ಮೈಸೂರು, ಚಾಮರಾಜನಗರಕ್ಕೆ ಅಪ್ಪನ ಕ್ಷೇತ್ರದಲ್ಲಿ ಗೆದ್ದ ಮಕ್ಕಳು, ಅಪ್ಪ ಗೆಲ್ಲದ ಕ್ಷೇತ್ರದಲ್ಲಿ ಗೆದ್ದ ಮಗ!

By Kannadaprabha News  |  First Published May 16, 2023, 5:23 AM IST

ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಕಡೆ ಅಪ್ಪ ಗೆದ್ದ ಕ್ಷೇತ್ರದಲ್ಲಿ ಮಕ್ಕಳು ಗೆದ್ದಿದ್ದಾರೆ. ಒಂದು ಕಡೆ ಅಪ್ಪ ಗೆಲ್ಲದ ಕಡೆ ಮಗ ಗೆದ್ದಿದ್ದಾನೆ. ಮತ್ತೆರಡು ಕಡೆ ಸೋತಿದ್ದಾರೆ.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಎರಡು ಕಡೆ ಅಪ್ಪ ಗೆದ್ದ ಕ್ಷೇತ್ರದಲ್ಲಿ ಮಕ್ಕಳು ಗೆದ್ದಿದ್ದಾರೆ. ಒಂದು ಕಡೆ ಅಪ್ಪ ಗೆಲ್ಲದ ಕಡೆ ಮಗ ಗೆದ್ದಿದ್ದಾನೆ. ಮತ್ತೆರಡು ಕಡೆ ಸೋತಿದ್ದಾರೆ.

Latest Videos

undefined

ಹುಣಸೂರಿನಲ್ಲಿ ಜೆಡಿಎಸ್‌ನ ಜಿ.ಡಿ. ಹರೀಶ್‌ಗೌಡ ಗೆದ್ದಿದ್ದಾರೆ. ಇಲ್ಲಿ ಅವರ ತಂದೆ ರು 1998ರ ಉಪ ಚುನಾವಣೆ ಹಾಗೂ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದರು.

ಗುಂಡ್ಲುಪೇಟೆಯಲ್ಲಿನ ಎಚ್‌.ಎಂ. ಗಣೇಶಪ್ರಸಾದ್‌ ಗೆದ್ದಿದ್ದಾರೆ. ಅವರ ತಂದೆ ಎಚ್‌.ಎಸ್‌. ಮಹದೇವಪ್ರಸಾದ್‌ ಅವರು 1994, 1999, 2004, 2008, 2013- ಹೀಗೆ ಸತತ ಐದು ಬಾರಿ ಗೆದ್ದಿದ್ದರು. ಮಹದೇವಪ್ರಸಾದ್‌ ಅವರ ಪತ್ನಿ ಡಾ.ಗೀತಾ 2017ರ ಉಪ ಚುನಾವಣೆಯಲ್ಲಿ ಗೆದ್ದಿದ್ದರು.

ಕೆ.ಆರ್‌. ನಗರದಿಂದ ಕಾಂಗ್ರೆಸ್‌ನ ಡಿ. ರವಿಶಂಕರ್‌ ಆಯ್ಕೆಯಾಗಿದ್ದಾರೆ. ಅವರ ತಂದೆ ದೊಡ್ಡಸ್ವಾಮೇಗೌಡ 2013 ರಲ್ಲಿ ಇಲ್ಲಿ ಸೋತಿದ್ದರು.

ಅಪ್ಪನ ಕ್ಷೇತ್ರದಲ್ಲಿ ಸೋತವರು:

ಹನೂರಿನಲ್ಲಿ ಬಿಜೆಪಿಯ ಡಾ.ಪ್ರೀತನ್‌ ನಾಗಪ್ಪ ಸೋತಿದ್ದಾರೆ.ಅವರ ತಂದೆ ಎಚ್‌. ನಾಗಪ್ಪ 1967 ಹಾಗೂ 1994, ಅವರ ತಾಯಿ ಪರಿಮಳ ನಾಗಪ್ಪ 2004 ರಲ್ಲಿ ಇಲ್ಲಿಂದ ಗೆದ್ದಿದ್ದರು. ಮೈಸೂರಿನ ಚಾಮರಾಜದಲ್ಲಿ ಜೆಡಿಎಸ್‌ನ ಎಚ್‌.ಕೆ. ರಮೇಶ್‌ ಸೋತಿದ್ದಾರೆ. ಅವರ ತಂದೆ ಎಚ್‌. ಕೆಂಪೇಗೌಡ 1983 ರಲ್ಲಿ ಇಲ್ಲಿ ಆಯ್ಕೆಯಾಗಿದ್ದರು. ಎಚ್‌.ಡಿ. ಕೋಟೆಯಲ್‌ ಜೆಡಿಎಸ್‌ನ ಸಿ. ಜಯಪ್ರಕಾಶ್‌ ಸೋತಿದ್ದಾರೆ. ಅವರ ತಂದೆ ಇಲ್ಲಿಂದ 2008 ರಲ್ಲಿ ಗೆದ್ದಿದ್ದರು.

ಕುಟುಂಬ ರಾಜಕಾರಣದಲ್ಲಿ ಗೆದ್ದವರು- ಸೋತವರು

ಸಿದ್ದರಾಮಯ್ಯ, ತನ್ವೀರ್‌ಸೇಠ್‌, ಜಿ.ಟಿ. ದೇವೇಗೌಡ, ಅನಿಲ್‌ ಚಿಕ್ಕಮಾದು, ದರ್ಶನ್‌ ಧ್ರುವನಾರಾಯಣ, ಎ.ಆರ್‌. ಕೃಷ್ಣಮೂರ್ತಿ

ಆರ್‌. ನರೇಂದ್ರ, ಎಚ್‌.ಪಿ. ಮಂಜುನಾಥ್‌, ಬಿ. ಹರ್ಷವರ್ಧನ್‌, ಸಿ.ಎಸ್‌. ನಿರಂಜನಕುಮಾರ್‌, ಡಾ.ಪ್ರೀತನ್‌ ನಾಗಪ್ಪ, ಎಚ್‌.ಕೆ. ರಮೇಶ್‌, ವಿ. ಕವೀಶ್‌ಗೌಡ, ಸಿ. ಜಯಪ್ರಕಾಶ್‌

ನರಸಿಂಹರಾಜ ಕ್ಷೇತ್ರದಲ್ಲಿ ಮಾಜಿ ಸಚಿವ ಅಜೀಜ್‌ ಸೇಠ್‌ ಅವರ ಪುತ್ರ ತನ್ವೀರ್‌ ಸೇಠ್‌ ಸತತ 6ನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಅಜೀಜ್‌ ಸೇಠ್‌ ಅವರು ಕೂಡ ಇದೇ ಕ್ಷೇತ್ರದಿಂದ ಆರು ಬಾರಿ, ಅವರ ಸಂಬಂಧಿ ಮಹಮ್ಮದ್‌ಸೇಠ್‌ ಕೂಡ ಒಂದು ಬಾರಿ ಆಯ್ಕೆಯಾಗಿದ್ದರು.

ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ ಅವರಿಗೆ ಹ್ಯಾಟ್ರಿಕ್‌ ಗೆಲವು. ಅವರ ಪುತ್ರ ಜಿ.ಡಿ. ಹರೀಶ್‌ಗೌಡ ಹುಣಸೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ದೇವೇಗೌಡರು ಹುಣಸೂರಿನಲ್ಲಿ ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದರು. ಚಾಮುಂಡೇಶ್ವರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಕವೀಶ್‌ಗೌಡ ಅವರು ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಅವರ ಪುತ್ರ. ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಇವರು ಇದೇ ಕ್ಷೇತ್ರದ ಶಾಸಕರಾಗಿದ್ದ ಡಾ.ಎಸ್‌. ಯತೀಂದ್ರ ಅವರ ತಂದೆ.

ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತ ಶಾಸಕ ಬಿ. ಹರ್ಷವರ್ಧನ್‌ ಅವರು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಅಳಿಯ ಹಾಗೂ ಮಾಜಿ ಸಚಿವರಾದ ದಿವಂಗತ ಬಿ. ಬಸವಲಿಂಗಪ್ಪ ಅವರ ಮೊಮ್ಮಗ. ಶ್ರಿನಿವಾಸಪ್ರಸಾದ್‌ ಅವರು ಇದೇ ಕ್ಷೇತ್ರದಿಂದ ಎರಡು ಬಾರಿ ಶಾಸಕರು, ಉಪ ಚುನಾವಣೆಯಲ್ಲಿ ಸೋತಿದ್ದರು. ಚಾಮರಾಜನಗರದಿಂದ ಆರು ಬಾರಿ ಲೋಕಸಭಾ ಸದಸ್ಯರು. ಮೂರು ಬಾರಿ ಸೋತಿದ್ದಾರೆ.

ಎಚ್‌.ಡಿ. ಕೋಟೆಯ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಸಿ. ಅನಿಲ್‌ಕುಮಾರ್‌ ಪುನಾರಾಯ್ಕೆಯಾಗಿದ್ದಾರೆ. ಇವರು ಮಾಜಿ ಶಾಸಕ ಎಸ್‌. ಚಿಕ್ಕಮಾದು ಅವರ ಪುತ್ರ. ಚಿಕ್ಕಮಾದು ಹುಣಸೂರಿನಿಂದ ಒಮ್ಮೆ, ಎಚ್‌.ಡಿ. ಕೋಟೆಯಿಂದ ಒಮ್ಮೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಂದು ಪೂರ್ಣಾವಧಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ಇದೇ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಸೋತಿರುವ ಸಿ. ಜಯಪ್ರಕಾಶ್‌ ಅವರು ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ. ಚಿಕ್ಕಣ್ಣ ಇದೇ ಕ್ಷೇತ್ರದಿಂದ 2008 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿ, 2013 ರಲ್ಲಿ ಕಾಂಗ್ರೆಸ್‌, 2018 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತವರು.

ಹುಣಸೂರಿನ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತ ಶಾಸಕ ಎಚ್‌.ಪಿ. ಮಂಜುನಾಥ್‌ ಅವರು ಇದೇ ಕ್ಷೇತ್ರದಿಂದ ಎರಡು ಬಾರಿ ಅಭ್ಯರ್ಥಿಯಾಗಿ ಸೋತ ಎಚ್‌.ಎನ್‌. ಪ್ರೇಮಕುಮಾರ್‌ ಅವರ ಪುತ್ರ.

ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಸೋತಿದ್ದಾರೆ. ಅವರು ಇದೇ ಕ್ಷೇತ್ರದಿಂದ ಎರಡು ಬಾರಿ ಸೋತ ಸಿ.ಎಂ. ಶಿವಮಲ್ಲಪ್ಪ ಅವರ ಪುತ್ರ.

ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎ.ಆರ್‌. ಕೃಷ್ಣಮೂರ್ತಿ ಗೆದ್ದಿದ್ದಾರೆ. ಅವರು ಆರು ಬಾರಿ ಶಾಸಕ, ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿ, ರಾಜ್ಯಪಾಲರಾಗಿ ಕೆಲಸ ಮಾಡಿರುವ ಬಿ. ರಾಚಯ್ಯ ಅವರ ಪುತ್ರ.

ಹನೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಶಾಸಕ ಆರ್‌. ನರೇಂದ್ರ ಸೋತಿದ್ದಾರೆ. ಅವರು ಮಾಜಿ ಸಚಿವ ಜಿ. ರಾಜೂಗೌಡರ ಪುತ್ರ. ಅವರು ಇದೇ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು. ಅವರ ದೊಡ್ಡಪ್ಪ ಜಿ.ವಿ. ಗೌಡರು ಕೂಡ ಆಯ್ಕೆಯಾಗಿದ್ದರು.

ಕೃಷ್ಣರಾಜ, ಟ. ನರಸೀಪುರ, ಪಿರಿಯಾಪಟ್ಟಣ, ಚಾಮರಾಜನಗರ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಇರಲಿಲ್ಲ.

click me!