
ಬೆಂಗಳೂರು (ಅ.17): ನಗರದ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿನಿ ಮೇಲೆ ಜೂನಿಯರ್ ವಿದ್ಯಾರ್ಥಿಯೊಬ್ಬ ಅತ್ಯಾ*ಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಆಕೆಯ ಜೂನಿಯರ್ ವಿದ್ಯಾರ್ಥಿ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ.
ಘಟನೆ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ ಹತ್ತರಂದು (ಅಕ್ಟೋಬರ್ 10) ಅತ್ಯಾ*ಚಾರ ಪ್ರಕರಣ ನಡೆದಿದೆ ಎಂದು ನಿನ್ನೆ ವರದಿಯಾಗಿದೆ. ದೂರುದಾರರ ಪ್ರಕಾರ, ಜೂನಿಯರ್ ವಿದ್ಯಾರ್ಥಿ ಒಬ್ಬ ರೇಪ್ ಮಾಡಿದ್ದಾನೆ ಎಂಬುದು ದೂರಿನ ಸಾರಾಂಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಆರೋಪಿಯನ್ನು ಜೀವನ್ ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆಯ ಜೂನಿಯರ್ ಆಗಿದ್ದು, ಕೇವಲ ಮೂರು ತಿಂಗಳ ಹಿಂದಷ್ಟೇ ವಿದ್ಯಾರ್ಥಿನಿ ಇವನಿಗೆ ಪರಿಚಯವಾಗಿದ್ದಳು. ಕಾಲೇಜಿನ ಕಟ್ಟಡದ ಆರನೇ ಮಹಡಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಆರೋಪಿ ಜೀವನ್ ವಿದ್ಯಾರ್ಥಿನಿಯನ್ನು ಕಾಲೇಜಿನ ವಾಶ್‌ರೂಂಗೆ ಬಲವಂತವಾಗಿ ಎಳೆದೊಯ್ದು ಅತ್ಯಾ*ಚಾರ ಎಸಗಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ದಿನಾಂಕ 10 ರಂದು ಈ ಕೃತ್ಯ ನಡೆದಿದ್ದರೂ, ವಿದ್ಯಾರ್ಥಿನಿ ಭಯದಿಂದ ದೂರು ನೀಡಲು ತಡಮಾಡಿದ್ದಳು. ಘಟನೆಯನ್ನು ಆಕೆ ತನ್ನ ಮನೆಯವರ ಬಳಿ ಅಥವಾ ಸ್ನೇಹಿತರ ಬಳಿ ಹೇಳಿದ ನಂತರ, ಅವರು ಪೊಲೀಸರಿಗೆ ದೂರು ನೀಡುವಂತೆ ಪ್ರೇರೇಪಿಸಿದ್ದಾರೆ. ಅದರಂತೆ, ತಡವಾಗಿ ನಿನ್ನೆ (ಅ. 16 ರಂದು) ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತನಿಖೆ ಕೈಗೊಂಡಿದ್ದಾರೆ. ದೂರಿನ ಅನ್ವಯ, ಆರೋಪಿ ಜೀವನ್‌ನನ್ನು ತಡಮಾಡದೆ ಬಂಧಿಸಲಾಗಿದೆ.
ಈ ಘಟನೆ ರಾಜ್ಯದ ರಾಜಧಾನಿಯಲ್ಲೇ ಇರುವುದು ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕಾಲೇಜಿನಂತಹ ಶೈಕ್ಷಣಿಕ ವಾತಾವರಣದಲ್ಲಿ, ಅದರಲ್ಲೂ ಕಟ್ಟಡದ 6 ಮಹಡಿಗಳವರೆಗೂ ಭದ್ರತಾ ಸಿಬ್ಬಂದಿಯ ಕಣ್ಗಾವಲು ಇಲ್ಲದೆ ಇಂತಹ ಕೃತ್ಯ ನಡೆದಿರುವುದು ಭದ್ರತಾ ಲೋಪವನ್ನು ತೋರಿಸುತ್ತದೆ ಎಂದು ವಿದ್ಯಾರ್ಥಿ ಸಮುದಾಯ ಮತ್ತು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಂಧಿತ ಆರೋಪಿ ಜೀವನ್ ವಿರುದ್ಧ ಹನುಮಂತನಗರ ಪೊಲೀಸರು ಅತ್ಯಾ*ಚಾರ (IPC ಸೆಕ್ಷನ್ 376) ಸೇರಿದಂತೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ.