ಭಾರೀ ಪ್ರವಾಹದಿಂದ ಹಾನಿಗೊಳಗಾಗಿದ್ದ ಬೆಳಗಾವಿ ಜಿಲ್ಲೆಯ ಹಲವು ದೇವಾಲಯಗಳನ್ನು ಮುಸ್ಲಿಂ ಸಮುದಾಯದವರು ಸ್ವಚ್ಛಗೊಳಿಸಿ ಸಾಮರಸ್ಯ ಮೆರೆದಿದ್ದಾರೆ.
ಗೋಕಾಕ (ಆ.27) : ಜಿಲ್ಲೆಯ ಗೋಕಾಕ ಸಮೀಪದ ಕೊಣ್ಣೂರ ಪಟ್ಟಣದ ಮುಸ್ಲಿಂ ಸಮಾಜದವರು ನೆರೆ ಸಂತ್ರಸ್ತರಿಗೆ ಸಹಾಯ, ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗೋಕಾಕ ತಾಲೂಕಿನ ಚಿಗಡೊಳ್ಳಿ ಗ್ರಾಮದ ದುರ್ಗಾದೇವಿ, ಯಲ್ಲಮ್ಮದೇವಿ, ಹನುಮಂತ ದೇವರು ಸೇರಿದಂತೆ ವಿವಿಧ ದೇವಸ್ಥಾನಗಳ ಶುಚಿತ್ವದ ಕಾರ್ಯ ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಕರ್ನಾಟಕ ಪ್ರವಾಹಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇತ್ತೀಚೆಗೆ ಪ್ರವಾಹಕ್ಕೆ ಒಳಗಾಗಿದ್ದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಬಹುತೇಕ ಗ್ರಾಮಗಳು ಕೆಸರಿನಿಂದ ಆವೃತ್ತವಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದವು. ದೇಗುಲಗಳ ಸುತ್ತಮುತ್ತ ನೆರೆಯಿಂದ ಬಂದು ಬಿದ್ದ ಮಣ್ಣು, ಕೆಸರು, ಕಸ ಕಡ್ಡಿಯಿಂದ ದೇವಾಲಯ ಗಲೀಜು ಮಯವಾಗಿತ್ತು. ಭಕ್ತರಿಗೆ ದೇವರ ದರ್ಶನ ದುಸ್ತರವಾಗಿತ್ತು. ಇದನ್ನು ಮನಗಂಡ ಮುಸ್ಲಿಂ ಸಮುದಾಯದವರು ದೇವಾಲಯ ಸಂಪೂರ್ಣ ಸ್ವಚ್ಛಗೊಳಿಸಿದ್ದು, ದೇವಸ್ಥಾನಗಳು ಮತ್ತೆ ಕಂಗೊಳಿಸುತ್ತಿವೆ.
ಮುಸ್ಲಿಮರ ಕಾರ್ಯಕ್ಕೆ ಶ್ಲಾಘನೆ:
ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಮುಸ್ಲಿಂ ಸಮುದಾಯದ ಜನರು ತಾಲೂಕಿನ ಹಲವಾರು ಹಳ್ಳಿಗಳಲ್ಲಿರುವ ವಿವಿಧ ನಾಮಾಂಕಿತ ದೇವರುಗಳ ದೇಗುಲಗಳನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರುತ್ತಿದ್ದಾರೆ. ಹೀಗಾಗಿ ಮುಸ್ಲಿಂ ಬಾಂಧವರ ಕಾಯಕವನ್ನು ಸ್ಥಳೀಯ ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.