
ಬೆಂಗಳೂರು ನಗರದ ಜಯನಗರದ 2ನೇ ಬ್ಲಾಕ್‌ನಲ್ಲಿ ನಡೆದ ಒಂದು ಸಣ್ಣ ಘಟನೆಯೇ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಒಬ್ಬ ತಾಯಿ ತೋರಿಸಿದ ಪ್ರಯತ್ನ, ಮಗುವಿನ ನಿರಾಶೆ ಹಾಗೂ ವ್ಯಕ್ತಿಯ ಅಸಹಕಾರ ಈ ವಿಡಿಯೋದಲ್ಲಿ ಎದ್ದು ಕಾಣುತ್ತಿದೆ.
ರಸ್ತೆ ಬದಿಯಲ್ಲಿ ಕಸ ಹಾಕುವವರ ವಿರುದ್ಧ ಜಾಗೃತಿ ಮೂಡಿಸಲು ತಾಯಿ ತಮ್ಮ ಪುಟ್ಟ ಮಗುವನ್ನೇ ಮುಂದಿಟ್ಟರು. ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ಬಳಿ ಹೋಗಿ, “ಅಂಕಲ್, ಇಲ್ಲಿ ಕಸ ಹಾಕಬೇಡಿ” ಎಂದು ಹೇಳುವಂತೆ ಮಗನಿಗೆ ತಿಳಿಸಿದರು. ಮಗುವೂ ಧೈರ್ಯವಾಗಿ ತಾಯಿಯ ಮಾತು ಪಾಲಿಸಿ, ಕಸ ಹಾಕಲು ಬಂದ ವ್ಯಕ್ತಿಯ ಬಳಿ ಹೋಗಿ ವಿನಯದಿಂದ ಮನವಿ ಮಾಡಿತು.
ಆದರೆ, ಮಗುವಿನ ಮಾತಿಗೆ ಆ ವ್ಯಕ್ತಿ ಸ್ಪಂದಿಸದೆ, ಬದಲಿಗೆ “ನಿನ್ನ ಕೆಲಸ ನೋಡ್ಕೊಂಡು ಹೋಗು” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಈ ಉತ್ತರದಿಂದ ಬಾಲಕ ನಿರಾಶೆಯಿಂದ ತಾಯಿಯ ಬಳಿಗೆ ಹಿಂದಿರುಗಿದ. ಮಗುವಿನ ಮುಖದ ನಿರಾಶೆ, ತಾಯಿಯ ಕಣ್ಣಲ್ಲಿ ಕಾಣಿಸಿಕೊಂಡ ಜವಾಬ್ದಾರಿ ಈ ದೃಶ್ಯ ಅನೇಕರು ಹಂಚಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಮಗುವಿನ ನಿರಾಶೆಯನ್ನು ಕಂಡ ತಾಯಿ ಹಿಂಜರಿಯದೆ, “ಮತ್ತೆ ಹೋಗು, ಕಸ ಹಾಕಬೇಡಿ ಎಂದು ಮತ್ತೆ ಹೇಳು” ಎಂದು ಮಗುವಿಗೆ ಉತ್ತೇಜನ ನೀಡಿದರು. ಸಮಾಜದ ಹಿತಕ್ಕಾಗಿ ಮಕ್ಕಳಿಂದಲೇ ಜಾಗೃತಿ ಮೂಡಿಸಬೇಕೆಂಬ ಅವರ ದೃಢ ನಿಲುವು ಅನೇಕ ಪೋಷಕರಿಗೆ ಮಾದರಿಯಾಗಿದೆ.
ಈ ಘಟನೆ ನಡೆದ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಅಮ್ಮ ಮತ್ತು ಮಗನ ಈ ಕಸದ ಜಾಗೃತಿ ಪ್ರಯತ್ನದ ವಿಡಿಯೋ ವೈರಲ್ ಆಗಿ, ಜನರಲ್ಲಿ ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ತಾಯಿಯ ಪ್ರಯತ್ನವನ್ನು ಶ್ಲಾಘಿಸಿದ್ದು, ಇನ್ನೂ ಕೆಲವರು ಸಾರ್ವಜನಿಕರು ಮಕ್ಕಳ ಮಾತಿಗೂ ಗೌರವ ತೋರಿಸದ ವಿಚಾರವನ್ನು ಖಂಡಿಸಿದ್ದಾರೆ.
ನಗರದ ಸ್ವಚ್ಛತೆಗೆ ಸರ್ಕಾರದ ಜೊತೆಗೆ ನಾಗರಿಕರ ಸಹಭಾಗಿತ್ವವೂ ಅತ್ಯಗತ್ಯ. ತಾಯಿ-ಮಗನ ಈ ಸಣ್ಣ ಪ್ರಯತ್ನ ಸಮಾಜದ ಎಲ್ಲರಿಗೂ ಒಂದು ಪಾಠವಾಗಿದೆ. ಬದಲಾವಣೆ ಮಾತಿನಿಂದ, ಮಕ್ಕಳಿಂದಲೇ ಆರಂಭವಾಗಬಹುದು ಎಂಬುದನ್ನು ಈ ಘಟನೆಯು ಸ್ಪಷ್ಟಪಡಿಸಿದೆ.