ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಪ್ರಗತಿ ಕುಂಠಿತಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಪ್ರಗತಿ ಕುಂಠಿತಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಪಂ ಡಿ. ಸಭಾಂಗಣದಲ್ಲಿ ಶುಕ್ರವಾರ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಚಿವರು, ಕ್ಕಿಂತಲೂ ಮೈಸೂರು ಜಿಲ್ಲೆ ಪ್ರಗತಿಯಲ್ಲಿ ಹಿಂದುಳಿದಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
undefined
ಮೈಸೂರಲ್ಲಿ ಪ್ರಬುದ್ಧರು, ಬೌದ್ಧಿಕವಾಗಿ ನಮ್ಮ ಭಾಗಗಿಂತ ಮುಂದಿದ್ದಾರೆ. ಮೈಸೂರಿನ ಸಮಕ್ಕೆ ಬರಲೆಂದು 371ಜೆ ವಿಶೇಷ ಪ್ರಾತಿನಿಧ್ಯ ಪಡೆದಿದ್ದೇವೆ ಅನಿಸಿತು. ಆದರೆ, ಪ್ರಗತಿಯಲ್ಲಿ ನಿಮಗಿಂತಲೂ ನಾವು ಮುಂದಿದ್ದೇವೆ ಎಂದು ಅವರು ಅಧಿಕಾರಿಗಳ ಕಿಡಿಕಾರಿದರು.
ಈ ಸಾಲಿನಲ್ಲಿ ನರೇಗಾ ಗುರಿಯನ್ನು ವೈಜ್ಞಾನಿಕವಾಗಿ ನಿಗದಿಪಡಿಸಿಲ್ಲ. ಪ್ರಗತಿಯೂ ಸರಿ ಇಲ್ಲ. ಹೀಗಾದರೆ ಗುರಿಯನ್ನು ಯಾವ ರೀತಿ ಮುಟ್ಟುತ್ತೀರಿ? ರಾಜ್ಯದ ಪ್ರಗತಿಗಿಂತಲೂ ಮೈಸೂರು ಜಿಲ್ಲೆ ಪ್ರಗತಿ ಕಡಿಮೆ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಅಡಿ ಮಾನವ ದಿನಗಳ ಸೃಜನೆಯಲ್ಲಿ ಟಿ. ನರಸೀಪುರ, ನಂಜನಗೂಡು ಹಾಗೂ ಪಿರಿಯಾಪಟ್ಟಣ ತಾಲೂಕುಗಳು ಶೇ.50 ಕಡಿಮೆ ಇದೆ. ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳ ಗುರಿ ಇತ್ತು, ಇದರಲ್ಲಿ 10 ಕೋಟಿ ಮಾನವ ದಿನಗಳ ಗುರಿ ಸಾಧಿಸಿದ್ದೇವೆ. ಆದರೆ, ಮೈಸೂರು ಜಿಲ್ಲೆಯಲ್ಲಿ ಪ್ರಗತಿ ಉತ್ತಮವಾಗಿಲ್ಲ ಎಂದರು.
ತಾಪಂ ಇಒಗಳಿಗೆ ನರೇಗಾ ಬಿಟ್ಟರೆ ಬೇರೆ ಕೆಲಸ ಇಲ್ಲ. ಆದರೂ ಕಾಮಗಾರಿಗಳ ಸ್ಥಳ ವೀಕ್ಷಣೆಯನ್ನು ಶೇ.100 ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅಧಿಕಾರಿಗಳು ಕೆಲಸ ಮಾಡಲು ನಿರ್ಲಕ್ಷ್ಯ ವಹಿಸಿದರೆ ಸದನದಲ್ಲಿ ಉತ್ತರ ಕೊಡುವಾಗ ನಾನು ತಲೆ ಬಾಗಬೇಕಾಗುತ್ತದೆ ಎಂದರು.
ಅಧಿಕಾರಿಗಳು ನೆನ್ನೆ- ಮೊನ್ನೆ ಅಧಿಕಾರ ವಹಿಸಿಕೊಂಡೆ ಎಂದು ಸಬೂಬು ಹೇಳಬಾರದು. ಇದಕ್ಕೆ ವಿನಾಯಿತಿ ಇಲ್ಲ. ಹಿಂದಿನ ನ್ಯೂನತೆ ಸರಿಪಡಿಸಿಕೊಂಡು ಮುಂದಕ್ಕೆ ಹೋಗಬೇಕಾದ್ದು, ಅಧಿಕಾರಿಗಳ ಕರ್ತವ್ಯ. ಹಿಂದಿನ ಬಿಜೆಪಿ ಸರ್ಕಾರ ತಪ್ಪು ಮಾಡಿದೆಂತು ನಾನು ಸುಮ್ಮನಿದ್ದರೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿಯು ಸಮರ್ಪಕವಾಗಿ ಆಗಿಲ್ಲ. ತೆರಿಗೆ ವಸೂಲಾತಿಯಲ್ಲಿ ನಿಗದಿತ ಗುರಿ ಮುಟ್ಟಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಸಂಬಳ ನೀಡಲು ಕೊರತೆ ಉಂಟಾಗುತ್ತಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ತೆರಿಗೆ ವಸೂಲಾತಿ ಹೆಚ್ಚಿಸಬೇಕು ಎಂದು ಅವರು ಸೂಚಿಸಿದರು.
ಶಾಸಕರಾದ ಅನಿಲ್ ಚಿಕ್ಕಮಾದು, ಕೆ. ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ, ಜಿ.ಡಿ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ ಕುಮಾರ್ ಮಾಲಪತಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮೊದಲಾದವರು ಇದ್ದರು.
24 ಗಂಟೆಯಲ್ಲಿ ಅಂಕಿ ಅಂಶ ಮಾಹಿತಿ ಬದಲು
ಮೈಸೂರು ಜಿಲ್ಲೆಯ ಪ್ರಗತಿಪರಿಶೀಲನಾ ಸಭೆ ಸಂಬಂಧ ಪವರ್ ಪ್ರಾಜೆಕ್ಟ್ ನಲ್ಲಿ ಪ್ರದರ್ಶಿಸಿದ ಮಾಹಿತಿಗೂ ಬುಕ್ ಲೆಟ್ ನಲ್ಲಿ ನೀಡಲಾಗಿದ್ದ ಮಾಹಿತಿಗೂ ವ್ಯತ್ಯಾಸ ಇರುವುದನ್ನು ಗಮನಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗ ಜರುಗಿತು.
ಅಧಿಕಾರಿಗಳು ವಿವರಣೆ ನೀಡಲು ಮುಂದಾದಗ ಮೈಸೂರಲ್ಲಿ ಅಂಕಿ ಬದಲಾಗುವ ಮಂತ್ರ ಇದೆಯೇ? ಪ್ರಶ್ನಿಸಿದರು. ಒಂದು ದಿನದ ಹಿಂದೆ ನನಗೆ ನೀಡಿರುವ ವರದಿಯೇ ಒಂದು ರೀತಿ ಇದೆ. ಇಲ್ಲಿ ಪ್ರದರ್ಶಿಸುತ್ತಿರುವ ಮಾಹಿತಿಯೇ ಬೇರೆ ಇದೆ. 24 ಗಂಟೆಯಲ್ಲಿ ಅಂಕಿ ಅಂಶಗಳು ಅದಲು ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತನಿಖೆ ಪೂರ್ಣಗೊಳಿಸಿ
ತಮ್ಮ ಇಲಾಖೆ ಭ್ರಷ್ಟಾಚಾರ, 15ನೇ ಹಣಕಾಸು ದುರುಪಯೋಗ ಸಂಬಂಧ ದೂರುಗಳು ಬಂದರೆ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಜನರಿಂದ ಆಕ್ಷೇಪ ಬಂದಿದೆ. ಇದರಿಂದ ನಮ್ಮ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ, ಅಧಿಕಾರಿಗಳ ವಿರುದ್ಧದ ದೂರು ಪ್ರಕರಣಗಳನ್ನು ನ.20ರ ಒಳಗೆ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಎಂಎಲ್ಸಿಗೆ ಮುಜುಗರ
ರಾಜ್ಯ ಮತ್ತು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳಿದ್ದ ಸಭೆಯಲ್ಲಿ ಆರ್.ಟಿ.ಐಗೆ ಅರ್ಜಿ ಹಾಕಿ ಮಾಹಿತಿ ಪಡೆಯುವುದಾಗಿ ವಿಧಾನಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಹೇಳಿ ಮುಜುಗರಕ್ಕೆ ಒಳಗಾದರು.
ಎಲ್ಲಾ ಅಧಿಕಾರಿಗಳು ಇಲ್ಲೇ ಇದ್ದಾರೆ. ಆರ್.ಟಿ.ಐಗೆ ಯಾಕೇ ಅರ್ಜಿ ಹಾಕಬೇಕು? ನಿಮಗೆ ಬೇಕಾದ ಮಾಹಿತಿ ಕೇಳಿ ಕೊಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಈ ವೇಳೆ ಸಭೆಯಲ್ಲಿದ್ದ ಶಾಸಕರು ನಕ್ಕಾಗ ಸಿಟ್ಟಾದ ಸಿ.ಎನ್. ಮಂಜೇಗೌಡ ಅವರು, ಅದನ್ನೇ ಯಾಕೇ ದೊಡ್ಡದು ಮಾಡುತ್ತೀರಿ? ನೂರಾರು ಕೋಟಿ ಹಗರಣ ನಡೆದಿದೆ ನಿಮಗೆ ಗೊತ್ತೇ ಎಂದು ಸಿಡಿಮಿಡಿಗೊಂಡರು.
ಹೂ ತ್ಯಾಜ್ಯ ಘಟಕ ಸ್ಥಾಪನೆ
ಚಾಮುಂಡಿಬೆಟ್ಟ, ನಂಜನಗೂಡು ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಹೂ ತ್ಯಾಜ್ಯ ಬಳಕೆಗೆ ಕ್ರಮ ವಹಿಸಬೇಕಿದೆ. ಈ ಸಂಬಂಧ ಸೈಕಲ್ ಅಗರಬತ್ತಿಯವರೊಂದಿಗೆ ಚರ್ಚಿಸುವೆ. ಪಂಚಾಯತ್ ರಾಜ್ ಇಲಾಖೆ ವತಿಯಿಂದ ಘಟಕ ನಿರ್ಮಿಸಿ ಕೊಡಲಾಗುವುದು. ಎನ್‌ಆರ್‌ಎಲ್‌ಎಂ ಮುಖಾಂತರ ತರಬೇತಿ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಎಚ್.ಡಿ. ಕೋಟೆ ತಾಲೂಕಿಗೆ 4 ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುಮೋದನೆ ಕೊಡಿಸಬೇಕು. ಹಾಡಿ ಜನರು ಉತ್ಪಾದಿಸುವ ಜೇನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವಿವಿಧ ಸಮುದಾಯಗಳ ಭವನಗಳಲ್ಲಿ ಗ್ರಂಥಾಲಯ ಆರಂಭಿಸಬೇಕು.
- ಅನಿಲ್ ಚಿಕ್ಕಮಾದು, ಶಾಸಕ