
ಬೆಂಗಳೂರು: ಬೆಂಗಳೂರಿನ ಹೊರವಲಯದ ಪ್ರಮುಖ ಕೈಗಾರಿಕಾ ಸಮೂಹವಾದ ಆನೇಕಲ್ ಹಾಗೂ ಹುಸ್ಕೂರು-ಸರ್ಜಾಪುರ ಸಂಪರ್ಕ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಬಗ್ಗೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಹಾಗೂ ಆನೇಕಲ್ ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ನಡುವೆ ವಾಕ್ಸಮರ ತೀವ್ರಗೊಂಡಿದೆ.
ಆನೇಕಲ್ ಪ್ರದೇಶದ ಹಾನಿಗೊಳಗಾದ ಮೂಲಸೌಕರ್ಯದ ಬಗ್ಗೆ ಎಕ್ಸ್‌ನಲ್ಲಿ ಧ್ವನಿ ಎತ್ತಿದ್ದಕ್ಕೆ ಶಾಸಕ ಶಿವಣ್ಣ ನೀಡಿದ ಹೇಳಿಕೆಗೆ ಕಿರಣ್ ಮಜುಂದಾರ್-ಶಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ನನ್ನನ್ನು ಕೇವಲ ಕೋಟ್ಯಾಧಿಪತಿ ಎಂದು ನಿಂದಿಸಬೇಡಿ. ನಾನು ಧ್ವನಿ ಇಲ್ಲದ ಮತ್ತು ಈ ದಿನನಿತ್ಯದ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಪರವಾಗಿ ಮಾತನಾಡುತ್ತಿದ್ದೇನೆ. ಹುಸ್ಕೂರು ಮತ್ತು ಸರ್ಜಾಪುರ ರಸ್ತೆಯ ನಡುವಿನ ಹಾದಿ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಮೂಲಸೌಕರ್ಯಗಳ ನಿರ್ಲಕ್ಷ್ಯದ ಬಗ್ಗೆ ಆನೇಕಲ್ ಶಾಸಕ ಶಿವಣ್ಣ ಅವರಿಗೆ ಸಾರ್ವಜನಿಕರು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಸಾರ್ವಜನಿಕರಿಗೆ ಪ್ರಯೋಜನವಾಗದ ಬೇರೆ ಕಾರ್ಯಗಳಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಕಿರಣ್ ಮಜುಂದಾರ್ ಆರೋಪಿಸಿದ್ದರು. ಪ್ರತಿದಿನ ಸಾವಿರಾರು ಬಿಎಂಟಿಸಿ ಬಸ್‌ಗಳು, ಶಾಲಾ ವಾಹನಗಳು ಹಾಗೂ ಕಾರುಗಳು ಸಂಚರಿಸುವ ಈ ರಸ್ತೆಗಳು ಮಾರಕ ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.
ಕಿರಣ್ ಮಜುಂದಾರ್ ಅವರ ಟೀಕೆಗೆ ತಿರುಗೇಟು ನೀಡಿದ್ದ ಶಾಸಕ ಬಿ. ಶಿವಣ್ಣ, ಅವರು ಸಾವಿರಾರು ಕೋಟಿ ಗಳಿಸುತ್ತಾರೆ. ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಮೂಲಸೌಕರ್ಯ ಸುಧಾರಣೆಗೆ ನೀಡಲಿ. ನಾನು CSR ಸಹಾಯ ಕೇಳಿ ಹಲವು ಬಾರಿ ಅವರ ಬಳಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.
ಸರ್ಕಾರದಿಂದ ಬರುವ ಅನುದಾನದ ಕೊರತೆಯ ಬಗ್ಗೆ ಮಾತನಾಡಿದ ಶಾಸಕರು, ಸರ್ಕಾರದಿಂದ ಎಷ್ಟು ಅನುದಾನ ಸಿಗಲು ಸಾಧ್ಯ? ನಾವು ಡಾಂಬರು ಹಾಕುತ್ತೇವೆ, ಆದರೆ ಮಳೆಗೆ ರಸ್ತೆ ಮತ್ತೆ ಕೊಚ್ಚಿಹೋಗುತ್ತದೆ. ಹಾಗಾಗಿ ಸಿಎಸ್‌ಆರ್ ನಿಧಿ ನೀಡುವುದು ಅವರ ಕರ್ತವ್ಯ ಎಂದು ಸಮರ್ಥಿಸಿಕೊಂಡಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿದ ಮಜುಂದಾರ್-ಶಾ, ತಾವು ಕೇವಲ ಉದ್ಯಮಿಯಾಗಿ ಅಲ್ಲದೆ ಸಾರ್ವಜನಿಕರ ಧ್ವನಿಯಾಗಿ ಈ ವಿಷಯ ಎತ್ತುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸುರಿಯುತ್ತಿರುವ ಮಧ್ಯಂತರ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳು ಮತ್ತು ಬಿಬಿಎಂಪಿ/ಸ್ಥಳೀಯಾಡಳಿತದ ವೈಫಲ್ಯದ ವಿರುದ್ಧ ಬೆಂಗಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ರಾಜಕೀಯ ವಾಕ್ಸಮರ ಮುನ್ನೆಲೆಗೆ ಬಂದಿದೆ.