
ಮೈಸೂರು: ಇತ್ತೀಚೆಗೆ ಪ್ರಕಟವಾದ ಕ್ಯು.ಎಸ್. ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ದಕ್ಷಿಣ ಏಷ್ಯಾ ದೇಶಗಳ ನಡುವೆ 247ನೇ ಸ್ಥಾನವನ್ನು ಹಾಗೂ ಕರ್ನಾಟಕದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪೈಕಿ 1ನೇ ಸ್ಥಾನವನ್ನು ಪಡೆದಿದೆ ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದ್ದಾರೆ.
ಹನ್ನೊಂದು ಅಂಶಗಳನ್ನಾಧರಿಸಿ ಕ್ಯು.ಎಸ್. ಸಂಸ್ಥೆಯು ಪ್ರತಿ ವರ್ಷವೂ ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರ್ಯಾಂಕಿಂಗ್ ನೀಡುತ್ತದೆ. ಅವುಗಳಲ್ಲಿ ಪ್ರಮುಖವೆಂದರೆ: ಶೈಕ್ಷಣಿಕ ವರ್ಚಸ್ಸು, ವಿದ್ಯಾರ್ಥಿ-ಅಧ್ಯಾಪಕರ ಅನುಪಾತ, ಅಂತಾರಾಷ್ಟ್ರೀಯ ಒಡಂಬಡಿಕೆಗಳು, ಉದ್ಯೋಗದಾತರು ಹೊಂದಿರುವ ಅಭಿಪ್ರಾಯ ಹಾಗೂ ಸಂಶೋಧನಾ ಪ್ರಕಟಣೆಗಳು. ಮೈಸೂರು ವಿಶ್ವವಿದ್ಯಾನಿಲಯವು ಬೋಧನೆ, ಸಂಶೋಧನೆ ಹಾಗೂ ಉದ್ಯೋಗ ಸೃಷ್ಟಿಯ ಆಯಾಮಗಳಲ್ಲಿ ಉತ್ತಮ ಸಾಧನೆ ಮಾಡಿ ಈ ಸ್ಥಾನವನ್ನು ಪಡೆದಿರುತ್ತದೆ.
ಕಾಯಂ ಅಧ್ಯಾಪಕರ ಕೊರತೆ ಹಾಗೂ ಇನ್ನಿತರ ಮಿತಿಗಳ ನಡುವೆಯೂ ಮೈಸೂರು ವಿಶ್ವವಿದ್ಯಾನಿಲಯವು 247ನೇ ಸ್ಥಾನ ಪಡೆದಿರುವುದು ಅಭಿಮಾನದ ಸಂಗತಿಯಾಗಿದೆ. ಕ್ಯು.ಎಸ್. ಸಂಸ್ಥೆಯ ಮಾರ್ಗಸೂಚಿಯನ್ವಯ ಇಡೀ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ನಿಖರವಾಗಿ ಹಾಗೂ ಸಮರ್ಪಕವಾಗಿ ಬಿಂಬಿಸಿದ ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ವಿಶೇಷವಾಗಿ ಶ್ಲಾಘಿಸುತ್ತೇನೆ. ಮುಂದುವರಿದು, ವಿಶ್ವವಿದ್ಯಾನಿಲಯದ ಈ ಯಶಸ್ಸಿಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧ್ಯಾಪಕ ಹಾಗೂ ಅಧ್ಯಾಪಕೇತರ ವರ್ಗದವರು, ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ.
ಮೈಸೂರು: ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2ನೇ ಹಾಗೂ 3ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೊಳ 66/11 ಕೆ.ವಿ. ವಿತರಣಾ ಕೇಂದ್ರದಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ನ. 12ರ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದೆಂದು ಶ್ರೀರಂಗಪಟ್ಟಣದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ ನೀರು ಸರಬರಾಜು ಯೋಜನೆಯ 813 ಎಂ.ಎಂ ವ್ಯಾಸದ ಹಳೆಯ ಕೊಳವೆ ಮಾರ್ಗದಿಂದ ಹೊಸ ಕೊಳವೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲು ನ. 12ರ ಬೆಳಗ್ಗೆ 10 ರಿಂದ 13ರ ಬೆಳಗ್ಗೆ 9ರವರೆಗೆ ಕೆ.ಆರ್.ಎಸ್. ರಸ್ತೆಯ ರಾಯಲ್ ಇನ್ ವೃತ್ತದಲ್ಲಿ ಕೊಳವೆಮಾರ್ಗ ಸ್ಥಳಾಂತರ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ವತಿಯಿಂದ ಕೈಗೆತ್ತಿಕೊಳ್ಳಲಾಗುವುದರಿಂದ ಸದರಿ ದಿನಾಂಕಗಳಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ನೀರನ್ನು ಶೇಖರಿಸಿಕೊಂಡು ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಲು ಈ ಮೂಲಕ ಕೋರಲಾಗಿದೆ.
ಸಿ.ಎಸ್.ಆರ್ ಮತ್ತು ಹೆಚ್.ಎಲ್.ಆರ್ ಪ್ರಾಂತ್ಯಗಳಿಗೆ, ವಾರ್ಡ್ ನಂ. 1 ರಿಂದ 8, ವಾರ್ಡ್ ನಂ. 17 ರಿಂದ 26, ವಾರ್ಡ್ ನಂ. 40 ರಿಂದ 45 ಇದಕ್ಕೆ ಸಂಬಂಧಪಟ್ಟ ಡಿ.ಎಂ.ಎ. ಪ್ರದೇಶಗಳಾದ ಹೆಬ್ಬಾಳ, ಲಕ್ಷಿಕಾಂತನಗರ, ಮಂಚೇಗೌಡನ ಕೊಪ್ಪಲು, ಮಹದೇಶ್ವರ ಲೇಔಟ್, ಕುಂಬಾರಕೊಪ್ಪಲು, ಮೇಟಗಳ್ಳಿ, ಲೋಕನಾಯಕನಗರ, ಬೃಂದಾವನ ಬಡಾವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಬನ್ನಿಮಂಟಪ, ಯಾದವಗಿರಿ, ಸುಬ್ಬರಾಯನಕೆರೆ. ಮಂಡಿಮೊಹಲ್ಲಾ, ತಿಲಕ್ ನಗರ, ಲಷ್ಕರ್ಮೊಹಲ್ಲಾ, ಕೆ.ಜಿ.ಕೊಪ್ಪಲ್, ಟಿ,ಕೆ ಲೇಔಟ್, ಜನತನಗರ, ಶಾರದದೇವಿನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1, 2, 3ನೇ ಹಂತ, ಗೋಕುಲಂ 1, 2, 3ನೇ ಹಂತ, ಜಯಲಕ್ಷಿಪುರಂ ಹಾಗೂ ಹೊರವಲಯಗಳಾದ ಆರ್.ಎಂ.ಪಿ., ಬಿ.ಇ.ಎಂಎಲ್, ಬನ್ನಿಮಂಟಪ ಎ.ಬಿ.ಸಿ.ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶ: ಎನ್.ಆರ್. ಮೊಹಲ್ಲಾ ಭಾಗಶ: ಪ್ರದೇಶಗಳು, ನಜರ್ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ಜನತಾ ನಗರ, ಕೆ.ಹೆಚ್.ಬಿ. ಕಾಲೋನಿ, ಹೂಟಗಳ್ಳಿ ಹಾಗೂ ಇತ್ಯಾದಿ ಪ್ರದೇಶಗಳು.