
ಮೈಸೂರು: ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ದೊಡ್ಡಕೆರೆಯು ಕಳೆದ ಮೂರು ನಾಲ್ಕು ತಿಂಗಳಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ರಾತ್ರಿ ಬಿದ್ದ ಭಾರಿ ಮಳೆಗೆ ವರುಣನ ಕೃಪಾಶೀರ್ವಾದದಿಂದ ಕೆರೆಯಲ್ಲಿ ನೀರು ಭರ್ತಿಯಾಗಿದ್ದು, ಈಗ ಕೆರೆಗೆ ಸೇರಿದ ನೀರಿನಿಂದ ಕೊಳವೆ ಬಾವಿಗಳು, ಅಂತರ್ಜಲಕ್ಕೆ, ಸ್ಥಳೀಯ ಜನ ಜಾನುವಾರುಗಳಿಗೆ ಅನುಕೂಲವಾಯಿತು ಎಂದು ಸ್ಥಳೀಯ ಗ್ರಾಮದ ರೈತರು ತಿಳಿಸಿದ್ದಾರೆ.
ನಮ್ಮ ಕೆರೆಗೆ ಮೂರು ನಾಲ್ಕು ತಿಂಗಳಿನಿಂದ ಮಳೆ ನೀರಿಲ್ಲದೆ ಬರಗಾಲಕ್ಕೆ ತುತ್ತಾಗಿತ್ತು. ಈಗ ನಮ್ಮ ಕೆರೆಗೆ ವಿದೇಶಿ ಪಕ್ಷಿಗಳು ಸಾವಿರಾರು ಕಿ.ಮೀ. ದೂರದಿಂದ ಬರುತ್ತಿದ್ದವು. ಇಲ್ಲಿಗೆ ಬಂದು ಸಂತಾನೋತ್ಪತ್ತಿ ಮಾಡಿಕೊಂಡು ತನ್ನ ಜೀವನವನ್ನು ಮೂರು ನಾಲ್ಕು ತಿಂಗಳು ಇಲ್ಲೇ ಇದ್ದು ತಮ್ಮ ವಾತಾವರಣಕ್ಕೆ ಹೊಂದಿಕೊಂಡಿದ್ದವು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಶನಿವಾರ ದಿನವಿಡೀ ಮೋಡ ಕವಿದ ವಾತಾವರಣದಿಂದ ಕೂಡಿದ್ದ ಜಿಲ್ಲೆಯಲ್ಲಿ ತಡರಾತ್ರಿಯಿಂದ ಮಳೆ ಆರಂಭಗೊಂಡು ಬೆಳಗ್ಗೆವರೆಗೂ ಮುಂದುವರಿದಿತ್ತು. ಶನಿವಾರ ಬೆಳಗ್ಗೆ 8 ಸಗಂಟೆಯವರೆಗೆ ಕಳೆದ 24 ಗಂಟೆಯಲ್ಲಿ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಗರಿಷ್ಠ 167 ಮಿ.ಮೀ. ಮಳೆ ದಾಖಲಾಗಿದೆ.
ನಿಡ್ಪಳ್ಳಿಯಲ್ಲಿ 162 ಮಿ.ಮೀ., ಒಳಮೊಗ್ರುವಿನಲ್ಲಿ 128 ಮಿ.ಮೀ., ಬೆಟ್ಟಂಪಾಡಿಯಲ್ಲಿ 123 ಮಿ.ಮೀ., ಬಂಟ್ವಾಳದ ಕರಿಯಂಗಳದಲ್ಲಿ 115.5 ಮಿ.ಮೀ. ಮಳೆಯಾಗಿದೆ. ಭಾನುವಾರ ದ.ಕ. ಜಿಲ್ಲೆಯಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಹಗಲು ತುಂತುರು - ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ನವಲಗುಂದ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಯಿತು. ದಿನವಿಡೀ ಬಿಸಿಲು ಹಾಗೂ ಸೆಖೆಯಿಂದ ಬಳಲಿದ್ದ ಜನರಿಗೆ ಮಳೆ ತಂಪೆರೆದರೆ, ರೈತರಲ್ಲಿ ಮಂದಹಾಸ ಮೂಡಿಸಿತು.
ಸಂಜೆವರೆಗೆ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಬಳಿಕ ಮೋಡ ಕವಿದು ಸಂಜೆ 7 ಗಂಟೆ ನಂತರ ಮಳೆ ಅಬ್ಬರಿಸಿತು. ರಸ್ತೆಗಳಲ್ಲಿ ನೀರು ಹರಿದಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಹಠಾತ್ ಸುರಿದ ಮಳೆಯಿಂದ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಗಳು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಶೆಡ್ಗಳ ತಾಡಪತ್ರೆಗಳು ಗಾಳಿಯ ರಭಸಕ್ಕೆ ಹಾರಾಡಿದವು.