ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.6): ಪೊಲೀಸರು ವರ್ಸಸ್ ಶಾಸಕ ಎಂ ಪಿ ಕುಮಾರಸ್ವಾಮಿ ನಡುವಿನ ತಿಕ್ಕಾಟ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಕಾರ್ ಪಾರ್ಕಿಂಗ್ ವಿಚಾರವಾಗಿ ನಾಲಿಗೆ ಹರಿ ಬಿಟ್ಟಿದ್ದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಇದೀಗ ಇನ್ಸ್ಪೆಕ್ಟರ್ ಗೆ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಪೊಲೀಸರ ನಡುವೆ ನಡೆದ ಅನೇಕ ಘಟನೆಗಳು ಸಾಕಷ್ಟು ವಿವಾದವನ್ನು ಸೃಷ್ಠಿ ಮಾಡಿತ್ತು.ಇದೀಗ ಪೊಲೀಸ್ ಇನ್ಸ್ಪೆಕ್ಟರ್ ಗೆ ಪೋನ್ ನಲ್ಲಿ ಧಮ್ಮಿ ಹಾಕಿರುವ ಆಡಿಯೋ ಸಂಚಲನ ಮೂಡಿಸಿದೆ.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹಾಗೂ ಮಲ್ಲಂದೂರು ನೂತನ ಪಿಎಸ್ ಐ ಮಧ್ಯೆ ನಡೆದ ಸಂಭಾಷಣೆಯ ಆಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಕತಾಳೀಯ ಎನ್ನುವಂತೆ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನ ಹಿಂದೆ ಈ ಆಡಿಯೋ ಲೀಕ್ ಆಗಿರುವುದು ಮತ್ತಷ್ಟು ಮಹತ್ವವನ್ನು ಪಡೆದುಕೊಂಡಿದೆ. ಆಡಿಯೋದಲ್ಲಿ ಶಾಸಕ ಕುಮಾರಸ್ವಾಮಿ ಪೊಲೀಸ್ ಇನ್ಸ್ಪೆಕ್ಟರ್ ಗೆ ಧಮಕಿ ಹಾಕಿದ್ದಾರೆ. ಯಾರನ್ನು ಕೇಳಿ ಇಲ್ಲಿಗೆ ಬಂದಿದ್ದೀಯಾ ,ನಾನು ಮೂಡಿಗೆರೆ ಕ್ಷೇತ್ರದಲ್ಲೇ ನಾನೇ ಐ ಜಿ. ಎಂದು ಅವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
UDUPI FLOATING BRIDGE ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ, ದೇಶದಲ್ಲೇ ಎರಡನೆಯದು!
ಆಡಿಯೋದಲ್ಲಿ ಇರುವ ಸಂಪೂರ್ಣ ಸಂಭಾಷಣೆ ಈ ಕೆಳಗಿನಂತಿದೆ:
ಶಾಸಕ : ಹಲೋ... ಯಾರಪ್ಪಾ ಇದು ನಂಬರು...?
PSI : ಸರ್... ನಾನು ರವೀಶ್ ಮಾತಾಡೋದು ಸಾರ್...
ಶಾಸಕ : ಎಲ್ಲಿದ್ದೀಯಾ... ಈಗ ಎಲ್ಲಿದ್ದೀಯಾ...
PSI : ಸ್ಟೇಷನ್ ನಲ್ಲಿ ಇದೀನಿ ಸರ್...
ಶಾಸಕ : ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು...
PSI : ಐಜಿ ಸರ್ ಫೋನ್ ಮಾಡಿ ಹೇಳಿದ್ರು ಸರ್... ತಗೋಳಿ ಹೋಗಿ ಅಂತ...
ಶಾಸಕ : ವಾಪಸ್ ಹೋಗು... ಮರ್ಯಾದೆಯಿಂದ ವಾಪಸ್ ಹೋಗು... ಸ್ಟೇಷನ್ ನಲ್ಲಿ ಇರಬೇಡ...
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗಲೇ...
ಶಾಸಕ : ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ...
PSI : ಸರ್... ಹಾಗೇನಿಲ್ಲ ಸರ್... ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್...ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್...
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು...ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು...ನಿಮ್ಮದು ನಡೀಯಲ್ಲ...
ಶಾಸಕ : ಎಷ್ಟು ಲಂಚ ಕೊಟ್ಟಿದ್ದೀಯಾ... ಐಜಿಗೆ... ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ...
PSI : ಸರ್... ಅ ರೀತಿ ಏನಿಲ್ಲ ಸರ್... ನಾನೇನು ಕೊಟ್ಟಿಲ್ಲ ಸರ್...
ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು...
PSI : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್...
ಶಾಸಕ : ಯಾವನ್ ಐಜಿ... ಐಜಿ ಅಲ್ಲ... ಮೂಡಿಗೆರೆಗೆ ನಾನು...
PSI : ನಾಳೆ ಬಂದು ನಿಮ್ಮನ್ನ ಭೇಟಿ ಆಗುತ್ತೇನೆ ಸರ್...
ಶಾಸಕ : ಅವನಿಗೆ ಹೇಳು ಐಜಿಗೆ...
PSI : ಸರ್... ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್... ಒದ್ದು ಓಡಿಸುತ್ತೇನೆ ಬಂದ್ರೆ...
ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು... ಬಂದ ದಾರಿಯಲ್ಲೇ ಹೋಗು...
ಬೆಂಗಳೂರಿನಲ್ಲಿ ಏಕಕಾಲಕ್ಕೆ 50 ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಆರಂಭ
ಆಡಿಯೋ ವೈರಲ್ ಕುಮಾರಸ್ವಾಮಿ ಸ್ಪಷ್ಟನೆ: ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಪಿಎಸೈ ರವೀಶ್ ಆಡಿಯೋ ವೈರಲ್ ಹಿನ್ನೆಲೆ ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣವನ್ನು ಶಾಸಕ ಎಂ ಪಿ ಕುಮಾರಸ್ವಾಮಿ ನೀಡಿದ್ದಾರೆ. ನನ್ನ ವಿರೋಧಿಗಳು ಮಾಡಿರೋ ಕುತಂತ್ರವಾಗಿದ್ದು ಹೆಚ್ಚು ಕೂಲಿ ಕಾರ್ಮಿಕರಿದ್ದು ನೀವು ಮಂಡ್ಯದವ್ರಾಗಿರೋದ್ರಿಂದ ಜನ್ರನ್ನು ಸಂಭಾಳಿಸೋದು ಕಷ್ಟ ಎಂದು ತಿಳಿ ಹೇಳಿದ್ದೇ ನನ್ನ ಗಮನಕ್ಕೆ ಬಾರದೇ ನನ್ನ ಕ್ಷೇತ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.
ನನ್ನ ಕ್ಷೇತ್ರದ ಕಾರ್ಯಕರ್ತರು ಮತದಾರರು ಒತ್ತಡ ಹಾಕಿರುವುದರಿಂದ ನಾನೇ ಮಾತನಾಡಬೇಕಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಇದೀಗ ಒಕ್ಕಲಿಗ ವಿರೋಧಿ ಎಂದು ಹೆಣೆಯುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು ನನ್ನ ವಿರೋಧಿಗಳು ಹೆಣೆದಿರುವ ಕುತಂತ್ರವನ್ನು ದಯವಿಟ್ಟು ಯಾರು ನಂಬಬಾರದು ಎಂದು MP kumaraswamy ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿರೋ ಶಾಸಕ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಒಟ್ಟಾರೆ ಇನ್ಸ್ಪೆಕ್ಟರ್‌ಗೆ ಧಮ್ಕಿ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ . ಶಾಸಕ ಕುಮಾರಸ್ವಾಮಿ ಪರ ವಿರೋಧದ ಚರ್ಚೆಗಳು ಕೂಡ ಕ್ಷೇತ್ರದಲ್ಲಿ ನಡೆಯುತ್ತಿದೆ.ಈ ಆಡಿಯೋ ಪ್ರಕರಣ ಕ್ಷೇತ್ರದಲ್ಲಿ ಯಾವ ರೀತಿ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವುದು ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕುಮಾರಸ್ವಾಮಿ ವಿರುದ್ದ ಪ್ರತಿಪಕ್ಷಗಳ ಟೀಕೆ: ಅಂದಹಾಗೆ ಪಿಎಸ್ಐ ರವೀಶ್, ಮೊನ್ನೆ ಸೋಮವಾರ ತಾನೇ ಮಲ್ಲಂದೂರು ಠಾಣೆಯಲ್ಲಿ ಚಾರ್ಜ್ ತೆಗೆದುಕೊಂಡು ಕೆಲಸಕ್ಕೆ ಹಾಜರಾಗಿದ್ದರು. ಆದರೆ ಇದು ಶಾಸಕ ಕುಮಾರಸ್ವಾಮಿಗೆ ಸುತಾರಂ ಇಷ್ಟವಿರಲಿಲ್ಲ. ಯಾವಾಗ ಚಾರ್ಜ್ ತೆಗೆದುಕೊಂಡಿದ್ದಾರೆ ಅನ್ನೋದು ತಿಳಿಯಿತೋ ಆಗ, ಕೆರಳಿ ಕೆಂಡವಾದ ಶಾಸಕ ಕುಮಾರಸ್ವಾಮಿ, ಪಿಎಸ್ಐಗೆ ಕರೆ ಮಾಡಿ ಹೀನಾಮಾನ ಬೈದಿದ್ದಾರೆ. ಪೊಲೀಸ್ ಅಧಿಕಾರಿ ಅನ್ನೋ ಕನಿಷ್ಠ ಗೌರವವೂ ಇಲ್ಲದೇ, ಪೊಲೀಸ್ ಅಧಿಕಾರಿ ಜೊತೆಗೆ ಐಜಿ ವಿರುದ್ದವೂ ಅಸಮಾಧಾನ ಹೊರಹಾಕಿದ್ದಾರೆ. ಯಾವನೋ ಐಜಿ, ಮೂಡಿಗೆರೆಗೆ ನಾನೇ ಎಲ್ಲಾ ಅಂತಾ ಮಾತುಗಳನ್ನಾಡಿದ್ದಾರೆ..ಶಾಸಕರ ನಡೆಗೆ ಪ್ರತಿಪಕ್ಷಗಳು ಟೀಕಿಸಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಯನ ಮೋಟಮ್ಮ ಟೀಕಿಸಿದ್ದಾರೆ.