
ಹರಿಹರ: ಮೈಸೂರು–ಬೆಳಗಾವಿ ನಡುವೆ ಸಂಚರಿಸುತ್ತಿದ್ದ ಮೈಸೂರು–ಬೆಳಗಾವಿ ಬೇಸಿಗೆ ವಿಶೇಷ ಸೂಪರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06285) ಹಳಿತಪ್ಪಿದ ಪರಿಣಾಮ ಸಂಭವಿಸುವ ಭೀಕರ ಅಪಘಾತದ ಪರಿಸ್ಥಿತಿಯನ್ನು ಆಧರಿಸಿ, ಹರಿಹರ ಸಮೀಪ ವಾರ್ಷಿಕ ವಿಪತ್ತು ನಿರ್ವಹಣೆಯ ಪೂರ್ಣ ಪ್ರಮಾಣದ ಅಣಕು ಅಭ್ಯಾಸ (ಮಾಕ್ ಡ್ರಿಲ್) ಯಶಸ್ವಿಯಾಗಿ ನಡೆಸಲಾಯಿತು.
ಈ ಅಣಕು ಪ್ರದರ್ಶನದಲ್ಲಿ ಅಪಘಾತದ ತೀವ್ರತೆಯನ್ನು ನೈಜ ಪರಿಸ್ಥಿತಿಗೆ ಸಮಾನವಾಗಿ ಚಿತ್ರಿಸಲಾಯಿತು. ಅಪಘಾತದ ರಭಸಕ್ಕೆ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೊಂದು ಬೋಗಿ ಅದರ ಮೇಲೇರಿದ ಸ್ಥಿತಿಯಲ್ಲಿ ಇದ್ದರೆ, ಮತ್ತೊಂದು ಬೋಗಿ ಗಂಭೀರವಾಗಿ ಜಖಂಗೊಂಡಂತೆ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿ ತಕ್ಷಣ ಸಮೀಪದ ನಿಲ್ದಾಣಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾಹಿತಿ ತಲುಪುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್‌ಡಿಆರ್‌ಎಫ್), ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ತಂಡಗಳು ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದವು. ಸಂಯೋಜಿತ ಕಾರ್ಯಾಚರಣೆಯ ಮೂಲಕ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ಅವರಿಗೆ ಧೈರ್ಯ ತುಂಬಿ, ಪ್ರಥಮ ಚಿಕಿತ್ಸೆ ನೀಡಿ, ಅಗತ್ಯವಿದ್ದವರನ್ನು ಆಂಬ್ಯುಲೆನ್ಸ್‌ಗಳ ಮೂಲಕ ಸಮೀಪದ ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಕೇವಲ ಒಂದು ಗಂಟೆಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಗುರುವಾರ ಹರಿಹರ ರೈಲು ನಿಲ್ದಾಣದಲ್ಲಿ ಈ ವಾರ್ಷಿಕ ಅಭ್ಯಾಸ ಆಯೋಜಿಸಲಾಗಿತ್ತು. ಬೆಂಕಿಗಾಹುತಿಯಾದ ಬೋಗಿಗಳೊಳಗೆ ಆಕ್ಸಿಜನ್ ಉಪಕರಣಗಳೊಂದಿಗೆ ಪ್ರವೇಶಿಸಿದ ಸಿಬ್ಬಂದಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿರುವ ದೃಶ್ಯ ಗಮನಾರ್ಹವಾಗಿತ್ತು. ಪ್ರಯಾಣಿಕರ ಜೀವ ರಕ್ಷಣೆ ಮಾತ್ರವಲ್ಲದೆ, ಅವರ ಬೆಲೆಬಾಳುವ ವಸ್ತುಗಳು ಹಾಗೂ ಸರಂಜಾಮುಗಳನ್ನು ಕೂಡ ಸುರಕ್ಷಿತವಾಗಿ ಹೊರತೆಗೆದು, ಅವುಗಳನ್ನು ಯಾವ ಬೋಗಿಗೆ ಸೇರಿವೆ ಎಂಬುದನ್ನು ಲಿಖಿತವಾಗಿ ದಾಖಲಿಸುವ ಕ್ರಮವೂ ಕೈಗೊಳ್ಳಲಾಯಿತು.
ಇದೇ ವೇಳೆ, ಮೈಸೂರು ವಿಭಾಗದ ಮಿನಿ ರೈಲು ಘಟಕದಿಂದ ಹೆಚ್ಚುವರಿ ಸ್ಟ್ರೆಚರ್‌ಗಳು, ತುರ್ತು ಚಿಕಿತ್ಸಾ ಸಾಮಗ್ರಿಗಳು ಹಾಗೂ ಲೋಹ ಕತ್ತರಿಸುವ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ತಾವು ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲಾಯಿತು.
ಈ ಸಮಗ್ರ ಅಣಕು ಅಭ್ಯಾಸದ ವೇಳೆ ಸಂವಹನ ವ್ಯವಸ್ಥೆಯ ಪರಿಣಾಮಕಾರಿತ್ವ, ವಿವಿಧ ಇಲಾಖೆಗಳ ನಡುವಿನ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ವೇಗ, ವೈದ್ಯಕೀಯ ಸೇವೆಗಳ ಸ್ಪಂದನೆ, ಜನಸಂದಣಿ ನಿಯಂತ್ರಣ ಹಾಗೂ ಪುನಃಸ್ಥಾಪನಾ ಸಿದ್ಧತೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಅಭ್ಯಾಸದ ಅಂತ್ಯದಲ್ಲಿ ಸಂಬಂಧಿತ ಅಧಿಕಾರಿಗಳಿಂದ ವಿಮರ್ಶಾ ಸಭೆ ನಡೆಸಿ, ಕಾರ್ಯಾಚರಣೆಯ ವಿವಿಧ ಅಂಶಗಳ ಕುರಿತು ವಿಶ್ಲೇಷಣೆ ಮಾಡಲಾಯಿತು.
ಇಂತಹ ಅಣಕು ಅಭ್ಯಾಸಗಳನ್ನು ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳಂತೆ ನಿಯಮಿತವಾಗಿ ನಡೆಸಲಾಗುತ್ತಿದ್ದು, ವಿಪತ್ತು ಸಿದ್ಧತೆಯನ್ನು ಬಲಪಡಿಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ವೇಗವಾದ ಮತ್ತು ಸಮನ್ವಯಿತ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ.
ಪೃಥ್ವಿ ಎಸ್ ಹುಲ್ಲತ್ತಿ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ.
ಅಣಕು ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಸಮಗ್ರವಾಗಿ ಮೇಲ್ವಿಚಾರಣೆ ಮಾಡಿದರು. ಮೈಸೂರು ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕ ಮುದಿತ್ ಮಿಟ್ಟಲ್, ನೈರುತ್ಯ ರೈಲ್ವೆಯ ಮುಖ್ಯ ಸುರಕ್ಷತಾ ಅಧಿಕಾರಿ ರಾಮಕೃಷ್ಣ, ಹಾಗೂ ಮುಖ್ಯ ಯಾಂತ್ರಿಕ ಎಂಜಿನಿಯರ್ ಬಾಲಸುಂದರ್ ಪಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ನಾಗರಿಕ ಆಡಳಿತದ ಪ್ರತಿನಿಧಿಗಳು ಹಾಜರಿದ್ದರು