
ಧಾರವಾಡ: ತೀರಾ ಅಪರೂಪದ ಆನುವಂಶಿಕ ರಕ್ತಸ್ರಾವದ ಕಾಯಿಲೆಯಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕನೊಬ್ಬನ ಜೀವ ಉಳಿಸಲು ಅಪರೂಪದ ರಕ್ತದ ಗುಂಪಾಗಿರುವ ''''ಬಾಂಬೆ ಬ್ಲಡ್'''' ಹೊಂದಿರುವ ವ್ಯಕ್ತಿಯೊಬ್ಬರು ಚಿಕ್ಕಮಗಳೂರಿನಿಂದ ಧಾರವಾಡಕ್ಕೆ ಬರೋಬ್ಬರಿ 300 ಕಿಮೀ ಪ್ರಯಾಣಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ.
ಇಲ್ಲಿಯ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಭಿನಂದನ್ ಎಂಬ ಬಾಲಕನಿಗೆ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ, ಅವನ ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟ ಗಣನೀಯವಾಗಿ ಕುಸಿದು, ಸ್ಥಿತಿ ಗಂಭೀರವಾಗಿತ್ತು. ಮಗುವಿಗೆ ತುರ್ತಾಗಿ ಒಂದು ಯುನಿಟ್ ''''ಬಾಂಬೆ ಬ್ಲಡ್'''' ಅಗತ್ಯವಿತ್ತು. ಆದರೆ, ಈ ರಕ್ತದ ಗುಂಪು ಅತ್ಯಂತ ಅಪರೂಪದ್ದಾಗಿದ್ದರಿಂದ, ಸೂಕ್ತ ದಾನಿಯನ್ನು ಹುಡುಕುವುದು ಸವಾಲಿನ ಕೆಲಸವಾಗಿತ್ತು.
ಮಗುವಿನ ತಂದೆ ಮಹಾಂತೇಶ್ ಅವರ ಮನವಿಗೆ ಸ್ಪಂದಿಸಿದ ''''ಸ್ವಾಮಿ ವಿವೇಕಾನಂದ ಬ್ಲಡ್ ಡೋನರ್ಸ್ ಫೌಂಡೇಶನ್" ರಕ್ತದಾನಿಗಾಗಿ ಹುಡುಕಾಟ ಆರಂಭಿಸಿತು. ಸಂಸ್ಥೆಯ ಸ್ಥಾಪಕರಾದ ಶಿವಕುಮಾರ ರಟ್ಟೀಹಳ್ಳಿ, ಚಿಕ್ಕಮಗಳೂರಿನಲ್ಲಿರುವ ''''ಬಾಂಬೆ ಬ್ಲಡ್'''' ಹೊಂದಿರುವ ಮಹೇಶಕುಮಾರ್ ಅವರನ್ನು ಸಂಪರ್ಕಿಸಿ, ಮಗುವಿನ ಗಂಭೀರ ಸ್ಥಿತಿಯ ಬಗ್ಗೆ ವಿವರಿಸಿದರು.
ಅಗತ್ಯದ ತುರ್ತನ್ನು ಅರಿತ ಮಹೇಶಕುಮಾರ್, ರಕ್ತದಾನ ಮಾಡಲು ತಕ್ಷಣವೇ ಒಪ್ಪಿಕೊಂಡು, ವಿಳಂಬ ಮಾಡದೆ ಧಾರವಾಡದತ್ತ ಪ್ರಯಾಣ ಬೆಳೆಸಿದರು. ಐದು ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಸಿ 300 ಕಿಮೀಗಿಂತಲೂ ಹೆಚ್ಚು ದೂರ ಕ್ರಮಿಸಿ ಎಸ್ಡಿಎಂ ಆಸ್ಪತ್ರೆಯನ್ನು ತಲುಪಿದರು. ಅಲ್ಲಿ ಆಸ್ಪತ್ರೆಯ ರಕ್ತನಿಧಿಯಲ್ಲಿ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರೈಸಿ, ಮಗುವಿಗಾಗಿ ಒಂದು ಯುನಿಟ್ ''''ಬಾಂಬೆ ಬ್ಲಡ್'''' ದಾನ ಮಾಡಿದರು. ಈ ಸಂದರ್ಭದಲ್ಲಿ ರಕ್ತನಿಧಿಯ ಸಿಬ್ಬಂದಿ ಪುನೀತ್ ಇದ್ದರು.
ಜಾತಿ, ಧರ್ಮ, ಪ್ರದೇಶದ ಗಡಿಗಳನ್ನು ಮೀರಿದ ಮಾನವೀಯತೆಯೇ ನಿಜವಾದ ಸೇವೆ ಎಂಬುದಕ್ಕೆ ಮಹೇಶಕುಮಾರ್ ಅವರ ಅಪರೂಪದ ರಕ್ತದಾನ ಹಾಗೂ ಸ್ವಾಮಿ ವಿವೇಕಾನಂದ ರಕ್ತದಾನ ಫೌಂಡೇಶನ್ನ ಸಮಯೋಚಿತ ಸ್ಪಂದನೆ ಸಾಕ್ಷಿಯಾಗಿದೆ. ಜತೆಗೆ ಮಹೇಶಕುಮಾರ ಅವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ಸಹ ವ್ಯಕ್ತವಾಗುತ್ತಿದೆ.
ಬಾಂಬೆ ಬ್ಲಡ್ ಗ್ರೂಪ್ ಪ್ರಪಂಚದಲ್ಲೇ ಅತ್ಯಂತ ಅಪರೂಪದ ರಕ್ತದ ಗುಂಪುಗಳಲ್ಲಿ ಒಂದು. ವೈಜ್ಞಾನಿಕವಾಗಿ ಇದನ್ನು ''''hh'''' ಅಥವಾ ''''Oh'''' ಫಿನೋಟೈಪ್ ಎಂದು ಕರೆಯಲಾಗುತ್ತದೆ. ಇದನ್ನು ಮೊದಲ ಬಾರಿಗೆ 1952ರಲ್ಲಿ ಡಾ. ವೈ.ಎಂ. ಭೇಂಡೆ ಅವರು ಮುಂಬೈ ನಗರದಲ್ಲಿ ಪತ್ತೆ ಹಚ್ಚಿದ್ದರಿಂದ ಇದಕ್ಕೆ ಬಾಂಬೆ ಬ್ಲಡ್ ಎಂಬ ಹೆಸರು ಬಂದಿತು. ಬಾಂಬೆ ರಕ್ತದ ಗುಂಪಿನ ವ್ಯಕ್ತಿಗಳು ಕೇವಲ ಮತ್ತೊಬ್ಬ ಬಾಂಬೆ ರಕ್ತದ ಗುಂಪಿನ ವ್ಯಕ್ತಿಯಿಂದ ಮಾತ್ರ ರಕ್ತವನ್ನು ಸ್ವೀಕರಿಸಲು ಸಾಧ್ಯ.