ಡೆಂಘೀ ಜ್ವರ: ಪೊಲೀ​ಸ​ರಿಗೆ ಹೆದರಿ ಒಂದು ದಿನ ಮನೆ​ಯಲ್ಲೇ ಮಗು​ವಿ​ಟ್ಟು​ಕೊಂಡ ಪಾಲ​ಕ​ರು!

Kannadaprabha News   | Asianet News
Published : Apr 15, 2020, 08:57 AM ISTUpdated : Jul 08, 2020, 07:04 PM IST
ಡೆಂಘೀ ಜ್ವರ: ಪೊಲೀ​ಸ​ರಿಗೆ ಹೆದರಿ ಒಂದು ದಿನ ಮನೆ​ಯಲ್ಲೇ ಮಗು​ವಿ​ಟ್ಟು​ಕೊಂಡ ಪಾಲ​ಕ​ರು!

ಸಾರಾಂಶ

ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ ಸ್ಪಷ್ಟ​ಣೆ| ಮತ್ತೋರ್ವ ಬಾಲಕಿಗೆ ಡೆಂಘೀ ಜ್ವರ| ಕೂಡ್ಲಿಗಿಗೆ ಬಂದ ಪತ್ರಕರ್ತರೊಬ್ಬರ ಮುಂದೆ ತಮ್ಮ ಅಳಲು ತೋಡಿಕೊಂಡ ಬಾಲಕಿಯ ಪೋಷಕರು| ಹೊಸಪೇಟೆಗೆ ಮಗಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸಿದ ಪತ್ರಕರ್ತ|

ಕೂಡ್ಲಿಗಿ(ಏ.15): ಡೆಂಘೀ ಜ್ವರಕ್ಕೆ ಸಕಾಲಕ್ಕೆ ಅಗತ್ಯ ಚಿಕಿತ್ಸೆ ಲಭಿಸದೇ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಬಾಲಕಿಯೋರ್ವಳು ಮೃತಳಾದ ಬೆನ್ನಲ್ಲಿಯೇ ಅದೇ ಗ್ರಾಮದ ಇನ್ನೋರ್ವ ಬಾಲಕಿಯಲ್ಲೂ ಈ ಜ್ವರ ಕಾಣಿಸಿಕೊಂಡಿದೆ.

ಬಾಲಕಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು ಹೊಸಪೇಟೆ ಆಸ್ಪತ್ರೆಗೆ ದಾಖಲಿಸುವಂತೆ ಸ್ಥಳೀಯ ವೈದ್ಯರು ಸೂಚಿಸಿದ್ದರೂ ಪೊಲೀಸರಿಗೆ ಹೆದರಿ ಪೊಷಕರು ಒಂದು ದಿನ ಮನೆಯಲ್ಲಿಯೇ ಮಗುವನ್ನು ಉಳಿಸಿಕೊಂಡಿದ್ದು, ಬಳಿಕ ಸೋಮವಾರ ದಾಖಲಿಸಿದ್ದಾರೆ.

ಕೊರೋನಾ ಭೀತಿ: ರಕ್ಷಣೆಗೂ ಸೈ ಜಾಗೃತಿಗೂ ಜೈ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ!

ಕೂಡ್ಲಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಂಡ್ರಿ ಗ್ರಾಮದ ಬಸವರಾಜ ಅವರ 6 ವರ್ಷದ ಪುತ್ರಿ ಬಸಮ್ಮಗೆ ಡೆಂಘೀ ಕಾಣಿಸಿಕೊಂಡಿದ್ದು, ಭಾನುವಾರ ಸಂಡೂರಿನ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ತೋರಿಸಿದ್ದಾರೆ. ವೈದ್ಯರು ಡೆಂಘೀ ಇರುವುದನ್ನು ದೃಢಪಡಿಸಿದ್ದಲ್ಲದೇ ಔಷಧ ನೀಡಿ ಹೊಸಪೇಟೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಹೊಸಪೇಟೆ ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ಬಾಡಿಗೆ ವಾಹನಗಳು ಬರಲು ಸಿದ್ಧವಿಲ್ಲ. ಪೊಲೀಸರಿಂದ ಅನುಮತಿ ತೆಗೆದುಕೊಂಡು ಬನ್ನಿ. ಇಲ್ಲವಾದರೆ ನಮ್ಮ ಗಾಡಿಯನ್ನು ಸೀಜ್‌ ಮಾಡುತ್ತಾರೆ ಎಂದು ವಾಹನ ಮಾಲೀಕರು ತಿಳಿಸಿದ್ದಾರೆ. ಇದರಿಂದ ಬಸವರಾಜ ಭಾನುವಾರ ಮನೆಯಲ್ಲೇ ಮಗುವನ್ನು ಇಟ್ಟುಕೊಂಡಿದ್ದಾರೆ.

ಸೋಮವಾರ ಕೂಡ್ಲಿಗಿಗೆ ಬಂದ ಬಸವರಾಜ ಪತ್ರಕರ್ತರೊಬ್ಬರ ಮುಂದೆ ತಮ್ಮ ಅಳಲು ಹೇಳಿಕೊಂಡಿದ್ದು, ಅವರು ಪೊಲೀಸರ ಬಳಿ ಮಾತನಾಡಿ ಹೊಸಪೇಟೆಗೆ ಮಗಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸಿದ್ದಾರೆ.

ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ 

ಸಕಾಲಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಬಾಲಕಿ ಸ್ನೇಹಾ (13) ಮೃತಪಟ್ಟಿರುವ ಪ್ರಕರಣ ವೈದ್ಯರ ನಿರ್ಲಕ್ಷ್ಯದಿಂದ ಆದದ್ದಲ್ಲ ಎಂದು ತಿಳಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜನಾರ್ದನ, ಬಾಲಕಿ ಖಾಸಗಿಯಾಗಿ ಚಿಕಿತ್ಸೆ ಪಡೆದಿರುವ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಾಲಕಿ ಕೊನೆ ಸಮಯದಲ್ಲಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿರುವುದರಿಂದ ಚಿಕಿತ್ಸೆಯ ಪೂರ್ಣ ವರದಿ ನೀಡುವಂತೆ ವಿಮ್ಸ್‌ ನಿರ್ದೇಶಕರಿಗೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಸಂಡೂರು ತಾಲೂಕಿನ ಬಂಡ್ರಿಯ ಸ್ನೇಹಾ ಆರೋಗ್ಯದಲ್ಲಿ ಏರುಪೇರಾದಾಗ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಡೆಂಘೀ ಜ್ವರ ನಿಯಂತ್ರಣಕ್ಕೆ ಬಂದಿಲ್ಲ. ಬಳಿಕ ಸಂಡೂರು ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾಳೆ. ರೋಗ ಉಲ್ಬಣವಾಗಿದ್ದು ವಿಮ್ಸ್‌ಗೆ ದಾಖಲಾಗುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ. ಅವರು ಹೊಸಪೇಟೆಗೆ ಹೋಗಿ ಚಿಕಿತ್ಸೆಗೆ ಸುತ್ತಾಡಿ ಕೊನೆಗೆ ವಿಮ್ಸ್‌ಗೆ ಬಂದಿದ್ದಾರೆ. ವಿಮ್ಸ್‌ಗೆ ಬರುವ ಹೊತ್ತಿಗೆ ಬಾಲಕಿಯ ಆರೋಗ್ಯ ಗಂಭೀರ ಹಂತ ತಲುಪಿತ್ತು, ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದಿರುವ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ ಎಂದರು.
 

PREV
click me!

Recommended Stories

ಸಮಾಜ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯ : ಡಾ.ಸಿ.ಎನ್‌.ಮಂಜುನಾಥ್‌
ಬೆಂಗಳೂರು ನಗರದ 10 ಹೆರಿಗೆ ಆಸ್ಪತ್ರೆಗಳು ಬಂದ್‌ : ಸಾರ್ವಜನಿಕರು ಪರದಾಟ