
ಮೈಸೂರು: ವಿಶ್ವವಿಖ್ಯಾತ, ನಾಡಹಬ್ಬ 'ಮೈಸೂರು ದಸರಾ ಮಹೋತ್ಸ'ವನ್ನು ಈ ಬಾರಿ ಯಾರು ಉದ್ಘಾಟಿಸಲಿದ್ದಾರೆ ಎಂಬ ಕುತೂಹಲದ ಚರ್ಚೆಗೆ ಕೊನೆಗೂ ತೆರೆಬಿದ್ದಿದೆ. 2026ರ ಮೈಸೂರು ದಸರಾ ಮಹೋತ್ಸವವನ್ನು ಕೊಪ್ಪಳದ ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ರೀ ಅಭಿನವ ಗವಿಸಿದ್ದೇಶ್ವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಅಕ್ಟೋಬರ್ 11ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅಕ್ಟೋಬರ್ 21ರ ವಿಜಯದಶಮಿಯಂದು ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈ ಮಹೋತ್ಸವದ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಸೇರಿದಂತೆ ನಾಡಿನ ಹಲವು ಗಣ್ಯರ ಹೆಸರುಗಳು ಪ್ರಸ್ತಾಪ ಆಗಿದ್ದವು. ಅಂತಿಮವಾಗಿ ಸಾಮಾಜಿಕ ಕಳಕಳಿ, ಜಲ ಸಂರಕ್ಷಣೆ ಹಾಗೂ ಸಮಾಜಮುಖಿ ಕಾಯಕದಿಂದ ಕೋಟ್ಯಂತರ ಭಕ್ತರ ಮನಗೆದ್ದಿರುವ ಕೊಪ್ಪಳ ಗವಿಮಠದ ಶ್ರೀಗಳಿಗೆ ಈ ಮಹೋನ್ನತ ಗೌರವ ಒಲಿದುಬಂದಿದೆ.
ಬಾಲ್ಯದಲ್ಲಿ ಕೇವಲ ವಿದ್ಯಾಭ್ಯಾಸಕ್ಕಾಗಿ ಕೊಪ್ಪಳದ ಗವಿಮಠಕ್ಕೆ ಆಗಮಿಸಿದ್ದ ಇವರು, ತಮ್ಮ ಸರಳತೆ, ಜ್ಞಾನ ಮತ್ತು ಸೇವಾ ಮನೋಭಾವದಿಂದ ಗವಿಮಠದ 17ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾದರು. ಇವರಲ್ಲಿರುವ ತೇಜಸ್ಸನ್ನು ಗಮನಿಸಿದ ಶ್ರೀ ಶಿವಶಾಂತವೀರ ಸ್ವಾಮಿಗಳು ಇವರಿಗೆ 'ಪರುತದೇವರು' ಎಂದು ನಾಮಕರಣ ಮಾಡಿದರು. ನಂತರ ಮಠದ ಉತ್ತರಾಧಿಕಾರಿಯನ್ನಾಗಿ ಘೋಷಿಸಿದರು. ಪೀಠಾರೋಹಣ ಬಳಿಕ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಎಂದೇ ಪ್ರಸಿದ್ಧಿ ಪಡೆದರು.
ಅಭಿನವ ಗವಿಸಿದ್ದೇಶ್ವರ ಶ್ರೀಗಳು ಕೇವಲ ಮಠದ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಮಾಜ ಸುಧಾರಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟವರು. ಕೊಪ್ಪಳ ಭಾಗದಲ್ಲಿ ನಶಿಸಿಹೋಗುತ್ತಿದ್ದ ಹಿರೇಹಳ್ಳ ಪುನಶ್ಚೇತನ ಟ್ರಸ್ಟ್ ಸ್ಥಾಪಿಸಿ, ಸಾವಿರಾರು ಜನರ ಸಹಯೋಗದೊಂದಿಗೆ ಹೂಳೆತ್ತುವ ಬೃಹತ್ ಕಾರ್ಯ ಕೈಗೊಂಡು ಜಲ ದೀಕ್ಷೆ ನೀಡಿದರು. ಹೀಗಾಗಿ ಇವರನ್ನು ಭಕ್ತರು ಪ್ರೀತಿಯಿಂದ 'ಜಲಋಷಿ' ಎಂದೇ ಕರೆಯುತ್ತಾರೆ.
ಅಲ್ಲದೆ.. ಗವಿಮಠದ ಪರಂಪರೆಯಾದ ಅನ್ನ, ಜ್ಞಾನ ಮತ್ತು ಅಕ್ಷರದಾಸೋಹದ (ತ್ರಿವಿಧ ದಾಸೋಹ) ಜೊತೆಗೆ ಲಕ್ಷಾಂತರ ಸಸಿಗಳನ್ನು ನೆಟ್ಟು ಬೆಳೆಸುವ ವೃಕ್ಷ ದಾಸೋಹ ಆರಂಭಿಸಿದರು. ಉತ್ತರ ಕರ್ನಾಟಕದ ಮಹಾಕುಂಭಮೇಳ ಎಂದೇ ಕರೆಯಲ್ಪಡುವ ಕೊಪ್ಪಳ ಗವಿಮಠದ ಜಾತ್ರೆಗೆ ಕಾಯಕ, ಶಿಸ್ತು, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯ ಹೊಸ ಮೆರುಗು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇತ್ತೀಚೆಗಷ್ಟೇ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬರೋಬ್ಬರಿ 5,000 ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡುವ ಅತ್ಯಾಧುನಿಕ ಬೃಹತ್ ಕಟ್ಟಡವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ.
ನಾಡಿನ ರೈತರು, ಬಡವರು ಹಾಗೂ ಪರಿಸರದ ಪರವಾಗಿ ಸದಾ ಮಿಡಿಯುವ ಇಂತಹ ಮಹಾನ್ ಸಂತರ ಅಮೃತಹಸ್ತದಿಂದ ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೊಳ್ಳುತ್ತಿರುವುದು ನಾಡಿನ ಜನರಲ್ಲಿ ಅಪಾರ ಹರ್ಷ ಮತ್ತು ಭಕ್ತಿಯನ್ನು ತುಂಬಿದೆ.