
ಹುಣಸೂರು (ಆ.2): ಚಿಪ್ಸ್ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಚಿಪ್ಸ್ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಮುಕುಂದ್ ಮಯೂರ್ (5) ಮೃತ ಬಾಲಕ. ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ-ಶಂಕರ್ ನಾಯಕ ಅವರ ಮೊಮ್ಮಗ, ಸಂತೋಷ್-ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿ ಬಾಲಕ.
ಮಾಹಿತಿಯ ಪ್ರಕಾರ, ಮಗು ಚಿಪ್ಸ್ ಪಾಕೆಟ್ ಖರೀದಿಸಿದೆ. ಆ ಪಾಕೆಟ್‌ನೊಂದಿಗೆ ಒಳಗೆ ಗಿಫ್ಟ್ ಬಾಲ್ ಬಂದಿದೆ.ಚಿಪ್ಸ್ ತಿಂದ ಬಳಿಕ ಗಿಫ್ಟ್ ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎಂದು ಎನ್ನಲಾಗುತ್ತಿದೆ.
ಈ ಆಘಾತಕಾರಿ ಘಟನೆಯಲ್ಲಿ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಪ್ಸ್ ಪಾಕೆಟ್ ಹೆಚ್ಚಾಗಿ ಚಿಕ್ಕ ಮಕ್ಕಳು ತಿನ್ನುತ್ತವೆ. ಕುರ್‌ಕುರೆಯಲ್ಲಿ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಇರುತ್ತೆಂಬುದನ್ನ ತಿಳಿಯದ ಮಕ್ಕಳು ಚಿಪ್ಸ್ ಎಂದು ತಿಂದರೆ ಅಥವಾ ನುಂಗಿ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಈಗ ಸಾವನ್ನಪ್ಪಿರುವ ಮಗು ಕೂಡ ಅದೇ ರೀತಿ ನಡೆದಿರುವ ಸಾಧ್ಯತೆಯೂ ಇದೆ. ಮಕ್ಕಳನ್ನ ಆಕರ್ಷಿಸಲು ಈ ರೀತಿ ಅಪಾಯಕಾರಿಯಾಗಿ ಬೇಜವಾಬ್ದಾರಿತನದಿಂದ ಗಿಫ್ಟ್ ಬಾಲ್‌ಗಳನ್ನು ಹಾಕುವ ಚಿಪ್ಸ್ ಮಾರಾಟಗಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮಗುವನ್ನು ಕಳೆದುಕೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.