ಯುವ ಸಮುದಾಯವು ದೇಶದ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸಿಎಸ್‌ಐಆರ್ ಹಿರಿಯ ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.
ಮೈಸೂರು : ಯುವ ಸಮುದಾಯವು ದೇಶದ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಸಿಎಸ್‌ಐಆರ್ ಹಿರಿಯ ವಿಜ್ಞಾನಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.
ಮೈಸೂರು ವಿವಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ವಿದೇಶಾಂಗ ಸಚಿವಾಲಯ, ಸಂಶೋಧನೆ ಹಾಗೂ ಮಾಹಿತಿ ವ್ಯವಸ್ಥೆ (ಆರ್‌ಐಎಸ್) ಮತ್ತು ಎನ್‌ಐಎಎಸ್ ಸಂಯುಕ್ತವಾಗಿ ಸೋಮವಾರ ಆಯೋಜಿಸಿದ್ದ ಜಿ20 ವಿಶ್ವವಿದ್ಯಾಲಯಗಳ ಯುವ ಸಂಶೋಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವವೇ ಭಾರತದ ಯುವ ಸಮುದಾಯವನ್ನು ಎದುರು ನೋಡುತ್ತಿದ್ದು, ದೇಶದ ಅಭಿವೃದ್ಧಿ ಪಥದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತವು ಶ್ರೀಮಂತ ಸಾಂಸ್ಕೃತಿಕತೆ, ವಿವಿಧತೆ ಹಾಗೂ ಪ್ರಾವಾಸೋದ್ಯಮಕ್ಕೆ ಹೆಸರಾಗಿದ್ದು, ಜಗತ್ತಿನ ಮುಂದೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.
ಜಿ20 ರಾಷ್ಟ್ರಗಳು ಜಾಗತಿಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. 2017ರಲ್ಲಿ ಜಾಗತಿಕ ಆರೋಗ್ಯ ಕುರಿತು ಜರ್ಮನಿ ಗಮನಹರಿಸಿದರೆ, 2018ರಲ್ಲಿ ಅರ್ಜೇಂಟಿನಾವು ಮಣ್ಣಿನ ಗುಣಮಟ್ಟಉತ್ಪಾದನೆ ಹೆಚ್ಚಳ, 2019ರಲ್ಲಿ ಜಪಾನ್ ಹವಾಮಾನ ಬದಲಾವಣೆ, 2020ರಲ್ಲಿ ಸೌದಿ ಅರೇಬಿಯಾವು ವ್ಯಾಪಾರ ಮತ್ತು ಭ್ರಷ್ಟಾಚಾರ ತಡೆ, 2021ರಲ್ಲಿ ಇಟಲಿಯು ಕೋವಿಡ್ ನಿಗ್ರಹಿಸಲು ವಿಜ್ಞಾನದ ಪಾತ್ರ, 2022 ಇಂಡೋನೇಷ್ಯಾದಲ್ಲಿ ಕೋವಿಡ್ ನಂತರ ಸವಾಲುಗಳು ಕುರಿತು ಚರ್ಚಿಸಿ ಪರಿಹಾರಗಳನ್ನು ನೀಡಿದೆ. ಈ ವರ್ಷ ಭಾರತವೇ ಜಿ20 ಅಧ್ಯಕ್ಷತೆ ವಹಿಸಿದ್ದು, ವಿನಾಶಕಾರಿ ಬದಲಾವಣೆಗಳು ಸುಸ್ಥಿರ ಅಭಿವೃದ್ಧಿ ಕುರಿತು ಪರಿಹಾರೋಪಯಗಳ ಕುರಿತು ಕಾರ್ಯೋನ್ಮುಖವಾಗಿದೆ ಎಂದು ಅವರು ವಿವರಿಸಿದರು.
ಎನ್‌ಐಎಎಸ್ ಡೀನ್ ಪ್ರೊ.ಡಿ. ಶುಭಾ ಚಂದ್ರನ್, ಮೈಸೂರು ವಿವಿ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹಿರೇಮಠ್ ಮೊದಲಾದವರು ಇದ್ದರು.
ದೇಶದ ಅಭಿವೃದ್ದಿಯಲ್ಲಿ ಯುವ ಸಮುದಾಯದ ಪಾಲು
ತುಮಕೂರು : ಹಳ್ಳಿ ಜನರ ಬುದ್ಧಿ ಶಕ್ತಿ ಯಾವುದಕ್ಕೂ ಕಡಿಮೆ ಇಲ್ಲ. ಅವರಿಗೆ ತರಬೇತಿಗಳನ್ನು ಕೊಟ್ಟು ಉದ್ಯೋಗ ಅವಕಾಶಗಳನ್ನು ದೊರಕಿಸಿಕೊಟ್ಟಾಗ ದೇಶದ ಅಭಿವೃದ್ಧಿಗೆ ಯುವಸಮುದಾಯ ಮತ್ತು ಕೃಷಿಕ ಸಮುದಾಯದ ಕೊಡುಗೆ ಅನನ್ಯವಾಗಿರುತ್ತದೆ ಎಂದು ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ಕೊರಟಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಮೇಳಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನ ನೀಡಿ ಮಾತನಾಡಿದರು.
ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಯಾವಾಗಲು ಧನಾತ್ಮಕ ಚಿಂತನೆಗಳ ಕಡೆ ಗಮನ ಹರಿಸಬೇಕು. ಕೀಳರಿಮೆಯಿಂದ ನಮ್ಮನ್ನು ನಾವೇ ಅಳಿಯಬಾರದು. ಮನುಷ್ಯನಿಗೆ ಮನಸ್ಸು ಮಾಡಿದರೇ ಎಷ್ಟೋ ಕಠಿಣ ಕೆಲಸಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ವಿಶ್ವದಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲಗಳನ್ನು ಹೊಂದಿರುವ ದೇಶ ನಮ್ಮದು. ಇಲ್ಲಿನ ಸಂಪನ್ಮೂಲಗಳ ಬಳಕೆ ವಿದೇಶಕ್ಕೆ ಹೆಚ್ಚಾಗಿ ಆಗುತ್ತದೆ. ಆದರೆ ಮುಂದಿನ ದಿನದಲ್ಲಿ ರಾಜ್ಯ ಮತ್ತು ದೇಶಕ್ಕೆ ಸಿಗಬೇಕಾದರೆ, ಹಳ್ಳಿಗಾಡಿನ ಮಕ್ಕಳು ಉದ್ಯೋಗ ದೊರಕಿಸಿಕೊಳ್ಳಲುಬೇಕಾದ ನೈಪುಣ್ಯತೆಗಳನ್ನು ರೂಢಿಸಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ತರಬೇತಿ ಪಡೆಯುವಲ್ಲಿ ಮುಂದಾಗಬೇಕಿದೆ ಎಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು.
ಕೊರಟಗೆರೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇನ್ನಷ್ಟುಸುಧಾರಣೆ ಮತ್ತು ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ ಅವರು, ಮುಂದಿನ ದಿನ ಮಾನಗಳಲ್ಲಿ ಕೊರಟಗೆರೆಯಲ್ಲಿ ಡಿಪ್ಲೊಮಾ ಕಾಲೇಜನ್ನು ಪ್ರಾರಂಭಿಸುವುದಾಗಿ ಪರಮೇಶ್ವರ್ ಭರವಸೆ ನೀಡಿದರು.