ಗದಗನಲ್ಲಿ ಹೆಚ್ಚಾದ ಅನಧಿಕೃತ ಫ್ಲೆಕ್ಸ್‌ಗಳು: ನಗರಸಭೆಯ ಆದಾಯಕ್ಕೆ ಕತ್ತರಿ

By Suvarna NewsFirst Published Dec 21, 2019, 8:04 AM IST
Highlights

ಕಡ್ಡಾಯವಾಗಿ ಅನುಮತಿ ಪಡೆಯುವ ನಿಯಮವಿದ್ದರೂ ರಾರಾಜಿಸುತ್ತಿರುವ ಅನಧಿಕೃತ ಫ್ಲೆಕ್ಸ್‌ಗಳು|ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕಗಳ ಅಳವಡಿಕೆಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಕಡ್ಡಾಯ| ಫ್ಲೆಕ್ಸ್‌ ಅಳವಡಿಸುವವರು ನಗರಸಭೆಗೆ ಅಗತ್ಯ ಕರ ಪಾವತಿ ಮಾಡಿ, ಅನುಮತಿ ಪಡೆದಿರಬೇಕು| ಇದು ಸ್ಥಳಿಯ ಸಂಸ್ಥೆಗಳ ಆದಾಯ ಮೂಲವೂ ಆಗಿದೆ| ಅವಳಿ ನಗರದಲ್ಲಿ ಈ ನಿಯಮಗಳು ಪಾಲನೆ ಆಗುತ್ತಿಲ್ಲ|

ಅಕ್ಷಯಕುಮಾರ ಶಿವಶಿಂಪಿಗೇರ

ಗದಗ(ಡಿ.21): ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳು (ಫ್ಲೆಕ್ಸ್‌ಗಳ) ರಾರಾಜಿಸುತ್ತಿದ್ದು, ಇದರಿಂದ ನಗರಸಭೆ (ವಾಣಿಜ್ಯ ಕರ) ಬರಬೇಕಿದ್ದ ಲಕ್ಷಾಂತರ ಆದಾಯಕ್ಕೆ ಕತ್ತರಿ ಬೀಳುತ್ತಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತು ಫಲಕಗಳ ಅಳವಡಿಕೆಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಕಡ್ಡಾಯ. ಫ್ಲೆಕ್ಸ್‌ ಅಳವಡಿಸುವವರು ನಗರಸಭೆಗೆ ಅಗತ್ಯ ಕರ ಪಾವತಿ ಮಾಡಿ, ಅನುಮತಿ ಪಡೆದಿರಬೇಕು. ಇದು ಸ್ಥಳಿಯ ಸಂಸ್ಥೆಗಳ ಆದಾಯ ಮೂಲವೂ ಆಗಿದೆ. ಆದರೆ, ಅವಳಿ ನಗರದಲ್ಲಿ ಈ ನಿಯಮಗಳು ಪಾಲನೆ ಆಗುತ್ತಿಲ್ಲ. ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಅನಧೀಕೃತ ಜಾಹೀರಾತು ಫಲಕಗಳದ್ದೇ ಹಾವಳಿಯಾಗಿದೆ.

ಆದಾಯಕ್ಕೆ ಕತ್ತರಿ:

ಇಂತಹ ಬ್ಯಾನರ್‌ ಅಳಿವಡಿಕೆಯ ಕರದಿಂದ ಗದಗ- ಬೆಟಗೇರಿ ನಗರಸಭೆಗೆ 12 ಲಕ್ಷಕ್ಕೂ ಅಧಿಕ ಕರ ಬರಬೇಕು. ಆದರೆ, ವಾಸ್ತವವಾಗಿ ಆದಾಯ ಬರುತ್ತಿರುವುದು ಕೇವಲ 4 ರಿಂದ 5 ಲಕ್ಷ ಮಾತ್ರ. ಗದಗ- ಬೆಟಗೇರಿಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ವಾಣಿಜ್ಯ ಚಟುವಟಿಕೆಗಳು ಇಲ್ಲ. ಆದರೆ, ಎಲ್ಲೆಡೆ ವಿವಿಧ ಬಟ್ಟೆಶೋ ರೂಂ, ಮೊಬೈಲ್‌ ಕಂಪನಿಗಳ ಫಲಕಗಳು, ಪಾದರಕ್ಷೆ ಮಳಿಗೆಗಳು, ಚಿನ್ನಾಭರಣದ ಅಂಗಡಿಗಳು ಹಾಗೂ ಅಟೋಮೊಬೈಲ್‌, ಹೋಲ್‌ ಸೇಲ್‌ ಮತ್ತು ರಿಟೇಲ್‌ ಸೇರಿದಂತೆ ಇನ್ನಿತರೆ ವಾಣಿಜ್ಯ ಉದ್ದೇಶಿತ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಹೃದಯ ಭಾಗದ ಗಾಂಧಿ ವೃತ್ತ, ಟಾಂಗಾಕೂಟ, ಹುಯಿಲಗೋಳ ನಾರಾಯಣ ರಾವ್‌ ವೃತ್ತ, ಚೆನ್ನಮ್ಮ ಸರ್ಕಲ್‌, ಹಳೆಯ ಡಿಸಿ ಆಫೀಸ್‌ ವೃತ್ತ, ಮುಳಗುಂದ ನಾಕಾ, ಪುಟ್ಟರಾಜ ಗವಾಯಿ ಸರ್ಕಲ್‌, ಹಳೆಯ ಬಸ್‌ ನಿಲ್ದಾಣ, ಬೆಟಗೇರಿಯ ಬಸ್‌ ನಿಲ್ದಾಣ, ಹೆಲ್ತ್‌ ಕ್ಯಾಂಪ್‌ ಸೇರಿದಂತೆ ಹೆಚ್ಚಿನ ಜನದಟ್ಟಣೆ ಇರುವ ರಸ್ತೆಗಳಲ್ಲಿ ಸಾವಿರಾರು ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಈ ಪೈಕಿ ನಗರಸಭೆಯಿಂದ ಅನುಮತಿ ಪಡೆದಿದ್ದು, ಬೆರಳೆಣಿಕೆಯಷ್ಟು ಮಾತ್ರ.

ಪ್ರಭಾವಿಗಳ ಅಡ್ಡಿ?:

ವಾಣಿಜ್ಯ ಫಲಕಗಳು ವರ್ಷವಿಡೀ ಅಳವಡಿಸಿದ್ದರೆ, ಹಬ್ಬಗಳ ವೇಳೆಯಲ್ಲಿ ಶುಭಾಶಯಗಳ ಬ್ಯಾನರ್‌ಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತವೆ. ದಸರಾ, ದೀಪಾವಳಿ, ಶ್ರಾವಣಮಾಸ, ರಂಜಾನ್‌, ಬಕ್ರೀದ್‌, ಕ್ರಿಸ್‌ಮಸ್‌ ಹಾಗೂ ವಿವಿಧ ಜಾತ್ರೆಗಳ ಸಂದರ್ಭದಲ್ಲಿ ಸ್ಥಳೀಯ ನಾಯಕರ ಶುಭಾಶಯಗಳ ಜಾಹೀರಾತು ಫಲಗಳನ್ನು ಗಲ್ಲಿಗಲ್ಲಿಗಳಲ್ಲೂ ಅಳವಡಿಸಲಾಗಿರುತ್ತದೆ. ಇಂತಹ ಬ್ಯಾನರ್‌ಗಳ ತೆರವಿಗೆ ಮುಂದಾದರೂ, ಪ್ರಭಾವಿಗಳು ಇದಕ್ಕೆ ಅಡ್ಡಿಯಾಗುತ್ತಿದ್ದಾರೆ, ಇದಲ್ಲದೇ ಬ್ಯಾನರ್‌ ತೆರವಿಗೆ ಧಾರ್ಮಿಕತೆಯ ಬಣ್ಣ ಬಳಿಯುತ್ತಾರೆ ಎನ್ನುವ ಮಾತುಗಳು ನಗರಸಭೆಯ ಸಿಬ್ಬಂದಿಗಳಿಂದಲೇ ಕೇಳಿ ಬರುತ್ತಿವೆ.

ಈ ಬಗ್ಗೆ ಈಗಾಗಲೇ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರು ತಿಳಿಸಿದ್ದಾರೆ. 
 

click me!