ಪ್ರಿನ್ಸೆಸ್ ರಸ್ತೆ ಹೆಸರು ಬದಲಾವಣೆ ಕೈ ಬಿಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಸಲಹೆ ನೀಡಲಾಗಿದೆ. ಇದಕ್ಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು(ಜ.03): ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಅವರನ್ನು ಗುರುವಾರ ಸಂಜೆ ಭೇಟಿಯಾಗಿ ಪ್ರಿನ್ಸೆಸ್ ರಸ್ತೆ ಕುರಿತು ಹಲವು ದಾಖಲೆ ಸಲ್ಲಿಸಿದ್ದಾರೆ.
ಪ್ರಿನ್ಸೆಸ್ ರಸ್ತೆ ಎಂಬುದಕ್ಕೆ ದಾಖಲೆಗಳಿಲ್ಲ ಎಂದಿದ್ದ ಆಯುಕ್ತರಿಗೆ ಹಲವು ದಾಖಲೆ ಸಲ್ಲಿಸಿ ಮಾತನಾಡಿದ ಅವರು, ಪ್ರಿನ್ಸೆಸ್ ರಸ್ತೆ ಹೆಸರು ಬದಲಾವಣೆ ಕೈ ಬಿಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಸಲಹೆ ನೀಡಲಾಗಿದೆ. ಇದಕ್ಕೆ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಹೊರಟಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಪ್ರಿನ್ಸೆಸ್ ರಸ್ತೆಗೆ ಯಾವುದೇ ದಾಖಲೆ ಇಲ್ಲ ಎಂದಿದ್ದರು. ಅದಕ್ಕೆ ಪೂರಕವಾದ ದಾಖಲೆ ಸಂಗ್ರಹ ಮಾಡಿದ್ದೆವು. ಎಲ್ಲಾ ದಾಖಲೆಗಳನ್ನು ನಗರ ಪಾಲಿಕೆ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ್ದೇವೆ ಎಂದರು.
ಇದು ರಾಜಕೀಯ ಉದ್ದೇಶದಿಂದ ಕೂಡಿದೆ. ಸಿದ್ದರಾಮಯ್ಯ ಅವರು ಮುಡಾ ಹಗರಣದ ಎ1 ಆರೋಪಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೇ ರಸ್ತೆಗೂ ಅವರ ಹೆಸರು ಇಡಬಾರದು. ಕಳಂಕಿತ ಸ್ಥಾನದಲ್ಲಿರುವವರ ಹೆಸರು ಇಡುವ ಬಗ್ಗೆ ಕಾಂಗ್ರೆಸ್ ನವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಪ್ರಸ್ತುತ ನಗರ ಪಾಲಿಕೆಯಲ್ಲಿ ಪಾಲಿಕೆ ಸದಸ್ಯರು ಇಲ್ಲ, ಚುನಾವಣೆ ನಡೆದಿಲ್ಲ. ಈ ವೇಳೆ ಕೌನ್ಸಿಲ್ ನಿರ್ಣಯವಿಲ್ಲದೆ ಮಹತ್ವದ ನಿರ್ಧಾರ ಕೈಗೊಳ್ಳಬಾರದು. ನಗರ ಪಾಲಿಕೆ ಸದಸ್ಯರಿಲ್ಲದಿರುವಾಗ ರಸ್ತೆಯ ನಾಮಕರಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.
ಈ ವೇಳೆ ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯ ಸಾತ್ವಿಕ್, ಮಾಧ್ಯಮ ಸಂಚಾಲಕ ಮಹೇಶ್ರಾಜೇ ಅರಸ್ ಮೊದಲಾದವರು ಇದ್ದರು.
ಮೈಸೂರು: ಪ್ರಿನ್ಸೆಸ್ ರಸ್ತೆಗೆ ಹಲವು ದಾಖಲೆ ಲಭ್ಯ
ಕೆ.ಆರ್.ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಎಂಬುದಕ್ಕೆ ಹಲವು ದಾಖಲೆಗಳು ಲಭ್ಯವಾಗಿರುವಾಗಲೇ ನಿನ್ನೆಯಷ್ಟೇ ಕೆಲ ಸಂಘಟನೆಗಳು ಅಂಟಿಸಿದ್ದ ಸ್ಟಿಕ್ಕರ್ ಗಳನ್ನು ಯಾರೋ ತೆರವುಗೊಳಿಸಿರುವುದು ಅಧಿಕಾರಿ ವಲಯದಲ್ಲಿ ಅನುಮಾನ ಮೂಡಿಸಿದೆ. ಆ ರಸ್ತೆಯಲ್ಲಿನ ನಿವಾಸಿಯೊಬ್ಬರ ಮನೆಯ ಗೇಟ್ ಮುಂದೆ ಪ್ರಿನ್ಸೆಸ್ ರಸ್ತೆ ಎಂಬ ಫಲಕವಿದೆ. ಯಾದವಗಿರಿ ರೈಲ್ವೆ ಬಡಾವಣೆ ಬಳಿ ಮನೆಯೊಂದರಲ್ಲಿ ಈ ಫಲಕ ಹಾಕಲಾಗಿದ್ದು, ಫಲಕದಲ್ಲಿ ಮನೆಯ ಮಾಲೀಕರ ಹೆಸರು, ಡೋರ್ ನಂಬರ್ ಹಾಗೂ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದೆ. ವಿವಾದಕ್ಕೂ ಮುಂಚಿನಿಂದಲೂ ಈ ಬೋರ್ಡ್ ಇದೆ. 1980 ರಿಂದ ಸುಬೋದ್ ಕುಮಾರ್ ಹಾಗೂ ನಿತಾ ಗುಪ್ತ ಕುಟುಂಬಸ್ಥರು ಈ ಮನೆಯಲ್ಲಿ ವಾಸವಿದ್ದಾರೆ. ಅವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲದರಲ್ಲೂ ಪ್ರಿನ್ಸೆಸ್ ರಸ್ತೆ ಎಂದು ನಮೂದಿಸಲಾಗಿದೆ.
ಮನೆ ನಿವಾಸಿ ನೇಹಾ ಗುಪ್ತಾ ಮಾತನಾಡಿ, ಸುಮಾರು 45 ವರ್ಷದಿಂದ ಇಲ್ಲೇ ವಾಸ ಮಾಡುತ್ತಿದ್ದೇವೆ. ನಮ್ಮ ಎಲ್ಲಾ ದಾಖಲೆಗಳಲ್ಲಿ ಪ್ರಿನ್ಸೆಸ್ ರಸ್ತೆ ಎಂದು ಇದೆ. ಆಗ ಯಾವುದೆ ಪೋನ್, ಮೊಬೈಲ್ ಇರಲಿಲ್ಲ. ನಮ್ಮ ಸಂಪರ್ಕವು ಪತ್ರಗಳಲ್ಲಿ ಮಾತ್ರ ಇತ್ತು. ಅದರಲ್ಲಿ ಎಲ್ಲಾ ಕಡೆ ಪ್ರಿನ್ಸೆಸ್ ರಸ್ತೆ ಅಂತಲೇ ಇರೋದು ಎಂದಿದ್ದಾರೆ.
ಸಿದ್ದರಾಮಯ್ಯ ಹೆಸರು ಇಡುವ ವಿಚಾರ ನನ್ನ ಗಮನಕ್ಕೆ ಬಂದಿದೆ. ದೇಶದಲ್ಲಿ ಹಲವು ಕಡೆಗಳಲ್ಲಿ ಬ್ರಿಟೀಷರು ಇಟ್ಟು ಹೆಸರು ತೆಗೆದು ನಮ್ಮವರ ಹೆಸರು ಇಟ್ಟಿದ್ದಾರೆ. ಆದರೆ ಇಲ್ಲಿ ಪ್ರಿನ್ಸೆಸ್ ರಸ್ತೆ ಹೆಸರು ಇಟ್ಟಿರೋದು ನಮ್ಮವರೇ. ಐತಿಹಾಸಿಕವಾದ ಹೆಸರನ್ನು ತೆರವು ಮಾಡಿ ಸಿದ್ದರಾಮಯ್ಯ ಹೆಸರು ಇಡಲು ಮುಂದಾಗಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ನಿಜ. ಆದರೆ ಮೈಸೂರಿನಲ್ಲಿ ಇನ್ನೂ ಸಾಕಷ್ಟು ರಸ್ತೆಗಳಿವೆ. ಆ ರಸ್ತೆಗಳಿಗೆ ಸಿದ್ದರಾಮಯ್ಯ ಹೆಸರು ಇಡಿ. ಐತಿಹಾಸಿಕವಾದ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡೋದು ಬೇಡ ಎಂದು ಅವರು ಸಲಹೆ ನೀಡಿದರು.
ವೆಬ್ ಸೈಟಲೂ ಲಭ್ಯ
ಮೈಸೂರು ಜಿಲ್ಲಾಡಳಿತ ವೆಬ್ ಸೈಟ್ ನಲ್ಲೇ ಪ್ರಿನ್ಸೆಸ್ ರಸ್ತೆ ಹೆಸರು ಇದೆ. ವೆಬ್ ಸೈಟ್ ನಲ್ಲಿರುವ ಪ್ರವಾಸಿತಾಣಗಳ ಮಾಹಿತಿಯ ಪಟ್ಟಿಯಲ್ಲಿ ಮೈಸೂರು ರೈಲ್ವೆ ಮ್ಯೂಸಿಯಂ ಇರುವ ಸ್ಥಳ ಪ್ರೆನ್ಸೆಸ್ ರಸ್ತೆ ಎಂದು ನಮೂದಾಗಿದೆ. ಸದ್ಯ ಮೈಸೂರಿನ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ನಲ್ಲೆ ಹೆಸರು ಲಭ್ಯವಿದೆ. ಈ ನಡುವೆ ನಗರ ಪಾಲಿಕೆ ನಡೆ ಕುತೂಹಲಕ್ಕೆ ಕಾರಣವಾಗಿದೆ.
ನಕ್ಷೆಯೂ ಇದೆ
ಈ ರಸ್ತೆಗೆ ಪ್ರಿನ್ಸೆಸ್ ಹೆಸರಿತ್ತು ಎಂಬುದಕ್ಕೆ ಮತ್ತೊಂದು ಮಹತ್ವದ ದಾಖಲೆ ಲಭ್ಯವಾಗಿದೆ. 1921ರಲ್ಲಿ ಪ್ರಿನ್ಸೆಸ್ ರಸ್ತೆ ಎಂದು ನಮೂದಾಗಿರುವ ಅಂದಿನ ಸಿಐಟಿಬಿಯ ನಕ್ಷೆ ಲಭ್ಯವಾಗಿದೆ. ಇದಕ್ಕೆ ಸಿಐಟಿಬಿ ಅಧ್ಯಕ್ಷರ ಸಹಿಯೂ ಇದೆ. ವಿವಾದ ದೊಡ್ಡದಾದಂತೆ, ಜಟಾಪಟಿ ಹೆಚ್ಚಾದಂತೆ ದಾಖಲೆಗಳೂ ಲಭ್ಯವಾಗುತ್ತಿದೆ.
ಯದುವೀರ್ ಸೇರಿ ಹಲವರಿಂದ ಆಕ್ಷೇಪ
ಮೈಸೂರು ಮಹಾನಗರ ಪಾಲಿಕೆಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ನೇತೃತ್ವದ ನಿಯೋಗ ಭೇಟಿಯಾಗಿ ಸಿದ್ದರಾಮಯ್ಯ ಹೆಸರು ಇಡುವ ಸಂಬಂಧ ಅಧಿಕಾರಿಗಳೊಡನೆ ಚರ್ಚಿಸಿದ್ದಾರೆ. ಪ್ರಿನ್ಸೆಸ್ ರಸ್ತೆ ಅಂತ ದಾಖಲೆಗಳಿವೆ. ಆದ್ದರಿಂದ ಆ ರಸ್ತೆಗೆ ಅದೇ ಹೆಸರು ಉಳಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಆರೋಗ್ಯ ರಸ್ತೆ ಬೇಡ ಎಂದು ಮನವಿ ಮಾಡಿದರು. ರಸ್ತೆಗೆ ಸಿಎಂ ಹೆಸರು ನಾಮಕರಣ ಮಾಡಿದರೆ ಹೋರಾಟ ನಿಶ್ಚಿತ ಎಂದು ಹೋರಾಟಗಾರ ಸ್ನೇಮಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರೆ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ರಸ್ತೆಗೆ ಸಿಎಂ ಹೆಸರು ಇಡಬಾರದು. ಆ ರಸ್ತೆಗೆ ಪ್ರಿನ್ಸೆಸ್ ಎಂಬ ಹೆಸರಿದೆ. ಆ ಹೆಸರನ್ನು ಹಾಗೆಯೇ ಉಳಿಸಬೇಕು. ನಾವು ಸಿದ್ದರಾಮಯ್ಯ ಹೆಸರು ಇಡುವುದು ಬೇಡ ಅನ್ನುತ್ತಿಲ್ಲ. ಆದರೆ ಈ ರಸ್ತೆಗೆ ಬೇಡ. ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಟ್ಟುಕೊಳ್ಳಿ. ಇತಿಹಾಸ ಪ್ರಸಿದ್ಧ ರಸ್ತೆಗೆ ಬೇಡ ಎಂದರು.
ಅಲ್ಲದೆ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್, ಭಾನು ಮೋಹನ್, ಅರವಿಂದ್ ಶರ್ಮಾ ಸೇರಿ ಹಲವರು ಭೇಟಿಯಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ನಂಜರಾಜ ಅರಸ್, ಪ್ರಿನ್ಸೆಸ್ ರಸ್ತೆ ಕುರಿತು ದಾಖಲೆ ನೀಡಿದ್ದೇವೆ. ಅಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬಾರದು. ಹಿಂದಿನಿಂದಲೂ ಅದು ಪ್ರಿನ್ಸೆಸ್ ರಸ್ತೆ ಎಂದಿದೆ. ಇದಕ್ಕೆ ಬೇಕಾದ ದಾಖಲೆಗಳಿವೆ. ಈ ವಿಷಯವನ್ನು ಆಯುಕ್ತರ ಗಮನಕ್ಕೆ ತಂದಿದ್ದೇವೆ. ಸಚಿವ ಎಚ್.ಸಿ. ಮಹದೇವಪ್ಪ ಜೊತೆಯೂ ಮಾತನಾಡಿದ್ದೇನೆ ಎಂದರು.
ಯಾರೋ ಸಿದ್ದರಾಮಯ್ಯ ಹೆಸರನ್ನು ಅವರ ಅಭಿಮಾನಿಗಳು ಎಂದು ಹಾಳು ಮಾಡುವುದು ಬೇಡ. ಖುದ್ದು ಸಿಎಂ ಜೊತೆಯೇ ಈ ರಸ್ತೆ ಬಗ್ಗೆ ಮಾತನಾಡುತ್ತೇನೆ. ನಗರ ಪಾಲಿಕೆಯಿಂದ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿದೆ. ಅವಧಿ ಮುಗಿದ ಬಳಿಕ ಸಭೆ ಮಾಡುತ್ತೇವೆ ಅಂದಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನನ್ನ ಹೆಸರು ಆ ರಸ್ತೆಗೆ ಬೇಡ ಎನ್ನುತ್ತಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ನಾನೇ ಖುದ್ದು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.
ಅವರ ಹೆಸರನ್ನು ಕೆಲ ದನಗಳು ಬೀದಿಗೆ ತಂದಿದ್ದಾರೆ. ಹಾದಿ ಬೀದಿಯಲ್ಲಿ ಅವರ ಹೆಸರು ಹಾಳು ಮಾಡುತ್ತಿದ್ದಾರೆ. ಅವರು ಬೇಡ ಅನ್ನುವ ವಿಶ್ವಾಸ ಇದೆ, ಇಲ್ಲದಿದ್ದರೆ ಕೋರ್ಟ್ ಇದ್ದೆ ಇದೆ ಅಲ್ಲೇ ತೀರ್ಮಾನ ಆಗಲಿ ಎಂದು ಅವರು ಹೇಳಿದರು.
ಸ್ಟಿಕ್ಕರ್ ತೆರವು
ನಗರದ ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಅದು ಪ್ರಿನ್ಸೆಸ್ ರಸ್ತೆ ಎಂದು ಬುಧವಾರ ಕೆಲವು ಸಂಘಟನೆಗಳ ಪದಾಧಿಕಾರಿಗಳು ಸ್ಟಿಕ್ಕರ್ ಅಂಟಿಸಿದ್ದರು. ಆದರೆ ರಾತ್ರೋ ರಾತ್ರಿ ಪ್ರಿನ್ಸೆಸ್ ಸ್ಟೀಕರ್ ತೆರವುಗೊಳಿಸಿದ್ದಾರೆ.
ಕರ್ನಾಟಕ ರಾಷ್ಟ್ರಸೇನೆ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಪ್ರಿನ್ಸೆಸ್ ರಸ್ತೆ ಎಂದು ಸ್ಟೀಕರ್ ಅಳವಡಿಕೆ ಮಾಡಿದ್ದರು. ಚೆಲುವಾಂಬ ಉದ್ಯಾನವನವದ ವಿವೇಕಾನಂದ ಪ್ರತಿಮೆ ಬಳಿ ಹಾಗು ವಿವಿಧೆಡೆ ನಾಮಫಲಕ ಅಳವಡಿಸಲಾಗಿತ್ತು.
ಈ ಹೆಸರನ್ನು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಟ್ಟಿದ್ದರು ಎಂಬ ಸ್ಟಿಕ್ಕರ್ ಇತ್ತು. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೃಷ್ಣಾಜಮ್ಮಣ್ಣಿ ಭಾವಚಿತ್ರವೂ ಇತ್ತು. ರಾತ್ರೋ ರಾತ್ರಿ ಸ್ಟೀಕರ್ ತೆರವು ಮಾಡಿದ್ದು ಯಾರು? ಎಂಬ ಪ್ರಶ್ನೆ ಕಾಡುತ್ತಿದೆ.
ಈ ಫಲಕವನ್ನು ಅಧಿಕಾರಿಗಳು ತೆಗೆಸಿದ್ರಾ? ಪೊಲೀಸರು ತೆಗೆಸಿದ್ರಾ? ಎಂಬ ಪ್ರಶ್ನೆ ಕಾಡುತ್ತಿದ್ದು, ಸ್ಥಳದಲ್ಲಿ ಸ್ಟೀಕರ್ ಇತ್ತು ಎಂಬುದ್ಕೆ ಯಾವುದೇ ಕುರುಹು ಬಿಟ್ಟಿಲ್ಲ. ನಿನ್ನೆ ಪೂಜೆ ಮಾಡಿದ್ದ ಹೂ ಹಾಗೂ ಅರಿಶಿಣ ಕುಂಕುಮ ಮಾತ್ರ ಪತ್ತೆಯಾಗಿದೆ. ಸದ್ಯ ಕಾಂಗ್ರೆಸ್ ಮುಖಂಡರು ಹಾಗೂ ಕೆಲವರು ಪ್ರಿನ್ಸಸ್ ರಸ್ತೆ ಎಂಬ ಹೆಸರಿಲ್ಲ ಎಂದು ವಾದಿಸಿದ್ದಾರೆ.