ಬೇರೆಯವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಸ್ ಲೋಕೇಶ್‌ಗೌಡ ಆಗ್ರಹಿಸಿದರು.
ಕೆ.ಆರ್. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಶಾಸಕ ರಾಮದಾಸ್ ಜನರಿಗೆ ಸಿಗುತ್ತಿಲ್ಲ. ಆದ್ದರಿಂದ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು. ರಾಮದಾಸ್ ಅವರು ಕೆ.ಆರ್. ಕ್ಷೇತ್ರದಿಂದ ಆರು ಬಾರಿ ಸ್ಪರ್ಧಿಸಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಹೆಚ್ಚು ಜನರು ಇರುವ ವಿಧಾನಸಭಾ ಕ್ಷೇತ್ರ ಇದು ಎಂದರು.
ಕೆ.ಆರ್. ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಬಹುತೇಕವಾಗಿ ಬ್ರಾಹ್ಮಣ ಅಭ್ಯರ್ಥಿಗಳೇ ಎಲ್ಲರ ಸಹಕಾರದೊಂದಿಗೆ ಗೆಲುವು ಸಾಧಿಸಿದ್ದಾರೆ. ಹೀಗಾಗಿ ರಾಮದಾಸ್ ನಾಲ್ಕು ಬಾರಿ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರು ಇತ್ತೀಚೆಗೆ ಯಾರಿಗೂ ಸಿಗುತ್ತಿಲ್ಲ. ಕ್ಷೇತ್ರದ ಜನರ ಕಷ್ಟಕಾರ್ಪಣ್ಯಗಳಿಗೆ, ಸಮಸ್ಯೆಗೆ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ಬಿಜೆಪಿಯಲ್ಲಿ ಇವರನ್ನು ಬಿಟ್ಟರೆ ಯಾರು ಅಭ್ಯರ್ಥಿಯೇ ಇಲ್ಲವೆ ಎಂಬ ಸಂಶಯ ಮೂಡುತ್ತಿದೆ ಎಂದರು.
ಚುನಾವಣಾ ಸಮಯದಲ್ಲಿ ಮಾತ್ರ ಕಾರ್ಯಕರ್ತರ ಜೊತೆ, ಮತದಾರರ ಜೊತೆ ಮನೆಮನೆಗೆ ತೆರಳುತ್ತಾರೆ. ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಾರೆ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲೂ ಅಂತದೇನು ಕ್ಷೇತ್ರಕ್ಕಾಗಿ ಸಾಧನೆಯನ್ನು ಮಾಡಿಲ್ಲ. ಆದ್ದರಿಂದ ಬಿಜೆಪಿ ಹೈಕಮಾಂಡ್, ರಾಜ್ಯಾಧ್ಯಕ್ಷರು, ಎಲ್ಲಾ ಕಾರ್ಯಕಾರಿಣಿ ಸದಸ್ಯರು ಈ ಬಾರಿ ಹೊಸಬರಿಗೆ ಕೊಡಬೇಕು ಎಂದು ಕೋರಿದರು.
ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಕ್ಷೇತ್ರದಲ್ಲಿ ಒಂದಷ್ಟುಅಭಿವೃದ್ಧಿ ಮತ್ತು ಸ್ವಚ್ಛತೆ ಕಾಣಬಹುದು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಭುಶಂಕರ್, ಕೃಷ್ಣಯ್ಯ, ಪ್ರಭಾಕರ್, ಕೃಷ್ಣಮೂರ್ತಿ ಇದ್ದರು.
ರಾಮದಾಸ್‌ಗೆ ಟಿಕೆಟ್ ಕೊಡದಂತೆ ಪತ್ರ
ಮೈಸೂರು : ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರಿಗೆ ಟಿಕೆಟ್ ನಿರಾಕರಿಸಬೇಕು ಎಂದು ಕ್ಷೇತ್ರದ ಹಿರಿಯ ನಾಗರೀಕ ಪರಮಶಿವಮೂರ್ತಿ ಅವರು ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ 20 ವರ್ಷಗಳಿಂದ ಬಿಜೆಪಿ ಬೆಂಬಲಿಸುತ್ತಿರುವ ನಮ್ಮ ಕ್ಷೇತ್ರದ ಜನತೆ ಕಳೆದ 5 ವರ್ಷಗಳಿಂದ ಬಹಳ ಬೇಸತ್ತು, ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ. ಮೋದಿ ಅವರ ಮುಖವನ್ನು ನೋಡಿ ಇಷ್ಟುದಿನ ಬಿಜೆಪಿಯನ್ನು ಬೆಂಬಲಿಸಿ ರಾಮದಾಸ್ ಅವರನ್ನು ಗೆಲ್ಲಿಸಿದ್ದೇವೆ. ಆದರೆ ಶಾಸಕ ರಾಮದಾಸ್ ಜನರ ಯಾವುದೇ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ತಾವು ಜನರಿಗೆ ಚುನಾವಣಾ ಸಂದರ್ಭದಲ್ಲಿ ಬಿಟ್ಟು ಬೇರೆ ಯಾವುದೇ ಸಂದರ್ಭದಲ್ಲಿ ಸಿಗುವುದಿಲ್ಲ. ನೀವು ಮೈಸೂರಿಗೆ ಬಂದಾಗ ಅವರ ಬೆನ್ನಿಗೆ ಪ್ರೀತಿಯಿಂದ ತಟ್ಟಿಹೋಗಿದ್ದೀರಿ. ಆದರೆ ಇಂದು ಆ ಸೊಕ್ಕಿನ ಬೆನ್ನನ್ನು ಮರೆಯುವ ನಾಯಕತ್ವ ಬಿಜೆಪಿಗೆ ಇಲ್ಲ ಎಂದು ನಮಗೆ ಅನ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಕೆಲವು ಕಾಮಗಾರಿಗೆ ಚಾಲನೆ ನೀಡಿ ಪೋಸ್ ಕೊಟ್ಟು ಹೋಗುವುದು ಬಿಟ್ಟರೆ, ನೇರವಾಗಿ ಸಂಪರ್ಕ ಮಾಡಬೇಕೆಂದರೆ ಒಬ್ಬ ಮುಸಲ್ಮಾನ ಮಹಿಳೆಯ ಅನುಮತಿ ಪಡೆದು ಮಾಡಬೇಕಿರುವುದು ನಮ್ಮ ಪರಿಸ್ಥಿತಿ. ಹಿಂದುತ್ವಕ್ಕಾಗಿ ಮತ ಹಾಕಿದ ನಮ್ಮ ಕ್ಷೇತ್ರದಲ್ಲಿ ಗುಂಬಜ್ ಮಾದರಿ ಬಸ್ ನಿಲ್ದಾಣ ನಿರ್ಮಿಸಿ ಎಲ್ಲರ ಮನಸ್ಸಿನ ಮೇಲೆ ನೋವು ಬೀರಿದ್ದಾರೆ. ದಯಮಾಡಿ ಇಂತಹ ವ್ಯಕ್ತಿಗೆ ಟಿಕೆಟ್ ನೀಡಬೇಡಿ. ಇದರ ಮೇಲೂ ತಾವು ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್ ಅಥವಾ ಎಸ್‌ಡಿಪಿಐ ಬೆಂಬಲಿಸುತ್ತೇವೆಯೇ ಹೊರತು ರಾಮದಾಸ್ ಬೆಂಬಲಿಸುವುದಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.