ಬೆಳಗಾವಿ: ಸವಾರರಿಗೆ ಉರುಳಾದ ಮಂಜಾದಾರ..!

By Kannadaprabha News  |  First Published Oct 25, 2022, 1:31 PM IST

ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಮಾರಕ ಮಾಂಜಾದಾರದ ಬಲೆಗೆ ಸಿಕ್ಕು ನರಳುವಂತಾಗಿದೆ


ಜಗದೀಶ ವಿರಕ್ತಮಠ

ಬೆಳಗಾವಿ(ಅ.25):  ಗಾಳಿಪಟ ಹರಿದು ಹೋಗದಂತೆ ಮಾಂಜಾದಾರವನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಈ ಮಾಂಜಾದಾರ ಮನುಷ್ಯನ ಜೀವಕ್ಕೆ ಮಾರಕವಾಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಆತಂಕದಿಂದ ಸಂಚರಿಸುವಂತಾಗಿದೆ. ಪಾಲಕರ ಹಾಗೂ ಅಧಿಕಾರಿಗಳ ಉದಾಸೀನತೆಗೆ ಇನ್ನೆಷ್ಟು ಬಲಿ ಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಕ್ಟೋಬರ್‌ ಶಾಲಾ ಕಾಲೇಜುಗಳಿಗೆ ರಜೆ ತಿಂಗಳಾಗಿದ್ದರಿಂದ ಮಕ್ಕಳು ಅತ್ಯಂತ ಉತ್ಸಾಹದಿಂದ ಗಾಳಿಪಟವನ್ನು ಬಾನಂಗಳಕ್ಕೆ ಹಾರಿ ಬಿಡುತ್ತಾರೆ. ಈ ಸಮಯದಲ್ಲಿ ಸಾಮಾನ್ಯ ದಾರವನ್ನು ಗಾಳಿಪಟಕ್ಕೆ ಅಳವಡಿಕೆ ಮಾಡಿದ್ದಲ್ಲಿ ಹರಿದು ಹೋಗಬಹುದು ಎಂಬ ಕಲ್ಪನೆಯಿಂದ ಮಾಂಜಾದಾರವನ್ನು ಬಳಕೆ ಮಾಡಲಾಗುತ್ತಿದೆ. ಈ ಗಾಳಿಪಟ ಮಕ್ಕಳಿಗೆ ಆಟವಾಗಿದ್ದರೆ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಪ್ರಾಣ ಸಂಕಟವಾಗಿ ಮಾರ್ಪಟ್ಟಿದೆ.

Latest Videos

undefined

ಸೂಕ್ತ ಕ್ರಮದ ಎಚ್ಚರಿಕೆ:

ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಮಾರಕ ಮಾಂಜಾದಾರದ ಬಲೆಗೆ ಸಿಕ್ಕು ನರಳುವಂತಾಗಿದೆ. ಅಲ್ಲದೇ, ಸುಲಭವಾಗಿ ತುಂಡಾಗದ ಮಾಂಜಾದಾರ ವಿದ್ಯುತ್‌ ತಂತಿಗಳಿಗೆ ಸಿಲುಕುತ್ತಿರುವುದರಿಂದ ಹಲವು ಕಡೆ ವಿದ್ಯುತ್‌ ಅವ್ಯವಸ್ಥೆ ಎದುರಿಸುವಂತಾಗುತ್ತಿದೆ. ಶಾರ್ಚ್‌ ಸಕ್ರ್ಯೂಟ್‌ ಕಾರಣದಿಂದ ಟ್ರಾನ್ಸಫಾರ್ಮರ್‌ ಕೂಡ ಹಾಳಾದ ಉದಾಹರಣೆಗಳಿವೆ. ಮನೆಗಳಲ್ಲಿ ಪಾಲಕ-ಪೋಷಕರು ಮಾಂಜಾ ದಾರ ಬಳಕೆಗೆ ಕಡಿವಾಣ ಹಾಕಬೇಕು ಎಂಬುವುದು ಹೆಸ್ಕಾಂ ಅಧಿಕಾರಿಗಳ ಮನವಿ ಆಗಿದೆ. ಇನ್ನೂ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವ ಮಾಂಜಾದಾರ ಬಳಕೆ ಹಾಗೂ ಮಾರಾಟಗಾರರ ಮಾಹಿತಿ ನೀಡಿದಲ್ಲಿ ಮಾಹಿತಿದಾರರ ಹೆಸರು ಗೌಪ್ಯ ಇಡುವುದರ ಜತೆಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಹಾಗೂ ಮಾರಾಟ ಹಾಗೂ ಬಳಕೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಂದಲೇ ಮಾಹಿತಿ ಕಲೆ ಹಾಕುವ ಪ್ರಯತ್ನವನ್ನು ಜಿಲ್ಲಾ ಪೊಲೀಸರು ಮಾಡುತ್ತಿದ್ದಾರೆ.

ಕಿತ್ತೂರು ಬಳಿ ಕೈಗಾರಿಕೆ ಟೌನ್‌ಶಿಪ್‌, 50 ಸಾವಿರ ನೌಕರಿ: ಸಿಎಂ ಬೊಮ್ಮಾಯಿ ಘೋಷಣೆ

ಗಾಯ, ಬಲಿ:

ಕೆಲ ಮಕ್ಕಳು ನಿಷೇಧವಿರುವ ಮಾಂಜಾ ದಾರ ಬಳಕೆ ಮಾಡುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿವೆ. ಪ್ರತಿವರ್ಷ ಮಾಂಜಾ ದಾರಕ್ಕೆ ಸಿಕ್ಕು ಹಲವಾರು ಬೈಕ್‌ ಸವಾರರು ಗಾಯಗೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸುಮಾರು ಮೂರಕ್ಕೂ ಅಧಿಕ ಜನರು ಮಾಂಜಾದಾರಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಕಳೆದ ಅ.23 ರಂದು ಬೆಳಗಾವಿ ಗಾಂಧಿನಗರದ ಬ್ರಿಜ್ಡ್‌ ಮೇಲೆ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕುಳಿತು ಹೋಗುತ್ತಿದ್ದ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ವರ್ಧನ ಬ್ಯಾಳಿ (5) ಎಂಬ ಬಾಲಕನ ಕುತ್ತಿಗೆ ಸಿಕ್ಕಿಹಾಕಿಕೊಂಡಿದ್ದ ಮಾಂಜಾದಾರದಿಂದ ಗಂಭೀರವಾಗಿ ಪೆಟ್ಟು ಬಿದ್ದು ಬಲಿಯಾಗಿದ್ದಾನೆ.

ಎಚ್ಚರ ವಹಿಸಿ:

ಮಾಂಜಾದಾರದ ಬಲೆಗೆ ಸಿಕ್ಕು ಗಾಯಗೊಂಡಿರುವವರಲ್ಲಿ ಬೆರಳೆಣಿಕೆಯಷ್ಟುಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಅವು ಬೆಳಕಿಗೆ ಬಂದಿಲ್ಲ. ಅಧಿಕಾರಿಗಳು ಮಾಂಜಾದಾರವನ್ನು ಬಳಕೆ ಮಾಡದಂತೆ ಅನೇಕ ಬಾರಿ ಸೂಚನೆ ನೀಡಿದ್ದರೂ ಪಾಲಕರು ತಮ್ಮ ಮಕ್ಕಳಿಗೆ ತಿಳಿಹೇಳುವ ಕಾರ್ಯ ಮಾಡುತ್ತಿಲ್ಲ. ಇದರ ಪರಿಣಾಮವಾಗಿ ಅಮಾಯಕ ಜನರು ಸಂಕಷ್ಟಕ್ಕೆ ಸಿಕ್ಕು ನಲಗುವಂತಾಗಿದೆ. ಇನ್ನೂ ಮುಂದಾದರೂ ಪಾಲಕರು ತಮ್ಮ ಮಕ್ಕಳಿಗೆ ಮಾಂಜಾದಾರ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಬೇಕಿದೆ.

ಅಪಾಯಕಾರಿ ಗಾಳಿಪಟ ಎಳೆಗಳ ಮಾರಾಟ ಅಥವಾ ಬಳಕೆಯ ಕುರಿತು ನಾಗರಿಕರು ಮಾಹಿತಿಯನ್ನು ಮೊ.ನಂ.9480804000 ನಂಬರ್‌ಗೆ ಹಂಚಿಕೊಳ್ಳಬೇಕು. ವಾಹನ ಸವಾರರಿಗೆ ಆಗುವ ಅನಾಹುತವನ್ನು ತಡೆಯಲು ಸಹಕರಿಸಿದ ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡುವುದರ ಜತೆಗೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ಅಪಾಯಕಾರಿ ದಾರಗಳ ಬಳಕೆ ಮತ್ತು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.  
 

click me!