* ಕೆಲವು ಗಂಟೆಗಳ ಅಂತರದಲ್ಲಿ ಒಂದೇ ದಿನ ತಾಯಿ ಮಗ ಕೋವಿಡ್‌ಗೆ ಬಲಿ
* ಶೋಕಸಾಗರದಲ್ಲಿ ಮುಳುಗಿದ ಇಡೀ ಗ್ರಾಮ
* ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಘಟನೆ
ಬ್ಯಾಡಗಿ(ಮೇ.29): ತಾಯಿ ಹಾಗೂ ಮಗ ಒಂದೇ ದಿನ ಕೋವಿಡ್‌ಗೆ ಬಲಿಯಾದ ಮನ ಕಲಕುವ ಘಟನೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಚಿಕ್ಕಣಜಿ ಗ್ರಾಮದ ನಿವಾಸಿಗಳಾದ ಲಲಿತವ್ವ ಬನ್ನಿಹಟ್ಟಿ(50), ನಾಗರಾಜ್ ಬನ್ನಿಹಟ್ಟಿ(30) ಕೋವಿಡ್‌ಗೆ ಬಲಿಯಾದ ತಾಯಿ ಮಗ.
ನಾಗರಾಜ ಬನ್ನಿಹಟ್ಟಿ ಅವರಿಗೆ ಕಳೆದ ಮೇ 21ರಂದು ಕೋವಿಡ್ ಸೋಂಕು ತಗುಲಿತ್ತು. ಅವರನ್ನು ಹಿರೇಕೆರೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹಾವೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕೆಲ ದಿನ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲಿಯೂ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 7 ದಿನಗಳ ನಿರಂತರ ಜೀವನ್ಮರಣದ ಹೋರಾಟದ ನಂತರ ಗುರುವಾರ ತಡರಾತ್ರಿ ನಾಗರಾಜ ನಿಧನ ಹೊಂದಿದ್ದಾರೆ.
ಹಾವೇರಿ ಮೆಗಾ ಡೇರಿಗೆ ಅಸ್ತು: ಹೈನುಗಾರರಲ್ಲಿ ಸಂತಸ
ಅವರ ತಾಯಿಗೂ ಕೋವಿಡ್ ದೃಢಪಟ್ಟಿದ್ದು ಅವರನ್ನು ಹಾವೇರಿಯ ಹೆಗ್ಗೇರಿ ಹಾಗೂ ಬ್ಯಾಡಗಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಶುಕ್ರವಾರ ಬೆಳಗಿನ ಜಾವ ಲಲಿತಮ್ಮ ಸಹ ಹೊಂದಿದ್ದಾರೆ.
ಕೆಲವು ಗಂಟೆಗಳ ಅಂತರದಲ್ಲಿ ಒಂದೇ ದಿನ ತಾಯಿ ಮಗ ಕೋವಿಡ್‌ಗೆ ಬಲಿಯಾಗಿದ್ದು, ಇಡೀ ಚಿಕ್ಕಣಜಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona