
ಚಿಕ್ಕಮಗಳೂರು: ನಾಳೆಯಿಂದ ವಿಧಾನಮಂಡಲ ಉಭಯ ಸದನಗಳ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ. ವಿಶೇಷವಾಗಿ ಪಶ್ಚಿಮ ಘಟ್ಟದ ಕುರಿತು ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಈ ವಿಶೇಷ ಸದನದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದರ ನಡುವೆ ಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಮಾತನಾಡಿ, ಇವತ್ತು ಏನು ಕಸ್ತೂರಿ ರಂಗನ್ ಭೀತಿ ಇದೆ, ನಾನು ಜನರ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಜನರ ಭಾವನೆ ಅರಿತುಕೊಂಡು ಮುಂದುವರಿಯುತ್ತೇವೆ. ಜನರ ಭೀತಿಯನ್ನು ಯಾವ ರೀತಿ ತಪ್ಪಿಸಬೇಕು ಅನ್ನೋದರ ಬಗ್ಗೆ, ಸಮಸ್ಯೆಯನ್ನು ತಿಳಿಯುವುದಕ್ಕೆ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದೇನೆ. ಕಸ್ತೂರಿ ರಂಗನ್ ವರದಿ ಸಮಸ್ಯೆಯನ್ನು ಜನರಿಂದ ದೂರ ಮಾಡಲು, ಮಂಗಳೂರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗಕ್ಕೆ ಹೋಗಿ ಬಂದಿದ್ದೇನೆ. ಹಾಸನ ಜಿಲ್ಲೆಗೆ ಹೋಗಿ ಜನರ ಸಮಸ್ಯೆಯನ್ನು ಕೇಳುತ್ತೇನೆ. ಇದೆಲ್ಲಾ ಆದ್ಮೇಲೆ ವಿಶೇಷ ಅಧಿವೇಶನ ಕರೆದಿದ್ದೇನೆ. ಎಲ್ಲರ ಅಭಿಪ್ರಾಯವನ್ನು ಪಡೆದು ಜನರ ಸಮಸ್ಯೆ ನಿವಾರಣೆ ಮಾಡಲು ಕಾರ್ಯಕ್ರಮ ರೂಪಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಆದರೆ, ಸಿಎಂ ಭರವಸೆ ಬಳಿಕವೂ ಜನರಲ್ಲಿ ಆತಂಕ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ಸೆಪ್ಟೆಂಬರ್ 21ರ ಸೋಮವಾರದಂದು ಸಂಪೂರ್ಣ ಶೃಂಗೇರಿ ಬಂದ್‌ಗೆ ರೈತ ಮತ್ತು ಕಾರ್ಮಿಕ ಸಂಘಟನೆಗಗಳು ಕರೆ ನೀಡಿದೆ. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಬಂದ್‌ಗೆ ಕರೆ ನೀಡಲಾಗಿದ್ದು, ವರದಿ ಜಾರಿಯಿಂದ ಮಲೆನಾಡಿನ ಜನರಲ್ಲಿ ಆತಂಕ ಮೂಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಂದ್‌ಗೆ ರೈತ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೆಂಬಲ ನೀಡಿದ್ದು, ಅಂಗಡಿ–ಮುಂಗಟ್ಟು ಬಂದ್‌ಗೆ ಕರೆ ನೀಡಲಾಗಿದೆ. ವಾಹನ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಹೋರಾಟಗಾರರು ಸಿದ್ಧತೆ ನಡೆಸಿದ್ದಾರೆ.
ಇನ್ನು, ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿರುವ ಕೋಟ ಶ್ರೀನಿವಾಸ ಪೂಜಾರಿ, ಸಮಾಜದ ಹಿತದ ಪ್ರಶ್ನೆ ಬಂದಾಗ ಎಲ್ಲಾ ಪಕ್ಷಗಳು ಒಟ್ಟಾಗಬೇಕು. ಕೇಂದ್ರವನ್ನು ರಾಜ್ಯ, ರಾಜ್ಯವನ್ನು ಕೇಂದ್ರ ದೂರುವುದು ಸಮಂಜಸವಲ್ಲ. ರಬ್ಬರ್ ಕಾಫಿ ಟೀ ತೋಟಗಳು ಕೂಡ ಕಾಡು ಎಂದು ಪರಿಗಣಿಸಲ್ಪಟ್ಟಿದೆ. ಕೇರಳದ ಉಮರ್ ಸಮಿತಿ ಮಾದರಿ, ಭೌತಿಕ ಸರ್ವೆ ನಡೆಸಿ ಕಾಡು ನಾಡು ಬೇರ್ಪಡಿಸಿದ್ದಾರೆ. ಬಫೆರ್ ಝೋನ್ ಸರಿಯಾಗಿ ಗುರುತಿಸಿದ್ದಾರೆ. ಕೇಂದ್ರ ಸರಕಾರ ಕೇರಳದ ವರದಿಯನ್ನು ಒಪ್ಪಿದೆ. ತಜ್ಞರ ಸಮಿತಿ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿ, ಕೇರಳ ಮಾದರಿಯಲ್ಲಿ ನಮಗೂ ಪರಿಹಾರ ಸಿಗುತ್ತೆ. ರಾಜ್ಯದ ಹಿತ ದೃಷ್ಟಿಯಲ್ಲಿ ರಾಜಕಾರಣ ಮಾಡಲ್ಲ. ತಜ್ಞರ ವರದಿಗೆ ಕೇಂದ್ರ ಸರಕಾರ ಸಮ್ಮತಿ ನೀಡುತ್ತೆ. ಪಕ್ಷ ಭೇದ ಮರೆತು ನಾವೆಲ್ಲರೂ ಒಟ್ಟಿಗೆ ನಿಂತು ಸಹಕಾರ ನೀಡುತ್ತೇವೆ, ಸಿಎಂ ಆಗಿ ತಾವು ಮಾಡುವ ಎಲ್ಲಾ ಅಭಿವೃದ್ಧಿ ಕೆಲಸಕ್ಕೆ ಸಹಕಾರವಿದೆ ಎಂದು ಹೇಳಿದರು.