
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.01): ಲಾಕ್‌ಡೌನ್‌ನಿಂದಾಗಿ ಆಂಧ್ರಪ್ರದೇಶದ ಪುಟಪರ್ತಿಯಲ್ಲಿ ಸಿಲುಕಿದ್ದ ತಾಯಿ, ಮಗನನ್ನು ಪರಿಚಯಸ್ಥರೊಬ್ಬರು ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನದಲ್ಲಿ 271 ಕಿ.ಮೀ. ದೂರದ ಕೊಪ್ಪಳಕ್ಕೆ 14 ಗಂಟೆಗಳ ಪ್ರಯಾಣ ಮಾಡಿ ಕರೆ ತಂದಿದ್ದಾರೆ.
ಮಗನ ಹೃದಯ ಕಾಯಿಲೆಗೆ ಚಿಕಿತ್ಸೆಗೆಂದು ಹೋಗಿದ್ದ ಕೊಪ್ಪಳದ ರೇಣುಕಾ, ನವೀನ್ ಪುಟಪರ್ತಿಯಲ್ಲಿ ಸಿಲುಕಿದ್ದರು. ವಿಷಯ ತಿಳಿದ ಪರಿಚಯಸ್ಥ ಅಶೋಕ ಎನ್ನುವವರು ಭಾನುವಾರ ಬೆಳಗ್ಗೆ ಕೊಪ್ಪಳಕ್ಕೆ ಕರೆತಂದಿದ್ದಾರೆ. ಮಗ ನವೀನ್ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ. ಆಂಧ್ರದ ಪುಟಪರ್ತಿಯಲ್ಲಿ ಚಿಕಿತ್ಸೆ ದೊರೆಯುತ್ತದೆ ಎನ್ನುವ ಮಾಹಿತಿ ತಿಳಿದು ಮಗ ನವೀನ್‌ನನ್ನು ಕರೆದುಕೊಂಡು ತಾಯಿ ರೇಣುಕಾ ಅಲ್ಲಿಗೆ ಹೋಗಿದ್ದರು. ಅಲ್ಲಿ ತಲುಪಿ ಒಂದು ದಿನವೂ ಆಗಿರಲಿಲ್ಲ. ಆಗ ಅಶೋಕ್ ಎನ್ನುವವರು ತಮ್ಮ ಟಿವಿಎಸ್ ಎಕ್ಸಲ್‌ನಲ್ಲಿ ಕೊಪ್ಪಳಕ್ಕೆ ಕರೆತಂದಿದ್ದಾರೆ.
ಭಾನುವಾರ ಲಾಕ್‌ಡೌನ್: ಕೊಪ್ಪಳ ಸಂಪೂರ್ಣ ಸ್ತಬ್ಧ
ಇಡೀ ದೇಶವೇ ಲಾಕ್‌ಡೌನ್ ಆಯಿತು. ಮೊದಲು ಕೈಯಲ್ಲಿದ್ದ ಕಾಸಿನಲ್ಲಿಯೇ ಕಾಲದೂಡಿದರು. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ಖಾಸಗಿ ವಾಹನವನ್ನು ಬಾಡಿಗೆಗೆ ಕರೆತರುವಷ್ಟುಶಕ್ತವಾಗಿರಲಿಲ್ಲ. ಅಲ್ಲಿಯೇ ಅವರಿವರ ಸಹಾಯದಿಂದ ಕಾಲ ದೂಡುತ್ತಿದ್ದರು. ಇವರು ತಂಗಿದ್ದ ರೂಮ್ ಬಳಿ ಇದ್ದ ಅಶೋಕ ಎನ್ನುವವರಿಗೆ ವಿಷಯ ಗೊತ್ತಾಯಿತು. ತನ್ನಲ್ಲಿದ್ದ ಟಿವಿಎಸ್ ಎಕ್ಸೆಲ್‌ನಲ್ಲಿ ಅವರನ್ನು ಕೊಪ್ಪಳಕ್ಕೆ ಭಾನುವಾರ ಕರೆತಂದಿದ್ದಾರೆ. ಮಂಗಳವಾರ ಮತ್ತೆ ಮರಳಿ ತನ್ನೂರಿಗೆ ಪ್ರಯಾಣ ಬೆಳೆಸಲಿದ್ದಾರೆ.