ಮುಸ್ಲಿಮರ ಮತ ಬೇಡ ಎಂದ ಬಿಜೆಪಿ ಶಾಸಕರಿಗೆ ಟೋಪಿ, ಹಸಿರು ಶಾಲು ಕೋರಿಯರ್..!

By Girish GoudarFirst Published Jun 22, 2022, 2:09 PM IST
Highlights

*  ಮುಸ್ಲಿಂ ಮತ ಬೇಡ ಅಂತ ಬಹಿರಂಗವಾಗಿ ಘೋಷಿಸಿದ್ದ ಶಾಸಕ ಹರೀಶ್ ಪೂಂಜಾ 
*  ಭಾರತೀಯರಿಗಾಗಿ ಯೋಜನೆಯೇ ಹೊರತು ಓಲೈಕೆಗಲ್ಲ
*  ಹರೀಶ್ ಪೂಂಜಾ ನೇತೃತ್ವದಲ್ಲಿ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ 

ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಜೂ.22):  ಮುಸ್ಲಿಮರ ಮತಗಳು ಬೇಡ ಅಂತ ಬಹಿರಂಗವಾಗಿ ಘೋಷಿಸಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯುತ್ತಿರುವುದನ್ನ ವ್ಯಂಗ್ಯ ಮಾಡಿ ಶಾಸಕರ ಕಚೇರಿಗೆ ಸಿಪಿಎಂ ಕಾರ್ಯಕರ್ತರೊಬ್ಬರು ಮುಸ್ಲಿಮರ ಟೋಪಿ ಮತ್ತು ಹಸಿರು ಶಾಲನ್ನು ಕೊರಿಯರ್ ಮೂಲಕ ಕಳುಹಿಸಿದ ಘಟನೆ ನಡೆದಿದೆ. 

ಮೋದಿ ಆಡಳಿತದ ಎಂಟನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಇಂದು ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ನಡೆಸಲಾಗಿದೆ. ಬೆಳ್ತಂಗಡಿ ಬಿಜೆಪಿ ಆಯೋಜಿಸಿರುವ ಸಮಾವೇಶಕ್ಕೆ ಶಾಸಕ ಹರೀಶ್ ಪೂಂಜಾ ನೇತೃತ್ವ ವಹಿಸಿದ್ದು, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಈ ಸಮಾವೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಲವು ಪ್ರಮುಖರನ್ನ ಸನ್ಮಾನಿಸಿ ಗೌರವಿಸಲಾಗಿದೆ. ಆದರೆ ಶಾಸಕರ ಅಲ್ಪಸಂಖ್ಯಾತ ಸಮಾವೇಶಕ್ಕೆ ವ್ಯಂಗ್ಯವಾಡಿ ಸಿಪಿಎಂ ಅಭಿಯಾನ ನಡೆಸಿದ್ದು, ಶಾಸಕರ ಕಚೇರಿಗೆ ಮುಸ್ಲಿಂ ಟೋಪಿ, ಹಸಿರು ಶಾಲು ರವಾನಿಸಿ ಅಭಿಯಾನ ಮಾಡಿದೆ. ಬೆಳ್ತಂಗಡಿ ಸಿಪಿಎಂ ಸದಸ್ಯ ಶೇಖರ ಲಾಯಿಲಾ ವ್ಯಂಗ್ಯ ಅಭಿಯಾನ ಮಾಡಿದ್ದು, ಶಾಸಕರಿಗೆ ಪತ್ರ ಕೂಡ ಬರೆದಿದ್ದಾರೆ. 'ಮುಸ್ಲಿಮರ ಓಟ್ ಬೇಡ ಅಂದವರಿಂದ ಅಲ್ಪಸಂಖ್ಯಾತರ ಓಲೈಕೆಯ ನೀಚ ರಾಜಕಾರಣ, ಹೀಗಾಗಿ ಟೋಪಿ, ಶಾಲು ಧರಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಿ ಅಂತ ವ್ಯಂಗ್ಯವಾಡಿ, ಶಾಸಕರ ಕಚೇರಿಗೆ ಶಾಲು ಮತ್ತು ಟೋಪಿ ಕೊರಿಯರ್ ಮಾಡಿದ್ದಾರೆ.‌ 

Karnataka Politics: ನನಗೆ ಮುಸ್ಲಿಮರ ಮತ ಬೇಡ: ಬಿಜೆಪಿ ಶಾಸಕ ಹರೀಶ್‌ ಪೂಂಜ

ಭಾರತೀಯರಿಗಾಗಿ ಯೋಜನೆಯೇ ಹೊರತು ಓಲೈಕೆಗಲ್ಲ: ಹರೀಶ್ ಪೂಂಜಾ

ಈ ದೇಶದಲ್ಲಿ ಅಲ್ಪಸಂಖ್ಯಾತ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಸರಕಾರದ ಅನೇಕ ಯೋಜನೆಗಳನ್ನು ಮೀಸಲಿಡುತ್ತಾ ಬರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 8 ವರ್ಷದಲ್ಲಿ ಈ ದೇಶದ ಜನರ ಕಾಳಜಿಯಿಂದ ಅನೇಕ ಯೋಜನೆಗಳನ್ನು ನೀಡಿ ಜಗದ್ವಂದ್ಯಾ ಭಾರತವಾಗಿಸಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಮೋದಿಯವರ 8 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಮಂಡಲ ವತಿಯಿಂದ ಉಜಿರೆ ಶಾರದಾ ಮಂಟಪದಲ್ಲಿ ಹಮ್ಮಿಕೊಂಡ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಹಾಗೂ ವಿವಿಧ ಕ್ಷೇತ್ರದ  ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮುಸಲ್ಮಾನ ಸಮುದಾಯವನ್ನು ಮತಬ್ಯಾಂಕ್ ಗಾಗಿ ಓಲೈಸಿದ್ದರು. ಆದರೆ ಓಲೈಕೆ ರಾಜಕೀಯವಲ್ಲದೆ 20 ಕೋಟಿ ಉಜ್ವಲ ಯೋಜನೆ ಸೇರಿದಂತೆ ವಿಮಾ ಯೋಜನೆ, ಕಿಸಾನ್ ಯೋಜನೆ, ಭೇಟಿ ಪಡಾವೋ ಭೇಟಿ ಪಡಾವೊ, ನಯಾ ಉಡಾನ್ ಎಂಬಂತೆ ನೂರಾರು ಯೋಜನೆಗಳನ್ನು ನಾವೆಲ್ಲ ಭಾರತೀಯರು ಎಂಬ ಒಂದೇ ಕಲ್ಪನೆಯಡಿ ಅನುಷ್ಠಾನಕ್ಕೆ ತಂದಿರುವುದು 70 ವರ್ಷಗಳಲ್ಲ ಕೇವಲ 8 ವರ್ಷಗಳಲ್ಲಿ ಎಂದು ಹೇಳಿದರು.

ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಸರ್ವಧರ್ಮೀಯರ ಕ್ಷೇತ್ರವಾಗಿರುವ ಕಾಜೂರು ದರ್ಗಾದಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಸದ್ಭಾವನ ಮಂದಿರ ಹಾಗೂ ವಸತಿ ಗೃಹ ನಿರ್ಮಾಣಕ್ಕೆ 1.50 ಕೋ.ರೂ. ಅನುದಾನ ಒದಗಿಸಲಾಗಿದೆ. ಸಧ್ಯದಲ್ಲೆ ಅಲ್ಪಸಂಖ್ಯಾತ ಸಚಿವರಿಂದಲೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಘೋಷಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 250 ಮಂದಿ ಸಾಧಕರನ್ನು ಗೌರವಿಸಲಾಯಿತು.

ಮುಸ್ಲಿಂ ಮತಗಳು ಬೇಡ ಎಂದಿದ್ದ ಶಾಸಕ ಪೂಂಜಾ

ನನಗೆ ಮುಸ್ಲಿಮರ ಮತಗಳು ಬೇಡ, ಹಿಂದುಗಳ ಮತಗಳಷ್ಟೇ ಸಾಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಬೆಳ್ತಂಗಡಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಂಜಾ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.‌‌ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಸಂಘದ ಹಿರಿಯರು ಸೂಚಿಸಿದ್ರೆ ಸ್ಪರ್ಧೆ. ಆದರೆ ಆಗ ತಾಕತ್ತಿನಿಂದ ಹೇಳ್ತೇನೆ, ನನಗೆ ಮುಸ್ಲಿಮರ ಓಟ್ ಬೇಡ. ನನಗೆ ಕೇವಲ ಹಿಂದೂಗಳ ಓಟ್ ಅಷ್ಟೇ ಸಾಕು.‌ ಯಾಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕು. ಕಾಶಿಯಲ್ಲಿ ವಿಶ್ವನಾಥ ದೇವರ ಮಂದಿರ ನಿರ್ಮಾಣ ಆಗಬೇಕು. ದತ್ತ ಪೀಠದಲ್ಲಿ ದತ್ತಾತ್ರೇಯರ ಪೀಠ ನಿರ್ಮಾಣ ಆಗಬೇಕು. ಹೀಗಾಗಿ ಬಹಳ ಧೈರ್ಯದಿಂದ ಹೇಳ್ತೇನೆ ನನಗೆ ಮುಸ್ಲಿಮರ ಮತಗಳು ಬೇಡ ಎಂದು ಹೇಳಿದ್ದರು.
 

click me!