
ಕೊಡಗು: ಕಸ್ತೂರಿ ರಂಗನ್ ವರದಿಯನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಸಮಾಧಾನ ಹೊರ ಹಾಕಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತಂತೆ ಕರಡು ಅಧಿಸೂಚನೆ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿದರು. ರೈತ ಸಂಘ, ಕೊಡಗು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರಿಂದ ಅಹವಾಲು ಆಲಿಸಿದರು. ವಿವಿಧ ಸಂಘಟನೆಗಳು ಪ್ರಮುಖರು ಕಸ್ತೂರಿ ರಂಗನ್ ವರದಿ ಜಾರಿಗೆ ನಮ್ಮದೇನು ಯಾವುದೇ ಅಭ್ಯಂತರವಿಲ್ಲ. ಆದರೆ ನಮ್ಮ ಕೃಷಿ ಜಮೀನುಗಳಿಗಾಗಲಿ, ನಮ್ಮ ಕೃಷಿಗಾಗಲಿ ಅಥವಾ ನಮ್ಮ ಪಾರಂಪರಿಕ ಕೆಲಸಗಳಿಗೆ ಯಾವುದೇ ಅಡೆತಡೆಗಳು ಎದುರಾಗಬಾರದು ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭ ವಿವಿಧ ಏಳು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ನೀವೆಲ್ಲರೂ ಬಹಳ ಉತ್ತಮ ಮಾರ್ಗದರ್ಶನ ನೀಡಿದ್ದೀರಾ. ಅರಣ್ಯದ ಗಡಿಭಾಗದ ನಿವಾಸಿಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಈ ಸಭೆಯ ಮೂಲಕ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಕಸ್ತೂರಿ ರಂಗನ್ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ ಈ ವರದಿಯನ್ನು ಜೀವಂತವಾಗಿಡಲು ಕಾಲಕಾಲಕ್ಕೆ ಕರಡು ಅಧಿಸೂಚನೆಗಳು ಬರುತ್ತಿವೆ. ಈ ವೇದಿಕೆ ಮುಕ್ತ ಚರ್ಚೆಗಾಗಿ ರೂಪುಗೊಂಡಿದೆ. ಆದರೆ ರಾಜ್ಯ ಸರ್ಕಾರ ವರದಿಯನ್ನು ತಿರಸ್ಕರಿಸುತ್ತೇವೆ ಅಂತ ಅಷ್ಟೇ ಹೇಳುವುದು ಸರಿಯಲ್ಲ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ. ಅದಕ್ಕೆ ಬದಲಾಗಿ ವೈಜ್ಞಾನಿಕವಾಗಿ ಚರ್ಚಿಸಿ, ಜನರಿಗೆ ಅದರ ಬಗ್ಗೆ ಅರಿವು ಮೂಡಿಸಿ ಕೇಂದ್ರ ಸರ್ಕಾರಕ್ಕೆ ತನ್ನದೇ ಆದ ವರದಿಯನ್ನು ಕೊಡಬೇಕಾಗಿದೆ. ಇಲ್ಲದಿದ್ದರೆ ಇದು ಸುಮ್ಮನೇ ಜನರ ಕಣ್ಣೊರೆಸುವ ತಂತ್ರಗಾರಿಕೆ ಆಗಲಿದೆ ಎಂದಿದ್ದಾರೆ.
ಕೇರಳದಲ್ಲಿ ಪರಿಸರ ಸೂಕ್ಷ್ಮ ವಲಯವನ್ನು ಕಡಿಮೆ ಮಾಡಿ, ಬಫರ್ ಝೋನ್ ಅನ್ನು ಶೂನ್ಯಕ್ಕೆ ಇಳಿಸಲು ಕೇಂದ್ರಕ್ಕೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಲಾಗಿದೆ. ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಸರಿಯಲ್ಲ ಎಂದಿದ್ದಾರೆ. ಇದು 7ನೇ ಅಧಿಸೂಚನೆ, ಹೀಗೆಯೇ ಬಿಟ್ಟರೆ 9, 10ನೇ ಅಧಿಸೂಚನೆಗಳೂ ಬರಲಿವೆ. ಈಗ ಈ ಸಭೆಯಲ್ಲಿ ನೀವು ಮಂಡಿಸಿರುವ ಎಲ್ಲಾ ವಿಷಯಗಳು ಮಾಹಿತಿ ಪೂರ್ಣವಾಗಿವೆ. ಕಸ್ತೂರಿ ರಂಗನ್ ವರದಿಯ ಪ್ರಕ್ರಿಯೆಯು ಬಹಳ ವಿಸ್ತಾರವಾದದ್ದು. ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಾವು ಸತತವಾಗಿ ಕೆಲಸ ಮಾಡುತ್ತಿದ್ದೇವೆ.
ಆದರೆ ಕೆಲವು ರಾಜಕೀಯ ಪಕ್ಷಗಳು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿವೆ. ಅರಣ್ಯ ಇಲಾಖೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆನೆ-ಮಾನವ ಸಂಘರ್ಷದಂತಹ ಜ್ವಲಂತ ಸಮಸ್ಯೆಯಿರುವಾಗ, 2,000 ಕೋಟಿ ರೂಪಾಯಿ ಹಣ ಲಭ್ಯವಿದ್ದರೂ ರಾಜ್ಯ ಸರ್ಕಾರ ಅದನ್ನು ಸೂಕ್ತವಾಗಿ ವೆಚ್ಚ ಮಾಡುತ್ತಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡಿ ಕೇಂದ್ರದ ಮೇಲೆ ತಪ್ಪು ಹೊರಿಸುವುದನ್ನು ಬಿಡಬೇಕು' ಎಂದು ಹೇಳಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂಎಲ್ಸಿ ಸುಜಾಕುಶಾಲಪ್ಪ ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿ ತಮ್ಮ ಸಲಹೆ ಸೂಚನೆಗಳು ನೀಡಿದ್ದಾರೆ.
( ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್)