ಮುರುಘಾಶ್ರೀ ನಿರಪರಾಧಿ ತೀರ್ಪು: ಇದು 'ನಮ್ಮ ವ್ಯವಸ್ಥೆಯ ಸೋಲು' ಎಂದ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ!

Published : Nov 26, 2025, 05:50 PM IST
Murugha seer case Odanadi stanley

ಸಾರಾಂಶ

ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯ ಪ್ರಕರಣದ ನಿರಪರಾಧಿ ತೀರ್ಪು  'ನಮ್ಮ ವ್ಯವಸ್ಥೆಯ ಸೋಲು' ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನ್ಲಿ ಹೇಳಿದ್ದಾರೆ. ತನಿಖಾ ಹಂತದಲ್ಲಿನ ಲೋಪಗಳೇ ಇದಕ್ಕೆ ಕಾರಣ ಎಂದಿದ್ದಾರೆ. ಮಕ್ಕಳ ಪರ ಕಾನೂನು ಹೋರಾಟ ಮುಂದುವರಿಸುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

ಚಿತ್ರದುರ್ಗ (ನ.26): ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮುರುಘಾ ಮಠದ ಶಿವಮೂರ್ತಿ ಶರಣರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ನಿರಪರಾಧಿ ತೀರ್ಪು ಕುರಿತು ಮಕ್ಕಳ ಪರ ಹೋರಾಟ ಮಾಡುತ್ತಿರುವ ಒಡನಾಡಿ ಸಂಸ್ಥೆ ತೀವ್ರ ನಿರಾಸೆ ವ್ಯಕ್ತಪಡಿಸಿದೆ. ಈ ತೀರ್ಪು 'ವ್ಯವಸ್ಥೆಯ ಸೋಲು' ಎಂದು ಒಡನಾಡಿ ಸಂಸ್ಥಾಪಕರಾದ ಸ್ಟ್ಯಾನ್ಲಿ ಆಕ್ರೋಶ ಹೊರಹಾಕಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡನಾಡಿ ಸಂಸ್ಥಾಪಕ ಸ್ಟ್ಯಾನ್ಲಿ ಅವರು, ಈ ತೀರ್ಪು ನಿರಾಶೆ ಮೂಡಿಸಿದ್ದರೂ ಅದನ್ನು ಸ್ವಾಗತಿಸುತ್ತೇವೆ. ಆದರೆ ಮಕ್ಕಳ ಪರ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ತೀರ್ಪು ವ್ಯವಸ್ಥೆಯ ಸೋಲು. ನಮ್ಮ ವ್ಯವಸ್ಥೆಯಿಂದಲೇ ಈ ಸೋಲಾಗಿದೆ. ತನಿಖೆ ಹಂತದಲ್ಲಿ ಬಹುದೊಡ್ಡ ಲೋಪಗಳಾಗಿವೆ. ಸರ್ಕಾರ, ಪೊಲೀಸ್ ಇಲಾಖೆ, ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿ (CWC) ಸೇರಿದಂತೆ ಎಲ್ಲೆಡೆಯೂ ಲೋಪಗಳು ಆಗಿವೆ. ಅದರಿಂದಲೇ ಇಂತಹ ತೀರ್ಪು ಬಂದಿದೆ. ಮಕ್ಕಳನ್ನು ಹೆದರಿಸುವ ಕೆಲಸವೂ ಸಹ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಇಲ್ಲಿ ಜಾತಿ, ಹಣ, ಧರ್ಮ ಎಲ್ಲವೂ ಕೆಲಸ ಮಾಡಿವೆ. ಆದರೆ, ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ. ನಾನು ಸದಾ ಮಕ್ಕಳ ಪರ ಇರುತ್ತೇನೆ ಎಂದು ಸ್ಟ್ಯಾನ್ಲಿ ಅವರು ತಮ್ಮ ಹೋರಾಟದ ದೃಢತೆಯನ್ನು ಪುನರುಚ್ಚರಿಸಿದರು.

ಬುದ್ಧಿವಂತಿಕೆ ಗೆದ್ದಿದೆ: ಪರಶುರಾಮ್

ಒಡನಾಡಿ ನಿರ್ದೇಶಕ ಪರಶುರಾಮ್ ಅವರು ಕೂಡ ತೀರ್ಪು ನಿರೀಕ್ಷಿತವಾಗಿದ್ದರೂ ನಿರಾಸೆ ತಂದಿದೆ ಎಂದು ಹೇಳಿದ್ದಾರೆ. 'ನಾವು ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡುತ್ತಿಲ್ಲ. ಆದರೆ ಆರಂಭದಿಂದಲೂ ಈ ಕೇಸನ್ನು ಹಳ್ಳ ಹಿಡಿಸುವ ಕೆಲಸ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು. ಇಲ್ಲಿ ಬುದ್ಧಿವಂತಿಕೆ ಗೆದ್ದಿದೆ. ಘಟಾನುಘಟಿ ವಕೀಲರು ಎರಡೂ ಕಡೆ ತಮ್ಮ ಕಕ್ಷಿದಾರರ ಪರವಾಗಿ ವಾದ ಮಾಡಿದ್ದಾರೆ," ಎಂದು ಹೇಳಿದ ಪರಶುರಾಮ್, ತನಿಖೆಯ ಆರಂಭಿಕ ಹಂತದಲ್ಲಿನ ಲೋಪಗಳೇ ಈ ಫಲಿತಾಂಶಕ್ಕೆ ಕಾರಣವಾಗಿವೆ ಎಂಬುದನ್ನು ಸೂಚಿಸಿದರು.

ಮುಂದಿನ ಹೋರಾಟದ ಕುರಿತು ಮಾತನಾಡಿದ ಅವರು, 'ನಾವು ಮಕ್ಕಳ ಅಭಿಪ್ರಾಯ ಪಡೆದು ಮುಂದಿನ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಮಾರ್ಗದಲ್ಲಿ ನ್ಯಾಯ ಒದಗಿಸಲು ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಈ ತೀರ್ಪಿನಿಂದಾಗಿ ಮಕ್ಕಳ ಪರ ಹೋರಾಟಗಾರರಿಗೆ ಹಿನ್ನಡೆಯಾಗಿದ್ದರೂ, ಮುರುಘಾ ಶ್ರೀ ಪ್ರಕರಣದ ಕಾನೂನು ಸಮರ ಇನ್ನೂ ಮುಗಿದಿಲ್ಲ ಎಂಬುದನ್ನು ಒಡನಾಡಿ ಸಂಸ್ಥೆ ಸ್ಪಷ್ಟಪಡಿಸಿದೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ