ಮೂರುಸಾವಿರ ಮಠದ ಅಸ್ತಿ ಮಾರಾಟ ಮಾಡಿಲ್ಲ: ಮೂಜಗು

By Kannadaprabha NewsFirst Published Jan 30, 2021, 9:42 AM IST
Highlights

ಟೀಕೆ ಟಿಪ್ಪಣೆ ಮಾಡುವ ಮೂಲಕ ಮಠದ ಘನತೆಗೆ ಧಕ್ಕೆ ತರಬಾರದು| ಶ್ರೀಮಠಕ್ಕೆ ಬರುತ್ತಿದ್ದ 1.97 ಲಕ್ಷ ರೂ. ಆದಾಯ ನಿರಂತರ ಪ್ರಯತ್ನದ ಫಲವಾಗಿ ಪ್ರತಿ ತಿಂಗಳು ಸುಮಾರು 9 ಲಕ್ಷದವರೆಗೆ ಬಾಡಿಗೆ ಉತ್ಪನ್ನ ಹೆಚ್ಚಿಸಲಾಗಿದೆ: ಮೂಜಗು| 

ಹುಬ್ಬಳ್ಳಿ(ಜ.30): ಇಲ್ಲಿನ ಮೂರುಸಾವಿರ ಮಠದ ಯಾವುದೇ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿಲ್ಲ. ಪರಭಾರೆಯನ್ನೂ ಮಾಡಿಲ್ಲ ಎಂದು ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂರುಸಾವಿರ ಮಠಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಮಠದ ಬಗ್ಗೆ ಇಲ್ಲ ಸಲ್ಲದ ಆರೋಪ, ಟೀಕೆ ಟಿಪ್ಪಣೆ ಮಾಡುವ ಮೂಲಕ ಮಠದ ಘನತೆಗೆ ಧಕ್ಕೆ ತರಬಾರದು ಎಂದಿದ್ದಾರೆ. ಈ ಕಾರಣದಿಂದಾಗಿ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಹೇಳಿದ್ದಾರೆ.

ಹಿಂದಿನ ಜಗದ್ಗುರುಗಳಾದ ಲಿಂಗೈಕ್ಯ ಡಾ. ಮೂಜಗಂ ಅವರ ಜೀವಿತಾವಧಿಯಲ್ಲೇ ಕೆಎಲ್‌ಇ ಶಿಕ್ಷಣ ಸಂಸ್ಥೆಗೆ ಸ್ವಸಂತೋಷದಿಂದ ಮಠದ ಭಕ್ತರ ಅಭಿಪ್ರಾಯವನ್ನು ಪಡೆದು ಬಿಡ್ನಾಳ ಗ್ರಾಮದ ವ್ಯಾಜ್ಯದಲ್ಲಿದ್ದ ಜಮೀನನ್ನು ಗೇಣಿದಾರರಿಂದ ಮಠದ ಹೆಸರಿನಲ್ಲಿ ವೈದ್ಯಕೀಯ ಕಾಲೇಜ್‌ ಮತ್ತು ಆಸ್ಪತ್ರೆ ಮಾಡುವ ಕರಾರಿನೊಂದಿಗೆ ದಾನ ಪತ್ರ ಮಾಡಿದ್ದರು.

ಮೂರುಸಾವಿರ ಮಠ ಉತ್ತರಾಧಿಕಾರಿ ವಿವಾದ: ಮೌನ ಮುರಿದ ಮೂಜಗು

ಅವರು ಲಿಂಗೈಕ್ಯರಾಗುವ ಪೂರ್ವದಲ್ಲಿ ಮಠಕ್ಕೆ ಉತ್ತರಾಧಿಕಾರಿ ಕುರಿತು ಕೋರ್ಟಿನಲ್ಲಿ ವ್ಯಾಜ್ಯವಿತ್ತು. ಅದು ಸುಪ್ರೀಂಕೋರ್ಟ್‌ನಲ್ಲಿದ್ದಾಗ ಸದರಿ ವ್ಯಾಜ್ಯವನ್ನು ಆರ್ಬಿಟ್ರೇಟರ್‌ ( ಮದ್ಯಸ್ಥಿಕೆದಾರರು) ರವರಿಗೆ ಪ್ರಕರಣವನ್ನು ವರ್ಗಾಯಿಸಲಾಯಿತು. ಸುಮಾರು ವರ್ಷಗಳ ಕಾಲ ಅವರ ಮುಂದೆ ಪ್ರಕರಣ ನಡೆದು ಅಂತಿಮವಾಗಿ ನಮ್ಮ ಮತ್ತು ಶ್ರೀ ರುದ್ರಮುನಿ ಸ್ವಾಮಿಗಳ ಮಧ್ಯೆ ಸಂಧಾನವಾಗಿದೆ. ಉಭಯತರು ಸಂಧಾನ ಮಾಡಿಕೊಂಡು ಲಿಂಗೈಕ್ಯ ಡಾ. ಮೂಜಗಂ ಅವರಿಚ್ಛೆಯಂತೆ ಕೆಎಲ್‌ಇ ಸಂಸ್ಥೆಗೆ ಜಮೀನನ್ನು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಸ್ಥಾಪಿಸುವ ಕುರಿತು ಉನ್ನತ ಸಮಿತಿಯವರೊಂದಿಗೆ ಚರ್ಚೆ ಮಾಡಿ ನೋಂದ ಮಾಡಿಕೊಡಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಿಲೇವಾರಿ ಮಾಡುವುದಕ್ಕೆ ನಿರ್ಬಂಧನೆ ಮಾಡಿ ಆದೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ರೀತಿ ಮೂಜಗಂ ಜೀವತವಿದ್ದಾಗಲೇ ಸುರೇಶ ಗದ್ದಗಿಮಠ ಅವರಿಗೆ 6.25 ಎಕರೆ ಖರೀದಿ ಕೊಡಲು ಒಪ್ಪಿ ಖರೀದಿ ಸಂಚಕಾರ ಪತ್ರ ಮಾಡಿಕೊಟ್ಟಿದ್ದರು. ಆದರೆ ನಾವು ಖರೀದಿಕೊಡಲು ಒಪ್ಪದೇ ಇದ್ದಾಗ ಕೋರ್ಟಿನಲ್ಲಿ ಗದ್ದಗಿಮಠ ಅವರು ದಾವೆ ಹೂಡಿ​ದ್ದ​ರು. ಉನ್ನತ ಸಮಿತಿಯು ಗದ್ದಗಿಮಠ ಅವರೊಂದಿಗೆ ರಾಜೀ ಸಂಧಾನ ಮಾಡಿಕೊಂಡು ಅವರಿಗೆ 3 ಎಕರೆ 16 ಗುಂಟೆಯನ್ನು ಕೊಡಲು ಒಪ್ಪಿಸಿ 3 ಎಕರೆ 10 ಗುಂಟೆಯನ್ನು ಶ್ರೀಮಠಕ್ಕೆ ಉಳಿಸಿಕೊಂಡಿತು.
ಇದೇ ರೀತಿ ಅದೇ ಸರ್ವೇ ನಂಬರಿನ 2 ಎಕರೆ ಜಮೀನನ್ನು ಆರ್‌.ಟಿ. ಮಜ್ಜಿಗೆ ಅವರಿಗೆ ಖರೀದಿಕೊಡಲು ಒಪ್ಪಿ ಸಂಚಕಾರ ಪತ್ರವನ್ನು ಲಿಂ. ಡಾ. ಮೂಜಗಂ ಅವರು ಬರೆದುಕೊಟ್ಟಿದ್ದರು. ತದನಂತರ ಈ ಜಮೀನನ್ನು ಮಲ್ಲಿಕಾರ್ಜುನ ಎನ್‌.ಎಚ್‌. ಅವರಿಗೆ ಮಾರಾಟ ಮಾಡಲಾಗಿದೆ. ಇದನ್ನು ಹೊರತುಪಡಿಸಿ ನಾವು ಸ್ವ ಇಚ್ಛೆಯಿಂದ ಯಾವುದೇ ಆಸ್ತಿಯನ್ನು ಮಾರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾವು ಶ್ರೀಮಠದ ಪೀಠಾಧಿಕಾರ ವಹಿಸಿಕೊಂಡ ನಂತರ ಉತ್ತರಾಧಿಕಾರಿ ಕುರಿತು ಆರ್ಬಿಟ್ರೇಟರ್‌ ಹತ್ತಿರ ರಾಜಿ ಆದ ಮೇಲೆ ಕೋಟ್ಯಾಂತರ ರೂಪಾಯಿಗಳನ್ನು ಮಠದ ಜೀರ್ಣೋದ್ಧಾರಕ್ಕಾಗಿ ಮತ್ತು ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕಾಗಿ ಕಟ್ಟಡ ನಿರ್ಮಾಣ, ನಿರಂತರ ದಾಸೋಹ ಹಾಗೂ ಧರ್ಮೋಪದೇಶಕ್ಕೆ ಖರ್ಚು ಮಾಡಲಾಗಿದೆ.

ಈ ಸಂದರ್ಭದಲ್ಲಿ ಬಾಡಿಗೆ ಮೂಲಕ ಶ್ರೀಮಠಕ್ಕೆ ಬರುತ್ತಿದ್ದ 1.97 ಲಕ್ಷ ರೂ. ಆದಾಯವನ್ನು ನಿರಂತರ ಪ್ರಯತ್ನದ ಫಲವಾಗಿ ಪ್ರತಿ ತಿಂಗಳು ಸುಮಾರು 9 ಲಕ್ಷದವರೆಗೆ ಬಾಡಿಗೆ ಉತ್ಪನ್ನ ಹೆಚ್ಚಿಸಲಾಗಿದೆ. ಮಠದ ಆಸ್ತಿ ಕುರಿತು ಬೇರೆ ಕೋರ್ಟ್‌ಗಳಲ್ಲಿ 170 ಪ್ರಕರಣ ದಾಖಲಾಗಿದ್ದವು. ಅದರಲ್ಲಿ ಬಹುತೇಕ ಪ್ರಕರಣಗಳು ಶ್ರೀಮಠದ ಪರವಾಗಿ ನಿರ್ಣಯವಾಗಿವೆ. ಉಳಿದ ಕೇಸುಗಳು ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
 

click me!