ಯುವಕರ ಭವಿಷ್ಯಕ್ಕೆ ಮಠ ಬೇಕು: ರಾಘವೇಶ್ವರ ಭಾರತೀ ಸ್ವಾಮೀಜಿ

By Kannadaprabha News  |  First Published Sep 10, 2023, 7:07 PM IST

ಯುವ ಮನಸ್ಸುಗಳನ್ನು ಗುರುತ್ವಾಕರ್ಷಣೆಗೆ ಗುರಿಪಡಿಸಿದಾಗ ಇಡೀ ಯುವಚೇತನ ಸತ್ಪಥದಲ್ಲಿ ಸುತ್ತುತ್ತಿರುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.


ಗೋಕರ್ಣ (ಸೆ.10): ಯುವ ಮನಸ್ಸುಗಳನ್ನು ಗುರುತ್ವಾಕರ್ಷಣೆಗೆ ಗುರಿಪಡಿಸಿದಾಗ ಇಡೀ ಯುವಚೇತನ ಸತ್ಪಥದಲ್ಲಿ ಸುತ್ತುತ್ತಿರುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಯುವ ಸಮಾವೇಶದಲ್ಲಿ ಶ್ರೀಸಂದೇಶ ಅನುಗ್ರಹಿಸಿದ ಅವರು, ಮಠದ ಭವಿಷ್ಯಕ್ಕೆ ಯುವಕರು ಬೇಕು. ಯುವಕರ ಭವಿಷ್ಯಕ್ಕಾಗಿಯೂ ಮಠ ಬೇಕು. ಬಾಲ್ಯದಲ್ಲೇ ಮಕ್ಕಳನ್ನು ಮಠಕ್ಕೆ ಕರೆತಂದು, ನಮ್ಮ ಆಚಾರ ವಿಚಾರಗಳು, ಸಂಸ್ಕೃತಿ ಪರಂಪರೆ, ಆಹಾರ ವಿಹಾರಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. 

ಮಠಮಾನ್ಯಗಳು ಬೀರುವ ಒಳ್ಳೆಯ ಪ್ರಭಾವವನ್ನು ಮಕ್ಕಳ ಮೇಲೆ ಬೇರೆ ಯಾರೂ ಬೀರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ವಿಜ್ಞಾನ ಹಾಗೂ ಅಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ವಿಜ್ಞಾನಿಗೂ ಶ್ರದ್ಧೆ ಇದೆ; ಅಜ್ಞಾನಿಗೂ ಶ್ರದ್ಧೆ ಇದೆ. ಅರೆಜ್ಞಾನಿಗೆ ಮಾತ್ರ ಶ್ರದ್ಧೆ ಇರುವುದಿಲ್ಲ. ಗುರುಪೀಠದ ಮೇಲೆ ನಿಷ್ಠೆ- ಶ್ರದ್ಧೆಯಿಂದ ಸೇವೆ ಮಾಡಿದರೆ ಅದರ ಫಲ ನಿರೀಕ್ಷೆಗೂ ಮೀರಿದ್ದು ಎಂದು ಬಣ್ಣಿಸಿದರು. ಶ್ರೀಮಠದಿಂದ ವಿಷ್ಣುಗುಪ್ತ ಸನ್ಮಾನ ಸ್ವೀಕರಿಸಿದ ಇಸ್ರೋದ ಬಾಹ್ಯಾಕಾಶ ವಿಭಾಗದ ಹಿರಿಯ ವಿಜ್ಞಾನಿ ಡಾ. ರಾಧಾಕೃಷ್ಣ ವಾಟೆಡ್ಕ, ನನಗೆ ಸಂದ ಗೌರವ ಇಸ್ರೋಗೆ ಸಮರ್ಪಣೆ. 

Tap to resize

Latest Videos

undefined

ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್

140 ಕೋಟಿ ಭಾರತೀಯರ ಆಶೋತ್ತರಗಳು, ಪರಮಪೂಜ್ಯರ ಅನುಗ್ರಹ, ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ವಿಕ್ರಂ ಸಾರಾಭಾಯಿ, ಯು.ಆರ್. ರಾವ್ ಅವರ ದೂರದೃಷ್ಟಿಯಿಂದಾಗಿ ಇಸ್ರೊ ಇಂದು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು. ಯುವಕರು ಕುತೂಹಲದ ಬೆನ್ನು ಹತ್ತಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ನಮ್ಮ ಖಗೋಳ ಯೋಜನೆಗಳು, ನಕ್ಷತ್ರಗಳ ಬಗೆಗಿನ ಅಧ್ಯಯನ ಹೀಗೆ ಹಲವು ಕುತೂಹಲಕಾರಿ ಅಂಶಗಳು ಮನುಷ್ಯನ ಜೀವನಕ್ಕೆ ಒಳಿತಾಗುವ ತಂತ್ರಜ್ಞಾನಗಳ ಆವಿಷ್ಕಾರಕ್ಕೂ ಕಾರಣವಾಗಿದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಹಳ್ಳಿ ಮಾತನಾಡಿ, ಸನಾತನ ಧರ್ಮದ ಬಗ್ಗೆ ಆತ್ಮಾಭಿಮಾನ ಎಲ್ಲ ಭಾರತೀಯರಲ್ಲಿ ಇರಬೇಕು. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಹೊರಟವರು ಸರ್ವನಾಶವಾದ ಉದಾಹರಣೆಗಳು ಇತಿಹಾಸದುದ್ದಕ್ಕೂ ಇವೆ. ಸನಾತನ ಧರ್ಮವನ್ನು ಹೀಗಳೆಯುವುದು ಪಾಶ್ಚಾತ್ಯ ದಾಸ್ಯದ ಸಂಕೇತ ಎಂದರು. ಸನಾತನ ಧರ್ಮ ಎಲ್ಲರಿಗೂ ಒಳಿತು ಬಯಸುವಂಥದ್ದು. ಬ್ರಾಹ್ಮಣರನ್ನು ಟೀಕಿಸಿದರೆ ಸನಾತನ ಧರ್ಮವನ್ನು ದುರ್ಬಲಗೊಳಿಸುವುದು ಸುಲಭ ಎನ್ನುವ ಭಾವನೆಯಿಂದ ಇಂಥ ದಾಳಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸನಾತನ ಧರ್ಮದ ಹೃದಯ ವೈಶಾಲ್ಯತೆ ಅರ್ಥ ಮಾಡಿಕೊಂಡು ಅದಕ್ಕೆ ಧಕ್ಕೆ ಬಂದಾಗ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಇಸ್ರೊದ ಚಂದ್ರಯಾನದಂತೆ ಕಳೆದ ಮೂರು ದಶಕಗಳಿಂದ ರಾಮಚಂದ್ರಯಾನ ನಡೆಯುತ್ತಿದೆ. ಆಚಾರದ ಅಡಿಯಲ್ಲಿ ವಿಚಾರ ಇದೆ. ವಿಚಾರವನ್ನು ಆಶ್ರಯಿಸಿ ಆಚಾರ ಇದೆ. ಯುವ ಸಮುದಾಯಕ್ಕೆ ಪರಂಪರೆ, ಸಾಧನೆ, ಸಂಸ್ಕಾರ ಪಥವನ್ನು ತಿಳಿಸುವ ಕಾರ್ಯ ಆಗಬೇಕು ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಅವರಿಗೆ ಉಂಡೆಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರಂಪರಾ ಗುರುಕುಲದ ಮಕ್ಕಳು ಹಾಡಿದ ಹವ್ಯಕ ಗೀತೆಗೆ ಹಿರಿಯ ಕಲಾವಿದ ನೀರ್ನಳ್ಳಿ ಗಣಪತಿ ಮತ್ತು ಯುವ ಕಲಾವಿದೆ ಶ್ರೀಲಕ್ಷ್ಮಿ ಚಿತ್ರದ ಅಭಿವ್ಯಕ್ತಿ ನೀಡುವ ಗೀತಗಾಯನ ಜುಗಲ್‍ಬಂದಿ ಗಮನ ಸೆಳೆಯಿತು.

ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ: ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ

ಭಟ್ ಅಂಡ್ ಭಟ್ ಯೂಟ್ಯೂಬ್ ಖ್ಯಾತಿಯ ಸುದರ್ಶನ ಬೆದ್ರಡಿ ಮತ್ತು ಮನೋಹರ ಬೆದ್ರಡಿ ಉಪಸ್ಥಿತರಿದ್ದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಾಸ್ತಾವಿಕ ಮಾತನಾಡಿದರು. ಯುವಪ್ರಧಾನ ಕೇಶವ ಪ್ರಕಾಶ ಮುಣ್ಚಿಕಾನ, ಮಾತೃಪ್ರಧಾನರಾದ ವೀಣಾ ಗೋಪಾಲಕೃಷ್ಣ, ಸೇವಾ ಪ್ರಧಾನ ಪ್ರಸನ್ನ ಉಡುಚೆ, ಮುಷ್ಟಿಭಿಕ್ಷೆ ಪ್ರಧಾನ ಹೇರಂಭ ಶಾಸ್ತ್ರಿ, ಪ್ರಾಂತ ಉಪಾಧ್ಯಕ್ಷರಾದ ಜಿ.ಎಸ್. ಹೆಗಡೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋವಿಂದ ಹೆಗಡೆ ಉಪಸ್ಥಿತರಿದ್ದರು. ಶಿಷ್ಯಮಾಧ್ಯಮ ಪ್ರಧಾನ ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು. 11 ಮಂದಿಗೆ ಯುವ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವಕ-ಯುವತಿಯರಿಗೆ ಹಮ್ಮಿಕೊಂಡಿದ್ದ ಬೆಂಕಿ ಇಲ್ಲದೇ ಅಡುಗೆ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ 33 ತಂಡಗಳು ಭಾಗವಹಿಸಿದ್ದವು. ಇದೇ ವೇಳೆ ''ನಾನು ಮತ್ತು ನಮ್ಮ ಮಠ'' ವಿಷಯದ ಬಗ್ಗೆ ಫೋಟೊಗ್ರಫಿ ಸ್ಪರ್ಧೆ ಹಾಗೂ ವಿವಿವಿ ಪರಿಸರ ಎಂಬ ವಿಷಯದ ಬಗ್ಗೆ ವಿಡಿಯೊ ಸ್ಪರ್ಧೆ ಆಯೋಜಿಸಲಾಗಿತ್ತು.

click me!