ಕೆಂಗೇರಿ ಬಳಿ ಎಕ್ಸ್‌ಪ್ರೆಸ್‌ ರೈಲು ಮುಕ್ಕಾಲು ಗಂಟೆ ನಿಲುಗಡೆ, ಜ್ಞಾನಭಾರತಿ ಮೆಟ್ರೋ ಬಳಿ ನಿಲ್ಲಿಸುವಂತೆ ಒತ್ತಾಯ

By Suvarna News  |  First Published Jan 5, 2024, 8:10 PM IST

ಮೈಸೂರಿನಿಂದ ಬೆಂಗಳೂರಿಗೆ ಬರುವ ಎಕ್ಸ್‌ಪ್ರೆಸ್‌ ರೈಲುಗಳು ಮೆಟ್ರೋ ನಿಲ್ದಾಣ ಸಮೀಪವಿಲ್ಲದ ಕೆಂಗೇರಿ, ನಾಯಂಡಹಳ್ಳಿ ಬಳಿ ಸುಮಾರು ಮುಕ್ಕಾಲು ಗಂಟೆ ನಿಲ್ಲುತ್ತಿರುವುದು ಪ್ರಯಾಣಿಕರ ತ್ರಿಶಂಕು ಸ್ಥಿತಿಗೆ ಕಾರಣವಾಗಿದೆ. ಜ್ಞಾನಭಾರತಿ ಮೆಟ್ರೋ  ಬಳಿ ನಿಲ್ಲಿಸುವಂತೆ ಒತ್ತಾಯಿಸಲಾಗಿದೆ.


ಬೆಂಗಳೂರು (ಜ.5): ಮೈಸೂರಿನಿಂದ ಬೆಂಗಳೂರಿಗೆ ಬರುವ ಎಕ್ಸ್‌ಪ್ರೆಸ್‌ ರೈಲುಗಳು ಮೆಟ್ರೋ ನಿಲ್ದಾಣ ಸಮೀಪವಿಲ್ಲದ ಕೆಂಗೇರಿ, ನಾಯಂಡಹಳ್ಳಿ ಬಳಿ ಸುಮಾರು ಮುಕ್ಕಾಲು ಗಂಟೆ ನಿಲ್ಲುತ್ತಿರುವುದು ಪ್ರಯಾಣಿಕರ ತ್ರಿಶಂಕು ಸ್ಥಿತಿಗೆ ಕಾರಣವಾಗಿದೆ. ಈ ತೊಂದರೆ ನಿವಾರಿಸಿ ಪ್ರಯಾಣಿಕರಿಗೆ ಮುಂದಿನ ಸಂಚಾರ ಅನುಕೂಲ ಆಗುವಂತೆ ಈ ರೈಲುಗಳನ್ನು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸುವಂತೆ ಒತ್ತಾಯ ಹೆಚ್ಚಾಗಿದೆ.

ಪ್ರತಿನಿತ್ಯ ಮೈಸೂರಿಗೆ ಸುಮಾರು ಆರಕ್ಕೂ ಹೆಚ್ಚು ಎಕ್ಸ್‌ಪ್ರೆಸ್‌ ರೈಲುಗಳಿವೆ. ಮೈಸೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ 5ರಿಂದ 8ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬರುತ್ತಾರೆ. ಎಕ್ಸ್‌ಪ್ರೆಸ್ ರೈಲುಗಳು ಮೈಸೂರಿನಿಂದ ಕೆಂಗೇರಿ, ಜ್ಞಾನಭಾರತಿ ನಿಲ್ದಾಣವನ್ನು ಒಂದೂವರೆ-ಒಂದೂಮುಕ್ಕಾಲು ಗಂಟೆ ಅವಧಿಯಲ್ಲಿ ತಲುಪುತ್ತವೆ. ಇಲ್ಲಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ತಲುಪಲು ಕೇವಲ 5ರಿಂದ 7ನಿಮಿಷ ಸಾಕಾಗುತ್ತದೆ.

Tap to resize

Latest Videos

undefined

ಆದರೆ, ಕೆಎಸ್ಆರ್ ನಿಲ್ದಾಣದ ಲೈನ್ ಕ್ಲಿಯರೆನ್ಸ್‌ ಗಾಗಿ ಸುಮಾರು 45ನಿಮಿಷಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವೇಳೆಯಲ್ಲಿ ಕೆಂಗೇರಿ, ನಾಯಂಡನಹಳ್ಳಿ ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತಿದೆ. ಈ ನಿಲ್ದಾಣಗಳ ಬಳಿ ಆಟೋ, ಕ್ಯಾಬ್‌, ಮೆಟ್ರೋ ಸೇರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಸಾರಿಗೆ ಬಸ್ ಅಥವಾ ಮೆಟ್ರೋ ನಿಲ್ದಾಣಗಳಿಗೆ ತಲುಪಲು ಸುಮಾರು 2ಕಿಮೀ ನಡೆಯಬೇಕಾಗಿದೆ. ಹೀಗಾಗಿ ಮುಂದೆ ಪ್ರಯಾಣಿಸಲೂ ಆಗದೆ, ರೈಲಿನಲ್ಲಿ ಕುಳಿತುಕೊಳ್ಳಲೂ ಆಗದೆ ಪ್ರಯಾಣಿಕರು ತ್ರಿಶಂಕು ಸ್ಥಿತಿಯಲ್ಲಿ ಪರದಾಡುವಂತಾಗಿದೆ.

ಹಗಲಿನ ವೇಳೆಯಲ್ಲಾದರೆ ಲಗೇಜ್‌ ಇಲ್ಲದಿದ್ದರೆ ಒಬ್ಬರೇ ಇದ್ದರೂ ನಡೆದು ಹೋಗುವ ಸಾಹಸ ಮಾಡಬಹುದು. ಆದರೆ, ರಾತ್ರಿ ವೇಳೆ ಇಲ್ಲಿ ಮಹಿಳೆ ಅಥವಾ ಪುರುಷ ಒಬ್ಬರೇ ನಡೆದು ಹೋಗುವುದು ಅಪಾಯ. ಹೀಗಾಗಿ ಪ್ರಯಾಣಿಕರು ಮುಕ್ಕಾಲು ಗಂಟೆ ರೈಲಿನಲ್ಲಿಯೆ ಕುಳಿತುಕೊಳ್ಳಬೇಕಾಗಿದೆ. ಇದರಿಂದ ಸಮಯವೂ ವ್ಯರ್ಥವಾಗುತ್ತಿದ್ದು, ನಗರ ಪ್ರವೇಶಕ್ಕೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.

ಜ್ಞಾನಭಾರತಿ ನಿಲುಗಡೆ:

ಹೀಗಾಗಿ ಇದಕ್ಕೂ ಹಿಂದಿನ ಜ್ಞಾನಭಾರತಿ ನಿಲ್ದಾಣದಲ್ಲಿ ಈ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲ್ಲಿಸಬೇಕು. ಇದರಿಂದ ಪಕ್ಕದಲ್ಲೇ ಇರುವ ಮೆಟ್ರೋ ನಿಲ್ದಾಣಕ್ಕೆ ತೆರಳಿ ನಿಗದಿತ ಸಮಯಕ್ಕೆ ನಗರ ಪ್ರವೇಶಿಸಲು ಸಾಧ್ಯವಾಗುತ್ತದೆ. ಜನತೆಯ ಸಮಯ ಉಳಿತಾಯವಾಗುತ್ತದೆ. ಸರ್ಕಾರ ತಕ್ಷಣ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೋಪಾಲಗೌಡ ಮೆಮೋರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್‌ ಮುಖಂಡ ಡಾ. ಶುಶ್ರುತ್‌ ಗೌಡ ಒತ್ತಾಯಿಸಿದ್ದಾರೆ.

------

ಸಮಸ್ಯೆಗೆ ಕಾರಣವೇನು?

ಕೆಎಸ್‌ಆರ್‌ ನಿಲ್ದಾಣದಲ್ಲಿ ಹೆಸರಿಗೆ 10 ಪ್ಲಾಟ್‌ಫಾರ್ಮ್ ಇದೆ. ಆದರೆ, ಮೈಸೂರು ಕಡೆಯಿಂದ ರೈಲು ಬಂದರೆ 1ರಿಂದ 4ನೇ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಸಾಧ್ಯವಾಗುವುದಿಲ್ಲ. ಈ ರೈಲುಗಳಿಗೆ ನಿಲ್ದಾಣದಲ್ಲಿ 5,6,7,8,9 ಹಾಗೂ 10ನೇ ಪ್ಲಾಟ್‌ಫಾರ್ಮ್‌ ಮಾತ್ರ ಲಭ್ಯವಿದೆ. ಕೆಎಸ್‌ಆರ್‌ನಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳು 22ಎಲ್‌ಎಚ್‌ಬಿ ಕೋಚ್‌ ಸ್ಟ್ಯಾಂಡರ್ಡ್‌ ಗೇಜ್‌ ಹೊಂದಿಲ್ಲ. ಇಲ್ಲಿ 10ರಲ್ಲಿ 5-6 ಪ್ಲಾಟ್‌ಫಾರ್ಮ್‌ ಮಾತ್ರ ಈ ಪ್ರಮಾಣದಲ್ಲಿವೆ. ಹೀಗಾಗಿ ರೈಲಿನ ಬೋಗಿಗಳು ಪ್ಲಾಟ್‌ಫಾರ್ಮ್‌ ಮೀರಿ ನಿಲ್ಲುವ ಸಂಭವ ಇದೆ. ಈ ಕಾರಣದಿಂದ ಮೈಸೂರಿಂದ ಬರುವ ರೈಲುಗಳು ಆರು ಪ್ಲಾಟ್‌ಫಾರ್ಮ್‌ಗೆ ಮಾತ್ರ ನಿಲ್ಲಲು ಅವಕಾಶ ಹೊಂದಿವೆ. ಈ ಲೈನ್‌ನಲ್ಲಿ ರೈಲುಗಳು ನಿಂತಿದ್ದರೆ, ಫ್ಯೂಲ್‌ ಅಳವಡಿಕೆ, ರೈಲುಗಳ ಬ್ಯಾಕ್‌ಅಪ್‌, ರೈಲ್ವೇ ಟ್ರ್ಯಾಕ್‌ ಸ್ವಚ್ಛತೆ, ವಾಟರಿಂಗ್‌ ಮಾಡುವಾಗ ಹೊರವಲಯದಲ್ಲಿ ನಿಲ್ಲಿಸಲಾಗುತ್ತಿದೆ. ಪ್ಲಾಟ್‌ಫಾರ್ಮ್‌ ಕಾಲಿ ಆಗುವವರೆಗೆ ರೈಲು ಕೆಂಗೇರಿ, ನಾಯಂಡಹಳ್ಳಿಯಲ್ಲಿ ನಿಲ್ಲುತ್ತಿವೆ.

-------

ರೈಲ್ವೆ ಪೋಟೋ

click me!