
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಪ್ರಾಧಿಕಾರದ ಆದೇಶಗಳ ಬೆನ್ನಲ್ಲೇ, ರಾಜ್ಯ ಸರ್ಕಾರ ಇಂದು ಮಹತ್ವದ ಸರ್ವಪಕ್ಷ ಸಭೆ ಕರೆದಿದೆ. ಈ ನಿರ್ಣಾಯಕ ಸಂದರ್ಭದಲ್ಲಿ ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತೊಮ್ಮೆ ನಾಡಿನ ಹಿತಕ್ಕಾಗಿ ಮಿಡಿದಿದ್ದಾರೆ. ವೈಯಕ್ತಿಕವಾಗಿ ದೊಡ್ಡ ಶೋಕದಲ್ಲಿದ್ದರೂ, ಅನಾರೋಗ್ಯ ಕಾಡುತ್ತಿದ್ದರೂ ನಾಡಿನ ಹಿತಾಸಕ್ತಿಗಾಗಿ ದೇವೇಗೌಡರು ತೋರಿರುವ ಬದ್ಧತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತೀಚೆಗಷ್ಟೇ ದೇವೇಗೌಡರ ಪತ್ನಿ ಚನ್ನಮ್ಮ ಅವರು ನಿಧನರಾಗಿದ್ದಾರೆ. ದಶಕಗಳ ಕಾಲ ಜೊತೆಗಿದ್ದ ಸಂಗಾತಿಯ ಅಗಲಿಕೆಯಿಂದ ದೇವೇಗೌಡರು ತೀವ್ರ ದುಃಖದಲ್ಲಿದ್ದಾರೆ. ಇದರ ಜೊತೆಗೆ ವಯೋಸಹಜ ಅನಾರೋಗ್ಯವೂ ಅವರನ್ನು ಕಾಡುತ್ತಿದೆ.
ಇಂದು ನಡೆಯುತ್ತಿರುವ ಸರ್ವಪಕ್ಷ ಸಭೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗೌಡರಿಗೆ ಆಹ್ವಾನ ನೀಡಿದ್ದರು. ಸಭೆಗೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದರೂ, ದೇವೇಗೌಡರು ಕಳುಹಿಸಿರುವ ಸಂದೇಶ ಪ್ರತಿಯೊಬ್ಬ ಕನ್ನಡಿಗನ ಹೃದಯ ಮುಟ್ಟುವಂತಿದೆ.
ಸಭೆಗೆ ಆಹ್ವಾನ ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ತಿಳಿಸಿರುವ ದೇವೇಗೌಡರು, ರಾಜ್ಯದ ಹಿತಾಸಕ್ತಿ, ನಮ್ಮ ರೈತರ ಬದುಕು ಮತ್ತು ಕಾವೇರಿ ಜಲಾನಯನ ಪ್ರದೇಶದ ಜನರ ನೀರಿನ ಹಕ್ಕುಗಳನ್ನು ರಕ್ಷಿಸುವ ವಿಷಯದಲ್ಲಿ ರಾಜ್ಯ ಸರ್ಕಾರದ ಕಾನೂನಾತ್ಮಕ ಪ್ರಯತ್ನಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಸಭೆಗೆ ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ ಅವರು, ರಾಜ್ಯದ ಹಿತ ಕಾಪಾಡುವ ನಿರ್ಧಾರಗಳಿಗೆ ತಾವು ಸದಾ ಜೊತೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ತಮ್ಮ ಅನುಪಸ್ಥಿತಿಯಲ್ಲಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌ನ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಾನೂನಾತ್ಮಕ ಹೋರಾಟ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ಗೌಡರು ತಮ್ಮ ಸಲಹೆಗಳನ್ನು ರವಾನಿಸಿದ್ದಾರೆ.
ಕಾವೇರಿ ವಿಷಯ ಬಂದಾಗಲೆಲ್ಲ ರಾಜಕೀಯ ಮರೆತು ಒಂದಾಗುವ ಕರ್ನಾಟಕದ ಪರಂಪರೆಯನ್ನು ದೇವೇಗೌಡರು ಎತ್ತಿ ಹಿಡಿದಿದ್ದಾರೆ. ನನಗೆ ಆರೋಗ್ಯ ಸರಿ ಇಲ್ಲದಿರಬಹುದು, ಮನಸ್ಸಿಗೆ ನೋವಿರಬಹುದು, ಆದರೆ ನಾಡಿನ ರೈತರಿಗೆ ಅನ್ಯಾಯವಾಗಬಾರದು ಎಂಬ ಅವರ ಈ ನಿಲುವು ರಾಜ್ಯದ ಜನರ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಸದ್ಯ ವಿಧಾನಸೌಧದಲ್ಲಿ ಸರ್ವಪಕ್ಷ ಸಭೆ ಆರಂಭವಾಗಿದ್ದು ದೇವೇಗೌಡರ ಸಲಹೆಗಳು ಮತ್ತು ಮಾರ್ಗದರ್ಶನ ಸಭೆಯ ಪ್ರಮುಖ ಭಾಗವಾಗಲಿವೆ.