ಮಂಗಳೂರು: ಬೆಳ್ತಂಗಡಿಯಲ್ಲಿ ಐದು ಬಸ್‌ಗಳಿಗೆ ಕಲ್ಲುತೂರಾಟ..!

By Kannadaprabha News  |  First Published Dec 21, 2019, 7:43 AM IST

ಬೆಳ್ತಂಗಡಿ ತಾಲೂಕಿನ ಬಂಗಾರಕಟ್ಟೆಯ ಕಾರಂದೂರು ಎಂಬಲ್ಲಿ ಒಂದು ಬಸ್‌ಗೆ ಹಾಗೂ ಕುಪ್ಪೆಟ್ಟಿಯಲ್ಲಿ 3 ಸರ್ಕಾರಿ ಬಸ್‌ಗಳೂ ಸೇರಿ 4 ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಮರೆಯಲ್ಲಿ ನಿಂತು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆಯಿತು.


ಮಂಗಳೂರು(ಡಿ.21): ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾದ ಘಟನೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಕೆಲ ದುಷ್ಕರ್ಮಿಗಳು ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಶುಕ್ರವಾರ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಬಂಗಾರಕಟ್ಟೆಯ ಕಾರಂದೂರು ಎಂಬಲ್ಲಿ ಒಂದು ಬಸ್‌ಗೆ ಹಾಗೂ ಕುಪ್ಪೆಟ್ಟಿಯಲ್ಲಿ 3 ಸರ್ಕಾರಿ ಬಸ್‌ಗಳೂ ಸೇರಿ 4 ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ್ದಾರೆ.

ಮರೆಯಲ್ಲಿ ನಿಂತು ಕಲ್ಲು ತೂರಾಟ:

Latest Videos

undefined

ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯಲ್ಲಿ ರಸ್ತೆ ಮಧ್ಯೆ ಟಯರ್‌ ಉರಿಸಿದ ದುಷ್ಕರ್ಮಿಗಳು ಅಲ್ಲೇ ಸಮೀಪದ ಬೋವಿನಕಡವು ಎಂಬಲ್ಲಿ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದರು. ಬಳಿಕ ಅದೇ ಸ್ಥಳದಲ್ಲಿ ಮೂರು ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಕಲ್ಲೆಸೆದು ಹಾನಿ ಮಾಡಲಾಯಿತು. ಬೋವಿನಕಡವು ನಿರ್ಜನ ಪ್ರದೇಶವಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳು ಆವರಿಸಿವೆ. ಆದ್ದರಿಂದ ಈ ಪರಿಸರದ ಅನುಕೂಲತೆಯ ಲಾಭ ಪಡೆದ ದುಷ್ಕರ್ಮಿಗಳು ಬಸ್‌ಗಳಿಗೆ ಕಲ್ಲೆಸೆದು ಅಲ್ಲಿಂದ ಪರಾರಿಯಾಗುತ್ತಿದ್ದರು.

ಮಂಗಳೂರು: ಕಾಂಗ್ರೆಸ್ ಪಕ್ಷದ ನಿಯೋಗ ಪೊಲೀಸ್ ವಶಕ್ಕೆ

ಸ್ಥಳಕ್ಕೆ ಪೊಲೀಸರು ತೆರಳಿದಾಗ ಅಲ್ಲಿ ಯಾರೂ ಇರುತ್ತಿರಲಿಲ್ಲ. ಆದರೆ ಪೊಲೀಸರು ಅಲ್ಲಿಂದ ವಾಪಸ್‌ ಹೋಗುತ್ತಿದ್ದಂತೆ ಮತ್ತೆ ಅದೇ ಸ್ಥಳದಲ್ಲಿ ಬಸ್‌ಗಳಿಗೆ ಕಲ್ಲೆಸೆಯುವ ಘಟನೆ ನಡೆಯುತ್ತಿತ್ತು. ಇಲ್ಲಿ ಬೆಳಗ್ಗೆ 9.55ರ ಸುಮಾರಿಗೆ ಧರ್ಮಸ್ಥಳದಿಂದ ಮಡಿಕೇರಿಗೆ ಬರುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆದರೆ, ಅದಾಗಿ 1 ಗಂಟೆಯ ಬಳಿಕ ಉಪ್ಪಿನಂಗಡಿಯಿಂದ ಧರ್ಮಸ್ಥಳವಾಗಿ ಬೆಂಗಳೂರು ಹೋಗುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆಯಲಾಯಿತು.

ಮಂಗಳೂರು ಹಿಂಸಾಚಾರ ಪೊಲೀಸರ ಪ್ಲಾನ್‌ ಎಂದ ಎಂಎಲ್‌ಸಿ

11.25ರ ಸುಮಾರಿಗೆ ಪುತ್ತೂರಿನಿಂದ ಉಪ್ಪಿನಂಗಡಿಯಾಗಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ಗೆ ಕಲ್ಲೆಸೆಯಲಾಯಿತು. ಇದರಿಂದಾಗಿ ಬಸ್‌ನ ಗಾಜುಗಳಿಗೆ ಹಾನಿಯಾಗಿದ್ದು ಬಿಟ್ಟರೆ, ಬೇರಿನ್ಯಾವುದೇ ಅಪಾಯ ಸಂಭವಿಸಿಲ್ಲ. ಇದರಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಿಕೊಡಲಾಯಿತು. ಬೆಳಗ್ಗೆ ಬಂಗಾರಕಟ್ಟೆಯ ಕಾರಂದೂರಿನಲ್ಲಿಯೂ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿತ್ತು.

ಓರ್ವ ವಶ:

ಬೋವಿನಕಡವು ಎಂಬಲ್ಲಿ ಬಸ್‌ಗಳಿಗೆ ಕಲ್ಲೆಸೆಯುತ್ತಿದ್ದ ಪ್ರಕರಣದಲ್ಲಿ ಕಪ್ಪೆಯಂತೆ ಸಂಚರಿಸಿ ಪರಾರಿಯಾಗಲೆತ್ನಿಸಿದ ಕಿಡಿಗೇಡಿಯೊಬ್ಬನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

click me!