ನಮ್ಮ ಬದುಕು ಮೂರಾಬಟ್ಟೆ ಆಗುತ್ತಿದ್ದರೂ ಕ್ಯಾರೆ ಎನ್ನದ ಅಧಿಕಾರಿಗಳು!

By Web Desk  |  First Published Sep 23, 2019, 9:31 AM IST

ಶಾಶ್ವತ ಸೂರಿನ ಹಗಲುಗನಸಿನಲ್ಲಿ ಸಂತ್ರಸ್ತರು| ಬೈಪಾಸ್‌ ರಸ್ತೆ ಅಗಲೀಕರಣದ ವೇಳೆ ತೆರೆವುಗೊಳಿಸಿ ತಗ್ಗು ಪ್ರದೇಶದಲ್ಲಿ ಶೆಡ್‌ ನಿರ್ಮಿಸಿಕೊಟ್ಟಿದ್ದರಿಂದ ಬದುಕು ಮೂರಾಬಟ್ಟೆ| ಇಲ್ಲಿ ಇದ್ದರೆ ಪದೇ ಪದೆ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ| ತಮಗೆ ಶಾಶ್ವತ ಸೂರು ನೀಡುವಂತೆ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ| 


ಮುಧೋಳ:(ಸೆ.23) ಪ್ರವಾಹ ಬಂದಾಗೊಮ್ಮೆ ಬದುಕು ಮೂರಾಬಟ್ಟೆ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಶಾಶ್ವತ ಸೂರು ಕಲ್ಪಿಸಲು ಮುಂದಾಗುತ್ತಿಲ್ಲ. ಹೀಗಾಗಿ ಇಲ್ಲಿಯ ಜನರ ಆಕ್ರೋಶದ ಕಟ್ಟೆ ಒಡೆದಿದೆ.

ಮುಧೋಳ ನಗರದ ಪಕ್ಕದಲ್ಲಿ ಹರಿದಿರುವ ಘಟಪ್ರಭಾ ನದಿ ಪ್ರವಾಹದಿಂದ ಕುಂಬಾರ ಗಲ್ಲಿ ಮತ್ತು ಕಾಂಬಳೆ ಗಲ್ಲಿ ಸೇರಿದಂತೆ ಇತರೆ ಪ್ರದೇಶದಲ್ಲಿ ನೀರು ಹೊಕ್ಕು ಸಾಕಷ್ಟು ಮನೆಗಳು ಜಲಾವೃತಗೊಂಡಿವೆ. ಪದೇ ಪದೆ ನದಿಗೆ ಪ್ರವಾಹ ಬರುವುದರಿಂದ ಇಲ್ಲಿ ವಾಸಿಸುವ ಜನರು ನಿರಾಶ್ರಿತರಾಗಿದ್ದಾರೆ. ತಮಗೊಂದು ಶಾಶ್ವತ ಸೂರು ಕೊಡುವಂತೆ ನಗರಸಭೆಯವರನ್ನು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಬೀದಿಯಲ್ಲಿಯೇ ವಾಸಿಸುವುದು ಅನಿವಾರ್ಯವಾಗಿದೆ.

Tap to resize

Latest Videos

ಗಡದನ್ನವರ ಸರ್ಕಲ್‌ದಿಂದ ಬಂಡಿವಡ್ಡರ ಪೆಟ್ರೋಲ್‌ ಬಂಕ್‌ವರೆಗೆ ಬೈಪಾಸ್‌ ರಸ್ತೆ ಅಗಲೀಕರಣ ಮಾಡುವುದಾಗಿ ತಿಳಿಸಿ ಈ ಮಾರ್ಗದಲ್ಲಿರುವ ನಗರಸಭೆಯ ಜಾಗಯಲ್ಲಿ ಅತಿಕ್ರಮಣ ಮಾಡಿರುವ ಮನೆಗಳನ್ನು ನಗರಸಭೆಯವರು ತೆರವುಗೊಳಿಸಿದರು. ಈ ರಸ್ತೆ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸವಾಗಿದ್ದ ಕುಟುಂಬಗಳಿಗೆ ತಾತ್ಕಾಲಿಕವಾಗಿ ಕುಂಬಾರ ಗಲ್ಲಿಯ ತಗ್ಗು ಪ್ರದೇಶದಲ್ಲಿ ಜಾಗ ನೀಡಲಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ನಗರಸಭೆ ನೀಡಿರುವ ತಗ್ಗು ಪ್ರದೇಶದಲ್ಲಿ ನಿರಾಶ್ರಿತರು ಪತ್ರಾಸ್‌ ಶೆಡ್‌ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ಕೆಲವೇ ತಿಂಗಳುಗಳಲ್ಲಿ ನದಿಗೆ ಪ್ರವಾಹ ಬಂದು ಪತ್ರಾಸ್‌ ಶೆಡ್‌ಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಮತ್ತೇ ನಿರಾಶ್ರಿತರಾಗಿದ್ದಾರೆ. ಇಲ್ಲಿ ಇದ್ದರೆ ಪದೇ ಪದೆ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹಾಗಾಗಿ ತಮಗೆ ಶಾಶ್ವತ ಸೂರು ನೀಡುವಂತೆ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಇಂತಹ ಅನುಭವದಿಂದ ತಮಗೆ ಮುಕ್ತಿ ಇಲ್ಲವೇ 


ಪ್ರವಾಹ ಬಂದಾಗ ಮನೆಯಲ್ಲಿದ್ದ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಬೇಕಾದ ಪ್ರಸಂಗಗಳು ತಮಗೇನು ಹೊಸದಲ್ಲ. ಇಂತಹ ಅನುಭವದಿಂದ ತಮಗೆ ಮುಕ್ತಿ ಇಲ್ಲವೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ. ಚುನಾವಣೆ ಬಂದಾಗ ಶೆಡ್‌ಗಳಲ್ಲಿ ವಾಸಿಸುವ ಮತದಾರರನ್ನು ಭೇಟಿಮಾಡಿ ಮತಯಾಚಿಸುತ್ತಾರೆ. 


ಮತ ಕೇಳಲು ಬಂದಾಗ ತಮ್ಮ ಬೇಡಿಕೆಗಳ ಅಹವಾಲುಗಳನ್ನು ಸ್ವೀಕರಿಸಿ, ನಮ್ಮನ್ನು ಚುನಾಯಿತಗೊಳಿಸಿ ನಿಮಗೆಲ್ಲರಿಗೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ನಮ್ಮನ್ನು ನಂಬಿಸಿ ಮತ ಪಡೆದು ಅಧಿಕಾರಕ್ಕೆ ಬರುತ್ತಾರೆ. ಅಧಿಕಾರ ಬಂದ ಕೆಲವೇ ಕ್ಷಣದಲ್ಲಿ ನಮಗೆ ನೀಡಿದ ಭರವಸೆಗಳು ಮರೆತು ಹೋಗುತ್ತವೆ. ನಮ್ಮ ಮತಗಳಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಏಕೆ ಆಗುತ್ತಿಲ್ಲ. 


ಇದಕ್ಕೆ ಉತ್ತರಿಸುವವರು ಯಾರು ಎಂಬುದು ತಿಳಿಯುತ್ತಿಲ್ಲ. ನಮ್ಮ ದೈವ ಸುಮಾರಿದೆ ಯಾರೂ ಏನೂ ಮಾಡಲು ಸಾಧ್ಯವಿಲ್ಲವೆಂದು ಹೊತ್ತು ಕಳೆಯುತ್ತಿದ್ದೇವೆ ಎಂಬ ನಿರಾಸೆಯ ಮಾತು ಕೇಳುಗರ ಕರಳು ಚೂರ್‌ ಎನ್ನುತ್ತಿದೆ. ಶಾಶ್ವತ ಸೂರಿಗಾಗಿ ಹಗಲು ಕನಸು ಕಾಣುತ್ತಿರುವ ಇಲ್ಲಿನ ನಿರಾಶ್ರಿತರಿಗೆ ನಗರಸಭೆಯವರು ಕಣ್ಣು ತೆರೆದು ನೋಡುವರೇ ಕಾದು ನೋಡಬೇಕಾಗಿದೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಷ್ಟೇ.


ಈ ಬಗ್ಗೆ ಮಾತನಾಡಿದ ಇಲ್ಲಿನ ನಿವಾಸಿ ಮಲ್ಲವ್ವ ಕುಂಬಾರ ಅವರು, ಪತ್ರಾಸ್‌ ಶೆಡ್‌ ಹಾಕಿಕೊಂಡು ವಾಸಿಸಲು ನಮಗೆ ಜಾಗ ನೀಡಿರುವ ನಗರಸಭೆಯವರ ಉಪಕಾರ ನಾವಿಂದೂ ಮರೆಯುವುದಿಲ್ಲ. ಆದರೆ ನಮಗೆ ಶಾಶ್ವತ ಸೂರು ಯಾವಾಗ ನೀಡುತ್ತಾರೆ ಎಂಬ ಕನಸು ಕಾಣುತ್ತಿದ್ದೇವೆ ಎಂದು ಹೇಳಿದರು. 

ಈ ಬಗ್ಗೆ ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಆರ್‌.ಪಿ.ಜಾಧವ ಅವರು, ಕಾಂಬಳೆ ಮತ್ತು ಕುಂಬಾರ ಗಲ್ಲಿಯ ಕೆಲವು ನಿವಾಸಿಗಳಿಗೆ ಈಗಾಗಲೇ ಆಶ್ರಯ ಮನೆಗಳನ್ನು ನೀಡಲಾಗಿದೆ. ಆದರೆ ಇಲ್ಲಿನ ನಿವಾಸಿಗಳು ಆಶ್ರಯ ಮನೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರಿಗೆ ಇನ್ನೂ ಆಶ್ರಯ ಮನೆಗಳನ್ನು ನೀಡಿಲ್ಲ. ಅಂತಹವರಿಗೆ ಕೂಡಲೇ ಆಶ್ರಯ ಮನೆಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದರು. 

click me!