ಗಂಗಾವತಿ: ಮುಸ್ಲಿಮರ ಮನೆಯಲ್ಲೂ ವಿಘ್ನ ನಿವಾರಕ ಗಣೇಶನಿಗೆ ಭಕ್ತಿಯ ಪೂಜೆ..!

By Kannadaprabha News  |  First Published Aug 24, 2020, 1:55 PM IST

ಮುಸ್ಲಿಮರ ನಿವಾಸದಲ್ಲಿ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸ​ವ| ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಶೇಕ್ಷಾವಲಿ ಕುಟುಂಬದವರಿಂದ ಹಿಂದೂ ದೇವರು ಗಣೇಶನಿಗೆ ಭಕ್ತಿಯ ಪೂಜೆ| ದೀಪಾವಳಿ ಮತ್ತು ದಸರಾ ಹಬ್ಬವನ್ನೂ ಸಂಭ್ರಮದಿಂದ ಆಚರಿಸುವ ಮುಸ್ಲಿಂ ಕುಟುಂಬ| 


ಗಂಗಾವತಿ(ಆ.24):  ನಗರದ 23ನೇ ವಾರ್ಡಿನ ಗುಂಡಮ್ಮ ಕ್ಯಾಂಪಿನ ನಿವಾಸಿ ಶೇಕ್ಷಾವಲಿ ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿ​ಸಿ ​ಶ್ರದ್ಧಾ-ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಅಜ್ಜ, ಮುತ್ತಜ್ಜ ಕಾಲದಿಂದ ಗಣೇಶ ಹಬ್ಬದ ಜತೆಗೆ ಪ್ರತಿ ವರ್ಷ ಬರುವ ದೀಪಾವಳಿ ಮತ್ತು ದಸರಾ ಹಬ್ಬವನ್ನು ಸಂಭ್ರಮದಿಂದ ಈ ಕುಟುಂಬ ಆಚರಿಸುತ್ತಿರುವುದು ವಿಶೇಷವಾಗಿದೆ.

ಶೇಕ್ಷಾವಲಿ ತಮ್ಮ ನಿವಾಸದಲ್ಲಿ ಗಣೇಶನ ವಿಗ್ರಹವನ್ನು ಬೆಳಗ್ಗೆ ಪ್ರತಿಷ್ಠಾಪಿ​ಸಿ ಹಿಂದೂ ಸಂಪ್ರದಾಯದಂತೆ 21 ಮೋದಕಗಳನ್ನು ಸಿ​ದ್ಧಪಡಿಸಿ ನೈವೇದ್ಯ ಕೊಡುತ್ತಾರೆ. ಅಲ್ಲದೆ ಗರಿಕೆ, ಬಿಲ್ವಪತ್ರಿ, ಜನಿವಾರ ಸೇರಿದಂತೆ ಗಣೇಶನಿಗೆ ಮುಖ್ಯವಾಗಿರುವ ಪದಾರ್ಥಗಳನ್ನು ತಂದು, ಸಾಂಪ್ರದಾಯಿಕ ಆಚರಣೆ ಮಾಡುತ್ತಿದ್ದಾರೆ.

Latest Videos

undefined

ಕೊಪ್ಪಳ: ಗಣೇಶ ಮೂರ್ತಿಗಳನ್ನ ಚರಂಡಿಗೆ ಸುರಿದ ನಗರಸಭೆ ಸಿಬ್ಬಂದಿ

ದೀಪಾವಳಿಯಲ್ಲಿ ಲಕ್ಷ್ಮೀಪೂಜೆ, ದಸರಾ ಹಬ್ಬದದಲ್ಲಿ ದೇವಿಪೂಜೆ, ಅಲ್ಲದೆ ನಗರದಲ್ಲಿರುವ ಎಲ್ಲ ಹಿಂದೂಗಳ ದೇವಸ್ಥಾನಗಳಿಗೆ ತೆರಳಿ ಕಾಯಿ-ಕರ್ಪೂರದೊಂದಿಗೆ ಪೂಜೆ ಸಲ್ಲಿಸಿ ಬರುತ್ತಾರೆ ಈ ಕುಟುಂಬ ಸದ​ಸ್ಯ​ರು. ಹಿಂದೂ-ಮುಸ್ಲಿಂ ಸೌಹಾರ್ದದ ಪ್ರತೀಕವಾಗಿರುವ ಇವರ ನಿವಾಸಕ್ಕೆ ಜಾತಿ ಭೇದ ಬಿಟ್ಟು ಎಲ್ಲರನ್ನು ಪೂಜೆಗೆ ಅಹ್ವಾನಿಸುತ್ತಿದ್ದಾರೆ. ಗಣೇಶ ವಿಸರ್ಜನೆ ಸಂಜೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಕನಕಗಿರಿ ಹುಸೇನಸಾಬ್‌, ಕೆ. ಫಕ್ರುದ್ದೀನ್‌ಸಾಬ್‌, ವಾಜೀದ್‌ ಹಾಗೂ ಮನೆಯ ಮಹಿಳೆಯರು ಭಾಗವಹಿಸಿದ್ದರು.

ವಿವಿಧ ವೃತ್ತ​ಗ​ಳಲ್ಲಿ ಗಣೇ​ಶೋ​ತ್ಸ​ವ

ನಗರದ ವಿವಿಧ ವೃತ್ತಗಳಲ್ಲಿ ಸಂಘ-ಸಂಸ್ಥೆಯವರಿಂದ ಗಣೇಶ ಪ್ರತಿಷ್ಠಾಪನೆ ನೆರವೇರಿತು. ಹಿಂದೂ ಸಮಾಜದವರು ವಿವಿಧ ಸ್ಥಳಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿ​ಸಿ​ದ್ದಾ​ರೆ. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ನೀತಿ-ನಿಯಮಗಳಂತೆ ಸರಳ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದ ಸಂಘ-ಸಂಸ್ಥೆಯವರು ಒಂದೇ ದಿನ ಬೆಳಗ್ಗೆ ಗಣೇಶನನ್ನು ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡಿದರು. ನಗರದ ಬಸ್‌ ನಿಲ್ದಾಣದ ಬಳಿ ಹಿಂದೂ ಮಹಾಸಭಾದವರು ಪ್ರತಿಷ್ಠಾಪಿಸಿದ್ದ ಗಣೇಶನನ್ನು ಸರಳ ರೀತಿಯಲ್ಲಿ ಆಚರಿಸಿ ಸಂಜೆ ವಿಸರ್ಜನೆ ಮಾಡಿದರು. ಕಲ್ಮಠ ರಸ್ತೆ, ವಾಲ್ಮೀಕಿ ವೃತ್ತ, ಎಪಿಎಂಸಿಗಳಲ್ಲಿ ಗಣೇಶ ಹಬ್ಬ ಆಚರಿಸಿದ್ದಾರೆ. 
 

click me!