
ಉಡುಪಿ (ಆ.25): ಮುಂಬೈ ಭೂಗತ ಜಗತ್ತಿನಲ್ಲಿ ಒಂದು ಕಾಲದಲ್ಲಿ ನಡುಕ ಹುಟ್ಟಿಸಿ, ಕಳೆದ ಒಂದು ದಶಕದಿಂದ ಸತ್ತುಹೋಗಿದ್ದಾನೆ ಎಂದೇ ನಂಬಲಾಗಿದ್ದ ಕುಖ್ಯಾತ ಭೂಗತ ಪಾತಕಿ ಹೇಮಂತ್ ಪೂಜಾರಿ (HP - Hemant Poojary) ಮತ್ತೆ ಪ್ರತ್ಯಕ್ಷನಾಗಿದ್ದಾನಾ? ಕರಾವಳಿಯ ಮುದರಂಗಡಿಯಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಡೇವಿಡ್ ಹತ್ಯೆ ಪ್ರಕರಣ ಈಗ ಇಡೀ ರಾಜ್ಯ ಮತ್ತು ಮುಂಬೈ ಪೊಲೀಸರನ್ನು ಬೆಚ್ಚಿಬೀಳಿಸಿದೆ. ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಆಗಸ್ಟ್ 7 ರಂದು ನಡೆದ ಉದ್ಯಮಿ ಡೇವಿಡ್ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಭೂಗತ ಲೋಕದ ನಂಟು ಇರುವುದು ಬಯಲಾಗಿದ್ದು, ಹೇಮಂತ್ ಪೂಜಾರಿಯದ್ದು ಎನ್ನಲಾದ ಆಡಿಯೋ ಕ್ಲಿಪ್‌ಗಳು ಲಭ್ಯವಾಗಿವೆ.
ಶೂಟರ್ ಜೊತೆ ಮಾತುಕತೆ: ಡೇವಿಡ್‌ನನ್ನು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಶಾರ್ಪ್ ಶೂಟರ್ ರಾಜು ನೇರವಾಗಿ 'HP'ಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ಆ ಕರೆಯಲ್ಲಿ, 'ನಿನಗೆ ಸಲ್ಲಬೇಕಾದ ಹಣ ತಲುಪುತ್ತದೆ, ನೀನು ತಕ್ಷಣವೇ ಯಾವುದಾದರೂ ಸುರಕ್ಷಿತ ಜಾಗ ನೋಡಿ ಅಡಗಿಕೋ' ಎಂದು ಎದುರಿನ ವ್ಯಕ್ತಿ ಹೇಳಿರುವ ಮಾತುಗಳು ರೆಕಾರ್ಡ್ ಆಗಿವೆ.
ಹೋಟೆಲ್ ಉದ್ಯಮಿಗೆ ಬೆದರಿಕೆ: ಅಷ್ಟೇ ಅಲ್ಲದೆ, ಈ ಕೊಲೆಯ ಬಳಿಕ ಉಡುಪಿಯ ಪ್ರಮುಖ ಹೋಟೆಲ್ ಉದ್ಯಮಿಯೊಬ್ಬರಿಗೂ ಕರೆ ಹೋಗಿದ್ದು, 'ಮೇ ಹೆಚ್ ಪಿ ಬೋಲ್ ರಹಾ ಹೂಂ...' (ನಾನು ಹೇಮಂತ್ ಪೂಜಾರಿ ಮಾತನಾಡುತ್ತಿರುವುದು) ಎಂದು ಧಮಕಿ ಹಾಕಿರುವ ಮತ್ತೊಂದು ಆಡಿಯೋ ಕೂಡ ಪೊಲೀಸರ ಕೈಸೇರಿದೆ.
ಸದ್ಯ ಈ ಎರಡೂ ಆಡಿಯೋ ಧ್ವನಿಗಳು ನಿಜಕ್ಕೂ ಹೇಮಂತ್ ಪೂಜಾರಿಯದ್ದೇ ಅಥವಾ ಆತನ ಹೆಸರನ್ನು ಬಳಸಿ ಬೇರೆ ಯಾರಾದರೂ ಕೃತ್ಯ ಎಸಗುತ್ತಿದ್ದಾರೆಯೇ ಎಂಬ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯ (FSL) ಮೂಲಕ ತನಿಖೆ ಚುರುಕುಗೊಂಡಿದೆ.
ಕರಾವಳಿ ಮೂಲದ ಹೇಮಂತ್ ಪೂಜಾರಿ ಭೂಗತ ಜಗತ್ತಿಗೆ ಕಾಲಿಟ್ಟ ಕಥೆ ಸಿನಿಮಾ ಕಥೆಗಿಂತ ರೋಚಕವಾಗಿದೆ. ಮುಂಬೈನ ಘಾಟ್‌ಕೋಪರ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಹೇಮಂತ್ ಪೂಜಾರಿ, 1999ರಲ್ಲಿ ಮುಂಬೈ ಅಂಡರ್‌ವರ್ಲ್ಡ್‌ಗೆ ಪ್ರವೇಶ ಪಡೆದಿದ್ದ. ಅಲ್ಪಾವಧಿಯಲ್ಲೇ ಕುಖ್ಯಾತ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಆಪ್ತ ಬಳಗ ಸೇರಿದ ಆತ, ಗ್ಯಾಂಗ್‌ನ ಪ್ರಮುಖ 'ಶಾರ್ಪ್ ಶೂಟರ್' ಆಗಿ ಗುರುತಿಸಿಕೊಂಡ. ಮಾರ್ಚ್ 2011ರಲ್ಲಿ ಮುಂಬೈನ ಗೋರೆಗಾಂವ್‌ನಲ್ಲಿ 75 ವರ್ಷದ ಬೇಕರಿ ಮಾಲೀಕ ಅಂಗಾರ ಪೂಜಾರಿಯನ್ನು ಹಫ್ತಾ ವಸೂಲಿಗಾಗಿ ಭೀಕರವಾಗಿ ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಈತನ ಹೆಸರು ದೇಶಾದ್ಯಂತ ಸದ್ದು ಮಾಡಿತ್ತು.
2011ರ ಬಳಿಕ ಯಾವುದೇ ಅಪರಾಧ ಕೃತ್ಯಗಳಲ್ಲಿ ಕಾಣಿಸಿಕೊಳ್ಳದೆ ಸೈಲೆಂಟ್ ಆಗಿದ್ದ ಹೇಮಂತ್ ಪೂಜಾರಿ, 2013ರಲ್ಲಿ ವಿದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಅಥವಾ ಹತ್ಯೆಯಾಗಿದ್ದಾನೆ ಎಂಬ ಸುದ್ದಿಗಳು ಹರಿದಾಡಿದ್ದವು. ಭಾರತೀಯ ತನಿಖಾ ಸಂಸ್ಥೆಗಳ ಕಣ್ಣಿಗೂ ಬೀಳದೆ ಆತ ಸಂಪೂರ್ಣ ಕಣ್ಮರೆಯಾಗಿದ್ದ. ಆದರೆ ಬರೋಬ್ಬರಿ 11 ವರ್ಷಗಳ ನಂತರ, ಉಡುಪಿಯ ಮುದರಂಗಡಿ ಶೂಟೌಟ್ ಮೂಲಕ 'HP' ಹೆಸರು ಮತ್ತೆ ಮುನ್ನೆಲೆಗೆ ಬಂದಿರುವುದು ಕರಾವಳಿ ಉದ್ಯಮಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಆಡಿಯೋದ ನೈಜತೆ ದೃಢಪಟ್ಟರೆ, ಭಾರತೀಯ ಭೂಗತ ಜಗತ್ತಿನ ಕರಾಳ ಇತಿಹಾಸದಲ್ಲಿ ಇದೊಂದು ಮತ್ತೊಂದು ದೊಡ್ಡ ತಿರುವು ಪಡೆಯಲಿದೆ.