ಕರುಳುಬೇನೆಯಿಂದ ಮಗ ಸಾವು: ಅಂತ್ಯಕ್ರಿಯೆಗೂ ಹಣವಿಲ್ಲದೇ ಪರದಾಡಿದ ತಾಯಿ

By Kannadaprabha NewsFirst Published Apr 15, 2020, 9:40 AM IST
Highlights
ಮಗನ ಅಂತ್ಯಕ್ರಿಯೆಗೆ ತಾಯಿ ಗೋಳಾಟ| ಶವಸಂಸ್ಕಾರಕ್ಕೂ ಪರದಾಡಿದ ತಾಯಿ| ಊರಿಗೆ ತೆಗೆದುಕೊಂಡು ಹೋಗಲೂ ಆಕೆ ಬಳಿ ಹಣವಿರಲಿಲ್ಲ|
ಬೆಳಗಾವಿ(ಏ.15): ಲಾಕ್‌ಡೌನ್‌ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವಿಕಲಚೇತನ ಮಗನ ಶವ ತಮ್ಮೂರಿಗೆ ತೆಗೆದುಕೊಂಡು ಹೋಗಲಾರದೇ, ಅಂತ್ಯಕ್ರಿಯೆಗೂ ಹಣವಿಲ್ಲದೇ ತಾಯಿ ಮತ್ತು ಸಹೋದರಿ ಏನು ಮಾಡದ ಸ್ಥಿತಿಯಲ್ಲಿ ಗೋಳಾಡಿದ ಮನಕಲಕುವ ಘಟನೆ ನಗರದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ಸಾಗರ ಸಿಂಗೆ (32) ವಿಕಲಚೇತನನಾಗಿದ್ದು, ಅನಾರೋಗ್ಯದ (ಕರಳುಬೇನೆ) ಹಿನ್ನೆಲೆಯಲ್ಲಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ. ಈತನ ವೃದ್ಧ ತಾಯಿ ಮತ್ತು ಸಹೋದರಿಗೆ ಧಿಕ್ಕೆ ತೋಚದಂತಾಗಿದೆ. ಮಗನ ಶವ ತಮ್ಮೂರಿಗೆ ತೆಗೆದುಕೊಂಡು ಹೋಗಬೇಕೆಂದರೆ ಇವರ ಬಳಿ ಹಣವಿಲ್ಲ. ವಾಹನಗಳ ಸೌಲಭ್ಯವೂ ಇಲ್ಲ. ಇನ್ನು ನಗರದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದರೂ ಹಣ ಇಲ್ಲ. ಮುಂದೇನು ಮಾಡಬೇಕು ಎಂದು ಗೋಳಾಡುತ್ತಿದ್ದ ತಾಯಿ ಮತ್ತು ಸಹೋದರಿ ಸ್ಥಿತಿ ಎಂತಹವರ ಕಲ್ಲು ಹೃದಯವನ್ನು ಕರಗಿಸುವಂತಿತ್ತು.
ಜಿಲ್ಲಾಸ್ಪತ್ರೆಯ ಶವವಾಹನದಲ್ಲಿ ಶವವನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ತರಲಾಯಿತು. ಚಿತಾಗಾರಕ್ಕೆ ಬಂದಾಗ ತಾಯಿಗೆ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಬೇಕು ಎನ್ನುವ ಧರ್ಮಸಂಕಟ ಎದುರಾಯಿತು. ಅವರ ಬಳಿ ಚಿತಾಗಾರಕ್ಕೆ ಕಟ್ಟಿಗೆ ಖರೀದಿಸಲು ಹಣ ಕೂಡ ಇರಲಿಲ್ಲ. 

ಕಾಪಾಡು ಭಗವಂತ: ಕೊರೋನಾ ನಿಗ್ರಹಕ್ಕೆ ದೇವರ ಕುದುರೆ ಮೊರೆ!

ಇದರಿಂದಾಗಿ ಸ್ಮಶಾನದಲ್ಲೇ ಇದ್ದ ಶವ ಸುಟ್ಟಿದ್ದ ಅರೆ ಬರೆ ಸುಟ್ಟ ಕಟ್ಟಿಗೆಗಳ ತುಂಡುಗಳನ್ನೇ ಆರಿಸಿಕೊಂಡು ಬಂದು ಟ್ರೆ ಸ್ಟಾಂಡ್‌ನಲ್ಲಿ ಹಾಕಿದಳು. ಬಳಿಕ ತಂಗಿಯಿಂದಲೇ ಮಗನ ಶವಕ್ಕೆ ಅಗ್ನಿ ಸ್ಪರ್ಶ ಮಾಡಿಸಲಾಯಿತು. ಈ ವಿಷಯ ಅರಿತ ಪತ್ರಕರ್ತ ದಿಲೀಪ ಕಕುರಂದವಾಡೆ ಮತ್ತು ಕನ್ನಡ ಹೋರಾಟಗಾರ ಗಣೇಶ ರೋಕಡೆ ಸ್ಥಳಕ್ಕೆ ಬಂದು ತಾಯಿ, ಮಗಳ ನೆರವಿಗೆ ನಿಂತರು. ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸಂಕಷ್ಟದಲ್ಲಿದ್ದ ಈ ತಾಯಿ- ಮಗಳಿಗೆ ವಾಹನ ವ್ಯವಸ್ಥೆ ಮಾಡಿ, ಅವರ ಊರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
 
click me!