Mysuru Dasara 2026: ಕುಶಾಲತೋಪು ಶಬ್ದಕ್ಕೆ ಅಂಜದೇ ಧೈರ್ಯ ಪ್ರದರ್ಶಿಸಿದ ಮೈಸೂರು ದಸರಾ ಗಜಪಡೆ!

Sathish Kumar KH   | Kannada Prabha
Published : Sep 20, 2026, 04:13 PM IST
Mysuru Dasara Kushalathopu

ಸಾರಾಂಶ

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಜಪಡೆ ಹಾಗೂ ಅಶ್ವಾರೋಹಿ ದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ಧೈರ್ಯ ಪ್ರದರ್ಶಿಸಿದರೆ, ಮೊದಲ ಬಾರಿಗೆ ಬಂದಿದ್ದ ಶ್ರೀಕಂಠ ಮತ್ತು ಹೇಮಾವತಿ ಆನೆಗಳು ಆರಂಭದಲ್ಲಿ ಶಬ್ದಕ್ಕೆ ಬೆಚ್ಚಿಬಿದ್ದವು. ಜಂಬೂಸವಾರಿ ವೇಳೆ ಆನೆಗಳು ಹೆದರದಂತೆ ಈ ತಾಲೀಮು ನಡೆಸಲಾಗುತ್ತದೆ.

ಮೈಸೂರು (ಸೆ.20): ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ 14 ಆನೆಗಳು ಹಾಗೂ ಅಶ್ವರೋಹಿದಳದ 30 ಕುದುರೆಗಳಿಗೆ ಶಬ್ದವನ್ನು ಪರಿಚಯಿಸುವ ಕುಶಾಲತೋಪು ಸಿಡಿಸುವ ತಾಲೀಮು ಸೋಮವಾರ ಯಶಸ್ವಿ ಜರುಗಿತು.

ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಸಿಎಆರ್ ಪೊಲೀಸರು 7 ಪಿರಂಗಿ ಬಳಸಿ ತಲಾ ಮೂರು ಸುತ್ತಿನಂತೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿದರು. ಈ ವೇಳೆ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಲ್ಲಾ ಆನೆಗಳು ಧೈರ್ಯ ಪ್ರದರ್ಶಿಸಿದವು. ಇದೇ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ ಶ್ರೀಕಂಠ ಮತ್ತು ಹೇಮಾವತಿ ಆನೆಗಳು ಆರಂಭದಲ್ಲಿ ಬೆಚ್ಚಿದವು. ಉಳಿದ ಆನೆಗಳು ಧೈರ್ಯ ಪ್ರದರ್ಶಿಸಿದವು. ಇನ್ನೂ ಅಶ್ವರೋಹಿದಳದ 30 ಕುದುರೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದು, ಕೆಲವು ಕುದುರೆಗಳು ಕುಶಾಲತೋಪು ಶಬ್ದಕ್ಕೆ ಬೆಚ್ಚಿದವು.

ಮೊದಲ ಹಂತದ ಕುಶಾಲತೋಪು ಸಿಡಿಮದ್ದು ತಾಲೀಮಿಗೂ ಮುನ್ನ ಆನೆಗಳ ಮುಂದೆ 2 ಬಾರಿ ಪಟಾಕಿ ಸಿಡಿಸಲಾಯಿತು. ಪಟಾಕಿ ಸಿಡಿತದ ಶಬ್ದಕ್ಕೆ ಶ್ರೀಕಂಠ, ಹೇಮಾವತಿ ಆನೆ ಹಾಗೂ ಕೆಲವು ಕುದುರೆಗಳು ಗಲಿಬಿಲಿಗೊಂಡವು. ಆ ನಂತರ ಕುಶಾಲತೋಪು ಸಿಡಿಸಲಾಯಿತು.

ತಿರುಗಿನಿಂತ ಶ್ರೀಕಂಠ, ಘೀಳಿಟ್ಟ ಹೇಮಾವತಿ

ಮೊದಲ ಸುತ್ತಿನ ಕುಶಾಲತೋಪು ಸಿಡಿತ ವೇಳೆ ಶ್ರೀಕಂಠ ಆನೆಯು ಹಿಮ್ಮುಖವಾಗಿ ಚಲಿಸಿತು. ಮಾವುತ ಮತ್ತು ಕಾವಾಡಿಗಳು ಶ್ರೀಕಂಠನನ್ನು ಸಮಾಧಾನಪಡಿಸಿದರು. ಇನ್ನೂ 11 ವರ್ಷದ ಹೇಮಾವತಿ ಆನೆಯು ನೆಲಕ್ಕೆ ಸೊಂಡಲನ್ನು ಒತ್ತಿಕೊಂಡು ಘೀಳಿಟ್ಟಿತ್ತು. 2 ಮತ್ತು 3ನೇ ಸುತ್ತಿನ ಕುಶಾಲತೋಪು ಸಿಡಿಯುವಷ್ಟರಲ್ಲಿ ಶ್ರೀಕಂಠ ಆನೆಯು ಶಬ್ದಕ್ಕೆ ಹೊಗ್ಗಿಕೊಳ್ಳಲು ಆರಂಭಿಸಿತು. ಆದರೆ, ಹೇಮಾವತಿ ಆನೆಗೆ ಮಾತ್ರ ಶಬ್ದದಿಂದ ಆತಂಕಗೊಂಡಿತ್ತು. ಮಾವುತ ಮತ್ತು ಕಾವಾಡಿಗಳ ನೀಡಿದ ಧೈರ್ಯದಿಂದ ನಂತರ ಹೇಮಾವತಿ ಸಹ ಶಬ್ದಕ್ಕೆ ಹೊಗ್ಗಿಕೊಳ್ಳಲು ಆರಂಭಿಸಿತು.

ಉಳಿದಂತೆ ಕ್ಯಾಪ್ಟನ್ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಗೋಪಿ, ಸುಗ್ರೀವ, ಕಾವೇರಿ, ಲಕ್ಷ್ಮಿ ಮತ್ತು ಹೊಸ ಆನೆಯಾದ ರೂಪಾ ಸಹ ಕುಶಾಲತೋಪಿನ ಶಬ್ದಕ್ಕೆ ಜಗ್ಗದೆ ಮುನ್ನುಗುವ ಮೂಲಕ ಧೈರ್ಯ ಪ್ರದರ್ಶಿಸಿದವು.

ಮೂರನೇ ಸುತ್ತಿನ ಕುಶಾಲತೋಪು ಸಿಡಿಯುತ್ತಿದ್ದಂತೆ ಎಲ್ಲಾ ಆನೆಗಳು ಪಿರಂಗಿಗಳತ್ತ ಮುನ್ನುಗ್ಗಲಾರಂಭಿಸಿದ್ದವು. ನಂತರ ಎಲ್ಲಾ ಆನೆಗಳು ಪಿರಂಗಿಯತ್ತ ಸಾಗಿ, ಕುಶಾಲತೋಪಿನ ವಾಸನ ಗ್ರಹಿಸಿ, ಸೊಂಡಿಲೆತ್ತಿ ವಂದಿಸಿದವು. ಬಳಿಕ ಎಲ್ಲಾ ಆನೆಗಳು ಅರಮನೆ ಆವರಣದ ಆನೆ ಬಿಡಾರಕ್ಕೆ ವಾಪಸ್ ಆದವು.

ಈ ವೇಳೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜು, ಸಿದ್ದನಗೌಡ ವೈ. ಪಾಟೀಲ್, ಎ. ಮಾರುತಿ, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಮೊದಲಾದವರು ಇದ್ದರು.

21 ಬಾರಿ ಕುಶಾಲತೋಪು

ದಸರಾ ಜಂಬೂಸವಾರಿ ವೇಳೆ 21 ಬಾರಿ ಸಿಡಿಮದ್ದು ಸಿಡಿಸಲಾಗುತ್ತದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ವೇಳೆ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಲಿದೆ. ಈ ವೇಳೆ ಒಂದೇ ನಿಮಿಷದಲ್ಲಿ 7 ಪಿರಂಗಿಗಳನ್ನು ಬಳಸಿ 21 ಬಾರಿ ಸಿಡಿಮದ್ದು ಸಿಡಿಸಿ ಗೌರವಿಸಲಾಗುತ್ತದೆ. ಈ ಸವಾಲಿನ ಕೆಲಸವನ್ನು ಪಿರಂಗಿ ದಳದ 30 ಸಿಬ್ಬಂದಿ ನಿಭಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗಜಪಡೆ, ಅಶ್ವಾರೋಹಿ ದಳಕ್ಕೆ ಪಿರಂಗಿ ಶಬ್ದ ಪರಿಚಯಿಸುವ ತಾಲೀಮು ನಡೆಸಲಾಗುತ್ತದೆ.

ಕುಶಾಲತೋಪು ತಾಲೀಮಿನಲ್ಲಿ ಎಲ್ಲಾ ಆನೆಗಳು ಬಹಳ ಚೆನ್ನಾಗಿ ವರ್ತಿಸಿವೆ. ಮೊದಲ ಸುತ್ತಿನಲ್ಲಿ ಕೆಲವು ಆನೆಗಳು ಹೆದರಿದವು. 2 ಮತ್ತು 3ನೇ ಸುತ್ತಿನಲ್ಲಿ ಆನೆಗಳು, ಕುದುರೆಗಳು ಹೆದರಲಿಲ್ಲ. ಮೂರು ಹಂತದಲ್ಲಿ ಪಿರಂಗಿ ತಾಲೀಮು ನಡೆಯಲಿದೆ. ಎಲ್ಲಾ ಆನೆಗಳು ಉತ್ತಮವಾಗಿ ಸ್ಪಂದಿಸುತ್ತಿವೆ.

- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ

ಜಂಬೂಸವಾರಿಯಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮತ್ತು ಪಂಜಿನ ಕವಾಯಿತಿನ ಸಮಯದಲ್ಲಿ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಇಂತಹ ಸಮಯದಲ್ಲಿ ಆನೆಗಳು ಮತ್ತು ಕುದುರೆಗಳು ಹೆದರೆದೆ ಸ್ಥಿರವಾಗಿ ನಿಂತುಕೊಳ್ಳಬೇಕೆಂಬ ದೃಷ್ಟಿಯಿಂದ ಈ ತಾಲೀಮನ್ನು ನಡೆಸಲಾಗುತ್ತಿದೆ.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

PREV
Read more Articles on
click me!

Recommended Stories

ಬೆಳಗಾವಿ ದಮೋನೆ ಫ್ಯಾಮಿಲಿ ದುರಂತದ ಟ್ವಿಸ್ಟ್: 6 ಜನರ ಸಾವಿಗೆ ಫ್ರಿಡ್ಜ್ ಬ್ಲಾಸ್ಟ್ ಕಾರಣವಲ್ಲ, CCTV ವಿಡಿಯೋ ಸಂದೇಹ!
ಪ್ರತಿಷ್ಠಿತ ಫಾಲ್ಕೆ ಪ್ರಶಸ್ತಿಗೆ ಸಿಗುವ ಮೊತ್ತವೆಷ್ಟು? ಸಿಗುವ ಸೌಲಭ್ಯಗಳೇನು? ಪ್ರಶಸ್ತಿ ಆರಂಭವಾಗಿದ್ದು ಹೇಗೆ