ಶಿವಮೊಗ್ಗ (ಜೂ.10) : ಕಳ್ಳರಿಬ್ಬರು ವೃದ್ದೆಯೋರ್ವಳ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಬಳಿಕ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೃದ್ಧ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಲು ಗ್ರಾಮದಲ್ಲಿಂದು ನಡೆದಿದೆ.
ಭವಾನಿಯಮ್ಮ (85 ವರ್ಷ) ಕೊಲೆಗೀಡಾದ ದುರ್ದೈವಿ. ಕಟ್ಟೆಹಕ್ಲು ಗ್ರಾಮದ ಗಣಪತಿ ದೇವಸ್ಥಾನ ಎದುರಿನ ರಸ್ತೆಯಲ್ಲಿ ವಾಸವಿದ್ದ ಈಕೆಯ ಮನೆಗೆ ನುಗ್ಗಿದ್ದ ಶಿವಮೊಗ್ಗದ ಶಿವು ಹಾಗೂ ನಿತಿನ್ ಎಂಬುವವರು ವೃದ್ದೆ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಆಕೆ ಕಿರುಚಿಕೊಂಡಿದ್ದು ಸ್ಥಳೀಯರು ಬಂದು ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಸದೇ ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ಭೀಮಾತೀರ; ಗಂಡನ ಶವದ ಮುಂದೆ ಶಪಥ, ಒಂದೂವರೆ ವರ್ಷದ ನಂತರ ಉರುಳಿದ ಹೆಣ ...
ವೃದ್ದೆಯ ಬಳಿ ಇದ್ದ ಹಣಕ್ಕಾಗಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ವೃದ್ಧೆ ಅಂಚೆ ಕಚೇರಿಯಲ್ಲಿ ಹಣ ಪಡೆದು ಮನೆಗೆ ವಾಪಸಾಗಿದ್ದರು. ಇದನ್ನು ಗಮನಿಸಿದ ಈ ಇಬ್ಬರು ಆಕೆಯ ಮನೆಗೆ ನುಗ್ಗಿ ಕುತ್ತಿಗೆ ಹಿಸುಕಿ ಹಣ ಕಳವಿಗೆ ಯತ್ನಿಸಿದ್ದರು.
ಸ್ಥಳೀಯರು ಆಗಮಿಸುತ್ತಿದ್ದಂತೆ ಶಿವು ಸ್ಥಳದಿಂದ ಪರಾರಿಯಾದರೆ, ಇನ್ನೋರ್ವ ಆರೋಪಿ ನಿತಿನ್ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಈತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣಗಳಲ್ಲಿ ಇಬ್ಬರೂ ಭಾಗಿಯಾಗಿದ್ದು ಇಬ್ಬರ ಮೇಲೂ ಹಲವು ಪ್ರಕರಣಗಳಿವೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.