ಅಮಿತ್‌ ಶಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ: ಕೇಂದ್ರದ ಉತ್ತರಕ್ಕೆ ಕನ್ನಡಿಗರ ಆಕ್ರೋಶ

By Kannadaprabha NewsFirst Published Jan 30, 2021, 8:40 AM IST
Highlights

ಶಿವಮೊಗ್ಗ ಜಿಲ್ಲೆ ಭದ್ರಾವತಿ ಆರ್‌ಎಎಫ್‌ ಘಟಕ ಶಂಕುಸ್ಥಾಪನೆ ವೇಳೆ ಕನ್ನಡ ಕಡೆಗಣನೆಗೆ ಸ್ಪಷ್ಟನೆ|ಕೇಂದ್ರದ ಯಾವುದೇ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸುವ ಅಗತ್ಯವಿಲ್ಲ| ಕೇಂದ್ರ ಗೃಹ ಇಲಾಖೆಯ ಉತ್ತರಕ್ಕೆ ಕನ್ನಡಿಗರಿಂದ ಜಾಲತಾಣದಲ್ಲಿ ಆಕ್ರೋಶ| 

ನವದೆಹಲಿ(ಜ.30): ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೆರವೇರಿಸಿದ ನೂತನ ರ‍್ಯಾಪಿಡ್ ಆ್ಯಕ್ಷನ್‌ ಫೋರ್ಸ್‌ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡದ ಕಡೆಗಣನೆಗೆ ಭಾರೀ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ, ಕೇಂದ್ರದ ಯಾವುದೇ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರ ಅನುಸರಿಸುವ ಅಗತ್ಯವಿಲ್ಲ ಎಂದು ಕೇಂದ್ರದ ಗೃಹ ಇಲಾಖೆ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರ ನೀಡಿದೆ.

ಕರ್ನಾಟಕದ ಭದ್ರಾವತಿಯಲ್ಲಿ ರ‍್ಯಾಪಿಡ್ ಆ್ಯಕ್ಷನ್‌ ಫೋರ್ಸ್‌ ಘಟಕದ ಕಾರ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಏಕೆ ಅನುಸರಿಸಲಿಲ್ಲ ಎಂಬ ಬಗ್ಗೆ ತಿಳಿಸುವಂತೆ ಕರ್ನಾಟಕ ಮೂಲದ ಗೌತಮ್‌ ಗಣೇಶ್‌ ಎಂ.ಎಚ್‌ ಎಂಬುವರು ಆರ್‌ಟಿಐ ಅರ್ಜಿ ಮುಖೇನ ಕೋರಿದ್ದರು. ಇದಕ್ಕೆ ಶುಕ್ರವಾರ ಉತ್ತರಿಸಿರುವ ಕೇಂದ್ರ ಗೃಹ ಇಲಾಖೆ ಕೇಂದ್ರದ ಯಾವುದೇ ಕಾರ್ಯಕ್ರಮಗಳಲ್ಲಿ ತ್ರಿಭಾಷಾ ಸೂತ್ರ ಪಾಲಿಸಬೇಕಿಲ್ಲ. ಬದಲಾಗಿ ದ್ವಿಭಾಷಾ(ಹಿಂದಿ ಮತ್ತು ಇಂಗ್ಲಿಷ್‌) ಸೂತ್ರ ಅನುಸರಿಸಿದರೆ ಸಾಕು ಎಂದು ತಿಳಿಸಿದೆ.

‘ಹಿಂದಿ ಗುಲಾಮಗಿರಿ ಬೇಡ’ ಟ್ವಿಟರ್‌ ಅಭಿಯಾನ ಸದ್ದು: ಶಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ

ಕೇಂದ್ರದ ಈ ವಾದಕ್ಕೆ ಕನ್ನಡ ಪರ ಹೋರಾಟಗಾರರು ಮತ್ತು ಇತರ ವಲಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿವೆ. ಜನವರಿ 16ರಂದು ನಡೆದಿದ್ದ ಈ ಕಾರ್ಯಕ್ರಮದಲ್ಲಿ ಆರ್‌ಎಎಫ್‌ನ ಶಂಕುಸ್ಥಾಪನೆಯ ನಾಮಫಲಕದಲ್ಲಿ ಕನ್ನಡವೇ ಇರದಿದ್ದ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಹಲವು ಕನ್ನಡ ಸಂಘಟನೆಗಳು ಧ್ವನಿಯೆತ್ತಿದ್ದವು. ಅಲ್ಲದೆ ಈ ಬಗ್ಗೆ ಟ್ವೀಟ್‌ ಮಾಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌. ಡಿ ಕುಮಾರಸ್ವಾಮಿ ಅವರು, ಭದ್ರಾವತಿಯಲ್ಲಿ ನೆರವೇರಿದ ಶಂಕು ಸ್ಥಾಪನೆಯಲ್ಲಿ ಕನ್ನಡದ ಅವಗಣನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಕನ್ನಡ ಪರ ಹೋರಾಟಗಾರರು ಸಹ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದರು.
 

click me!