ಹಲವು ರೀತಿಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ, ಕಾರ್ಮಿಕ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ನಡೆಸುತ್ತಿದ್ದು ಈ ಬಂದ್‌ಗೆ ಮೈಸೂರಿನಿಂದಲೂ ಕೂಡ ಬೆಂಭಲ ವ್ಯಕ್ತವಾಗುತ್ತಿದೆ.
ಮೈಸೂರು [ಜ.06]: ಕೇಂದ್ರದ ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿ ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಜ. 8 ರಂದು ನಡೆಸುತ್ತಿರುವ ಭಾರತ್ ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲ ಸೂಚಿಸಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೃಷಿ ಬಿಕ್ಕಟ್ಟು ಇನ್ನಷ್ಟುತೀವ್ರಗೊಂಡಿದೆ. ನವ ಉದಾರೀಕರಣವನ್ನು ಕೃಷಿ ಕ್ಷೇತ್ರದಲ್ಲಿ ಜಾರಿ ಮಾಡುವ ಬರದಲ್ಲಿ ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿರುವುದು ಖಂಡನೀಯ. ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಘವು ಗ್ರಾಮೀಣ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಅಂದು ಗ್ರಾಮೀಣ ರೈತರು ತಮ್ಮ ಉತ್ಪನ್ನಗಳನ್ನು ನಗರ ವಲಯಗಳಿಗೆ ನೀಡಬೇಡಿ ಎಂದು ಮನವಿ ಮಾಡಿದರು.
undefined
ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಪ್ರತಿ ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ರೈತರ ಸಂಖ್ಯೆ 48 ಆಗಿತ್ತು. ಅವರು ಅಧಿಕಾರಕ್ಕೆ ಬಂದ ನಂತರ 54ಕ್ಕೆ ಏರಿದೆ. ರೈತರಿಗೆ ಅನುಕೂಲಕಾರಿಯಾಗುವ ಬೆಳೆ ವಿಮೆಗಳನ್ನು ರಿಲಿಯಸ್ಸ್ ಮೂಲಕ ಕಾರ್ಪೊರೇಟ್ ಕಂಪನಿಗೆ ಅವಕಾಶ ಮಾಡಿಕೊಟ್ಟು, ಜನ ವಿರೋಧಿ ಹಾಗೂ ರೈತ ವಿರೋಧಿ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಅವರು ಆರೋಪಿಸಿದರು.
ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸುವ ‘ಋುಣ ಮುಕ್ತ ಕಾಯ್ದೆ’ ಜಾರಿ, ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಬೇಕು. ರಾಜ್ಯದ ಪ್ರವಾಹ ಪೀಡಿತರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಬಗರ್ ಹುಕ್ಕು ಸಾಗುವಳಿ ಭೂಮಿಯ ಸಕ್ರಮಕ್ಕಾಗಿ, ರೈತ ವಿರೋಧಿ ರಾಜ್ಯ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಕೈ ಬಿಡಬೇಕು. ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಜಾರಿಯಾಗಬೇಕು ಹಾಗೂ ಕೆಲಸ ದಿನಗಳನ್ನು 200ಕ್ಕೆ ಏರಿಸಬೇಕು, ಕಬ್ಬಿನ ಬಾಕಿ, ಸೂಕ್ತ ಬೆಲೆ ನಿಗದಿ ಆಗಬೇಕು ಮತ್ತು ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಬಂದ್‌ಗೆ ಕರೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ದೂರ ಕೆಂಪಯ್ಯ, ಕಾರ್ಯದರ್ಶಿ ಶಂಕರ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಪಿ. ಮರಂಕಯ್ಯ ಇದ್ದರು.